ADVERTISEMENT

ದೊಡ್ಡಬಳ್ಳಾಪುರ: ಮಧ್ಯವರ್ತಿಗಳ ಹಾವಳಿಗೆ ಆಕ್ರೋಶ

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಖಂಡಿಸಿ ಫೆ.15ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 0:53 IST
Last Updated 9 ಫೆಬ್ರುವರಿ 2021, 0:53 IST
ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಮಾತನಾಡಿದರು
ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಮಾತನಾಡಿದರು   

ದೊಡ್ಡಬಳ್ಳಾಪುರ: ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ, ಕಂದಾಯ ದಾಖಲಾತಿಗಳ ತಿದ್ದಪಡಿ ಪ್ರಕರಣಗಳ ಅನಗತ್ಯ ವಿಳಂಬ, ಭೂಮಿ ಬೆಲೆ ಆಧಾರದ ಮೇಲೆ ತಿದ್ದುಪಡಿಗೆ ಲಕ್ಷಗಟ್ಟಲೇ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪ್ರಾಂತ ರೈತ ಸಂಘದ ಮುಖಂಡರು ಆರೋಪಿಸಿದರು.

ಈ ಕುರಿತು ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ವೀರಣ್ಣ, ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಹೊಸಕೋಟೆ, ನೆಲಮಂಗಲ ತಾಲ್ಲೂಕು ರೈತರು ಭೂದಾಖಲೆಗಳ ತಿದ್ದುಪಡಿಗೆ ವರ್ಷಗಟ್ಟಲೇ ತಿರುಗಿದರೂ ಹಣ ನೀಡದೆ ದಾಖಲೆಗಳು ತಿದ್ದುಪಡಿಯಾಗುತ್ತಿಲ್ಲ. ಒಂದು ತಿದ್ದುಪಡಿಗೆ ₹5ಲಕ್ಷ ಹಣ ನೀಡುವಂತೆ ಒತ್ತಾಯಿಸಲಾಗುತ್ತಿದೆ. ತಿದ್ದುಪಡಿ ಅಧಿಕಾರ ತಹಶೀಲ್ದಾರ್ ವ್ಯಾಪ್ತಿಯಿಂದ ಉಪ ವಿಭಾಗಾಧಿಕಾರಿಗೆ ನೀಡಿರುವುದರಿಂದ ಪ್ರತಿ ತಾಲ್ಲೂಕಿನ ರೈತರು ಉಪವಿಭಾಗಾಧಿಕಾರಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಅಧಿಕಾರ ವಿಕೇಂದ್ರಿಕರಣವನ್ನು ಕೇಂದ್ರೀಕರಿಸುವ ಮೂಲಕ ರೈತರಲ್ಲಿ ಹಣ ವಸೂಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದ ಬಡ ರೈತರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಉದ್ದೇಶಪೂರ್ವಕವಾಗಿ ದಾಖಲೆಗಳಲ್ಲಿ ಹೆಸರು, ಸರ್ವೇ ನಂಬರು ತಪ್ಪಾಗಿ ದಾಖಲಿಸಿ ತಿದ್ದುಪಡಿ ಹೆಸರಿನಲ್ಲಿ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಸೂಕ್ತಕ್ರಮಕ್ಕೆ ಮುಂದಾಗಬೇಕು. ತಿದ್ದುಪಡಿ ಅಧಿಕಾರ ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ನೀಡಬೇಕು ಎಂದು
ಒತ್ತಾಯಿಸಿದರು.

ADVERTISEMENT

ವಕೀಲ ರುದ್ರಾರಾಧ್ಯ ಮಾತನಾಡಿ, ಕಂದಾಯ ವ್ಯಾಜ್ಯಗಳನ್ನು ಉಪವಿಭಾಗಾಧಿಕಾರಿ, ತಹಶೀಲ್ದಾರ್ ವ್ಯಾಪ್ತಿಯಿಂದ ತೆಗೆದು ಸೂಕ್ತವಾಗಿ ನಿರ್ವಹಿಸಲು ಕಂದಾಯ ನ್ಯಾಯಾಧೀಕರಣ ಸ್ಥಾಪನೆ ಮಾಡಬೇಕಿದೆ ಎಂದರು.

ಫೆ.15ರಂದು ಪ್ರತಿಭಟನೆ: ವರ್ಷಗಟ್ಟಲೇ ತಿದ್ದುಪಡಿ ಪ್ರಕರಣ ಉಳಿಕೆಯಾಗುತ್ತಿರುವುದರ ವಿರುದ್ಧ ಫೆ.15ರಂದು ಉಪವಿಭಾಗಾಕಾರಿ ಕಚೇರಿ ಮುಂದೆ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖಂಡರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ಮುಖಂಡರಾದ ವಿಜಯಕುಮಾರ್,ರವಿಕುಮಾರ್,ರಮೇಶ್, ರಾಮಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.