ADVERTISEMENT

ಸೂಲಿಬೆಲೆ: ರೈತರಿಂದ ಕೆಐಡಿಬಿ ಕಾಮಗಾರಿಗೆ ಅಡ್ಡಿ, ಪರಿಹಾರಧನಕ್ಕೆ ಆಗ್ರಹ

ಉಪವಿಭಾಗಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 15:29 IST
Last Updated 7 ಸೆಪ್ಟೆಂಬರ್ 2020, 15:29 IST
ಹೊಸಕೋಟೆ ತಾಲ್ಲೂಕಿನ ಕಂಬಳೀಪುರದಲ್ಲಿ ನಡೆಯುತ್ತಿರುವ ಕೆಐಡಿಬಿ ಕಾಮಗಾರಿ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ ಭೇಟಿ ನೀಡಿ, ಕಾಮಗಾರಿಗೆ ಅಡ್ಡಿಪಡಿಸಿದ ರೈತರ ಮನವೊಲಿಸಲು ಪ್ರಯತ್ನಿಸಿದರು.
ಹೊಸಕೋಟೆ ತಾಲ್ಲೂಕಿನ ಕಂಬಳೀಪುರದಲ್ಲಿ ನಡೆಯುತ್ತಿರುವ ಕೆಐಡಿಬಿ ಕಾಮಗಾರಿ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ ಭೇಟಿ ನೀಡಿ, ಕಾಮಗಾರಿಗೆ ಅಡ್ಡಿಪಡಿಸಿದ ರೈತರ ಮನವೊಲಿಸಲು ಪ್ರಯತ್ನಿಸಿದರು.   

ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನ ಕಂಬಳೀಪುರ ಗ್ರಾಮದ ರೈತರು ಪರಿಹಾರ ಧನಕ್ಕೆ ಆಗ್ರಹಿಸಿ, ಸರ್ವೆ ನಂಬರ್ 127ರಲ್ಲಿ ನಡೆಯುತ್ತಿರುವ ಕೆಐಡಿಬಿ (‘ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’) ಕಾಮಗಾರಿಗೆ ಅಡ್ಡಿಪಡಿಸಿದರು. ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ ಭೇಟಿ ನೀಡಿ, ರೈತರ ಮನವೊಲಿಸಲು ಪ್ರಯತ್ನಿಸಿದರು.

ಕಂಬಳೀಪುರ ಗ್ರಾಮದ ಸರ್ವೆ ನಂಬರ್ 127 ಸರ್ಕಾರಿ ಗೋಮಾಳವಾಗಿದ್ದು, ಒಟ್ಟು 283.16 ಎಕರೆ ವಿಸ್ತೀರ್ಣ ಹೊಂದಿದೆ. 2-3 ತಲೆಮಾರಿನಿಂದ ಕಂಬಳೀಪುರ ಗ್ರಾಮದವರು ಈ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದರು. ಸಾಗುವಳಿ ಚೀಟಿಗಾಗಿ 1991, 92ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, 2019ರಲ್ಲಿ ಅರ್ಜಿಗಳನ್ನು ವಜಾ ಮಾಡಲಾಗಿದೆ ಎನ್ನುತ್ತಾರೆ ಸ್ಥಳೀಯರು.

‘283.16 ಎಕರೆಯಲ್ಲಿ, 150 ಎಕರೆ ಭೂಮಿಯನ್ನು, ಕೆಐಡಿಬಿ (‘ರಾಜೀವ್ ಗಾಂಧಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ’ ಪೆಟ್ರೋಲಿಯಂ ಸಂಸ್ಥೆ) ಗೆ 2014ನೇ ಇಸವಿಯಲ್ಲಿ ನೀಡಲಾಗಿದೆ. ಉಳಿಕೆ ಜಮೀನಿನಲ್ಲಿ 161 ಜನ ಭೂಮಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಬಿಬಿಎಂಪಿ ವ್ಯಾಪ್ತಿಗೆ ಬರುವುದರಿಂದ ಅರ್ಜಿಗಳನ್ನು ವಜಾ ಮಾಡಲಾಯಿತು’ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

‘ಸ್ವಾಧೀನ ಕಾರ್ಯ ಆರಂಭಗೊಂಡ ಸಂದರ್ಭದಲ್ಲಿ ರಾಜಕಾರಣಿಗಳು, ಗ್ರಾಮಸ್ಥರಿಗೆ ಸರ್ಕಾರದಿಂದ ಪರಿಹಾರ ಧನ ಕೊಡಿಸುವುದಾಗಿ ಆಶ್ವಾಸನೆ ನೀಡಿದ ಕಾರಣ, ಗ್ರಾಮದ ಕೆಲವು ರೈತರು ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಬಿಟ್ಟು ಕೊಡಲು ಒಪ್ಪಿಕೊಂಡಿದ್ದರು. ಆದರೆ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಪರಿಹಾರ ಸಿಗದಿರುವುದರಿಂದ ಕಾಮಗಾರಿ ಮಾಡದಂತೆ ತಡೆಯಲಾಗಿದೆ’ ಎಂದರು ಗ್ರಾಮದ ಮುನಿಯಪ್ಪ.

ಸ್ವ-ಉದ್ಯೋಗಕ್ಕೆ ಪೆಟ್ಟು: ಸ್ಥಳೀಯರಾದ ಮಂಜುನಾಥ್ ಪ್ರತಿಕ್ರಿಯಿಸಿ, ‘ಕಂಬಳೀಪುರ ಗ್ರಾಮದಲ್ಲಿ ಪಶುಸಂಗೋಪನೆ ಮೂಲವನ್ನು ನಂಬಿಕೊಂಡು ಜೀವನ ನಡೆಸುವವರ ಸಂಖ್ಯೆ ಹೆಚ್ಚಾಗಿದ್ದು, ಪ್ರತಿ ದಿನ ಸುಮಾರು 2 ಸಾವಿರ ಲಿಟರ್ ಹಾಲು ಉತ್ಪಾದನೆ ಆಗುತ್ತದೆ. ಕೆಐಡಿಬಿಗೆ ಭೂಮಿಯನ್ನು ಹಸ್ತಾಂತರಿಸಿರುವುದರಿಂದ ಗೋಮಾಳವನ್ನು ನಂಬಿಕೊಂಡು ಹೈನುಗಾರಿಕೆ ನಡೆಸುತ್ತಿರುವವರ ಸ್ವ-ಉದ್ಯೋಗಕ್ಕೆ ಪೆಟ್ಟಾಗಿದೆ’ ಎಂದರು.

ಹೊಸಕೋಟೆ ತಹಶೀಲ್ದಾರ್ ಗೀತಾ, ಸೂಲಿಬೆಲೆ ರಾಜಸ್ವ ನಿರೀಕ್ಷಕ ವಲೀಜಾನ್, ಗ್ರಾಮ ಲೆಕ್ಕಾಧಿಕಾರಿ ರಫೀಖ್ ಹಾಗೂ ಸೂಲಿಬೆಲೆ ಪೊಲೀಸ್ ಠಾಣೆ ಎ.ಎಸ್.ಐ ಪರಮೇಶ್ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.