ADVERTISEMENT

ದೊಡ್ಡಬಳ್ಳಾಪುರ | ಮಾರುಕಟ್ಟೆ ಸ್ಥಳಾಂತರಕ್ಕೆ ಹೂ ವ್ಯಾಪಾರಿಗಳ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 2:53 IST
Last Updated 28 ಆಗಸ್ಟ್ 2023, 2:53 IST
ದೊಡ್ಡಬಳ್ಳಾಪುರ ನಗರದ ಕೆಎಸ್‌ಆರ್‌ಟಿ ಬಸ್‌ ನಿಲ್ದಾಣ ಸಮೀಪದ ಗಲ್ಲಿ ರಸ್ತೆಯಲ್ಲಿ ಈಗ ಇರುವ ಹೂವು ಮಾರುಕಟ್ಟೆ
ದೊಡ್ಡಬಳ್ಳಾಪುರ ನಗರದ ಕೆಎಸ್‌ಆರ್‌ಟಿ ಬಸ್‌ ನಿಲ್ದಾಣ ಸಮೀಪದ ಗಲ್ಲಿ ರಸ್ತೆಯಲ್ಲಿ ಈಗ ಇರುವ ಹೂವು ಮಾರುಕಟ್ಟೆ    

ನಟರಾಜ ನಾಗಸಂದ್ರ

ದೊಡ್ಡಬಳ್ಳಾಪುರ: ಹೂ ಬೆಳೆಗಾರರು ಹಾಗೂ ಮಾರಾಟಗಾರರ ಅನುಕೂಲಕ್ಕಾಗಿ ಎಂಪಿಎಂಸಿ ಆವರಣದಲ್ಲಿ ನಿರ್ಮಿಸಿರುವ ಹೂವಿನ ಮಾರುಕಟ್ಟೆಗೆ ಹೂವಿನ ವ್ಯಾಪಾರ ಸಂಪೂರ್ಣ ಪ್ರಯಾಣದಲ್ಲಿ ಸ್ಥಳಾಂತರ ಆಗಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಈ ಹಿಂದೆ ನಗರದ ಬಸ್‌ ನಿಲ್ದಾಣದ ಬಳಿ ಇರುವ ಕಿಷ್ಕಿಂಧೆ ಅಂತಹ ಜಾಗದಲ್ಲಿ ಹೂ ವ್ಯಾಪಾರ ನಡೆಯುತ್ತಿತು. ಕಳೆದ ವಾರದ ಎಪಿಎಂಸಿ ಆವರಣದಲ್ಲಿ ಹೂವಿನ ಮಾರುಕಟ್ಟೆ ಆರಂಭಿಸಲಾಗಿದೆ. ಆದರೆ ಅಲ್ಲಿ ರೈತರು ಮಾತ್ರ ಮಳಿಗೆ ತೆರೆದಿದ್ದಾರೆ. ತಮ್ಮ ಹಿಡಿತ ತಪ್ಪಿ ಹೋಗುತ್ತದೆ ಎಂಬ ಕಾರಣಕ್ಕೆ ವ್ಯಾ‍ಪಾರಿಗಳು ಹೊಸ ಮಾರುಕಟ್ಟೆಗೆ ಸ್ಥಳಾಂತರಗೊಳ್ಳಲು ನಿರಾಸಕ್ತಿ ತೋರುತ್ತಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಹೂವು ಬೆಳೆಯುವ ಪ್ರದೇಶದ ವಿಸ್ತೀರ್ಣಕ್ಕೆ ಹಾಗೂ ಮಾರಾಟಕ್ಕೆ ತಕ್ಕಷ್ಟು ವಿಶಾಲವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಹೈರಾಣಗೊಂಡಿದ್ದ ರೈತರಿಗೆ ಇದು ಹೊಸ ತಲೆ ನೋವಾಗಿ ಪರಿಣಮಿಸಿದೆ. ಎರಡೆರಡು ಕಡೆ ಹೂ ವ್ಯಾಪಾರ ನಡೆಯುತ್ತಿರುವುದರಿಂದ ಹಾಗೂ ಗ್ರಾಹಕರು ಹಳೆ ಮಾರುಕಟ್ಟೆಗೆ ಹೋಗುವುದರಿಂದ ನಿರೀಕ್ಷಿತ ವ್ಯಾಪಾರ ಆಗುತ್ತಿಲ್ಲ ಎನ್ನುವುದು ಹೂ ಬೆಳೆಗಾರರ ಅಳಲು.

ಸಾಸಲು ಹೋಬಳಿ ಒಂದರಲ್ಲೇ ಎರಡು ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ಸುಗಂಧರಾಜ ಹೂವು ಬೆಳೆಯಲಾಗುತ್ತಿದೆ. ಇಲ್ಲಿನ ಬಹುತೇಕ ಹೂವು ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಮಾರುಕಟ್ಟೆಗೆ ಹೋಗುತ್ತಿದೆ. ಪ್ರತಿ ದಿನ ಬೆಳಿಗ್ಗೆ 7 ಗಂಟೆ ಸಮಯಕ್ಕೆ ಗ್ರಾಮಗಳಿಗೆ ಬರುವ ಟೆಂಪೊಗಳಲ್ಲಿ ರೈತರಿಂದ ಸಂಗ್ರಹಿಸುವ ಹೂವುಗಳನ್ನು ವ್ಯಾಪಾರಸ್ಥರು ಕೊಂಡೊಯ್ಯುತ್ತಾರೆ. ಆದರೆ ಬೆಲೆಯನ್ನು ಮಾತ್ರ ಮಾರುಕಟ್ಟೆಯಲ್ಲಿ ನಡೆಯುವ ಹರಾಜಿನ ಬೆಲೆಯನ್ನು ಮರು ದಿನ ನಮೋದಿಸಿಕೊಡಲಾಗುತ್ತದೆ.

ಕಸಬಾ ಹಾಗೂ ತೂಬಗೆರೆ ಹೋಬಳಿಯಲ್ಲಿ ಮಾರಿಗೋಲ್ಡ್‌, ಸೇವಂತಿಗೆ, ಸೆಂಟೆಲ್‌, ಮಾರ್‌ಬುಲ್‌, ಕಕಾಡ, ಕನಕಾಂಬರ ಸೇರಿದಂತೆ ವಿವಿಧ ಜಾತಿಯ ಹೂವುಗಳನ್ನು ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೂವಿಗೆ ಬೇಡಿಕೆ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ರೈತರು ಹೂವು ಕೃಷಿಯತ್ತ ಒಲವು ತೋರಿದ್ದಾರೆ. ಆದರೆ ಮಾರುಕಟ್ಟೆಗೆ ಮಾತ್ರ ದೂರದ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆಯನ್ನು ಅವಲಂಭಿಸುವಂತಾಗಿದೆ.

ಮಾರುಕಟ್ಟೆ ಸ್ಥಳ ಬದಲಾವಣೆ ಅಗತ್ಯ

ಇಲ್ಲಿನ ಎಪಿಎಂಸಿ ಮಾರುಕಟ್ಟೆ ಹಿಂದೂಪುರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಮೂರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಒಂದೇಡೆ ಸೇರುವ ಆಯಕಟ್ಟಿನ ಸ್ಥಳದಲ್ಲೇ ಇದೆ. ಇಲ್ಲಿಂದ ಬಸ್‌, ಲಾರಿ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳು ಇವೆ. ಆದರೆ ಕೆಲವೇ ವ್ಯಾಪಾರಿಗಳು ತಮ್ಮ ಸ್ವಾರ್ಥಕ್ಕಾಗಿ ಎಪಿಎಂಸಿಯಲ್ಲಿ ಮಾರುಕಟ್ಟೆ ಆವರಣದಲ್ಲಿ ಹೂವು ಮಾರುಕಟ್ಟೆಗೆ ಬಂದಿಲ್ಲ.  ಇದರಿಂದ ರೈತರ ಹೂವಿಗೆ ಸೂಕ್ತ ಬೆಲೆ ದೊರೆಯದೆ ವಂಚನೆ ಆಗುತ್ತಿದೆ ಎನ್ನುವುದು ಹೂವು ಬೆಳೆಗಾರರ ಆರೋಪ.

ತರಕಾರಿ ಮಾರುಕಟ್ಟೆಯಂತೆಯೇ ಹೂವು ಮಾರುಕಟ್ಟೆಯನ್ನು ಎಪಿಎಂಸಿ ಆವರಣದಲ್ಲಿ ಅಭಿವೃದ್ಧಿಗೊಳಿಸಬೇಕು. ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಹೂವು ಬೆಳೆಗಾರರ ಆಗ್ರಹ.

ಗಲ್ಲಿಯಲ್ಲಿ ವ್ಯಾಪಾರ

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪದ ಕೆ.ಆರ್‌.ಮಾರುಕಟ್ಟೆಯಲ್ಲಿನ ಅತ್ಯಂತ ಕಿರಿದಾದ ಗಲ್ಲಿಯಲ್ಲಿ ಹೂವು ಮಾರಾಟ ನಡೆಯುತ್ತಿದೆ. ರೈತರು ಇಲ್ಲಿನ ಹೂವಿನ ಮಂಡಿಗಳಿಗೆ ಬೈಕ್‌ಗಳಲ್ಲಿ ಹೂವು ತೆಗೆದುಕೊಂಡು ಹೋಗಲು ಸಾಧ್ಯವಾಗದೇ ತಲೆಯ ಮೇಲೆ ಹೊತ್ತು ಹೋಗಬೇಕಿದೆ ಎಂದು ಹೂವು ಬೆಳೆಗಾರ ಹಾಗೂ ರೈತ ಸಂಘದ ಮುಖಂಡ ಟಿ.ಜಿ.ವಾಸುದೇವ್‌ ಹೇಳಿದರು.

ಒಂದು ವಾರದಿಂದ ಎಪಿಎಂಸಿ ಆವರಣದಲ್ಲಿ ಪ್ರಾರಂಭವಾಗಿರುವ ಮಾರುಕಟ್ಟೆಯಲ್ಲಿ ರೈತರೇ ನೇರವಾಗಿ ಹೂವು ಮಾರಮಾಡುತ್ತಿರುವುದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೂವು ದೊರೆಯುತ್ತಿವೆ. ರೈತರಿಗು ಲಾಭವಾಗುತ್ತಿದೆ ಎಂದು ತಿಳಿಸಿದರು.

ಎಪಿಎಂಸಿ ಆವರಣದಲ್ಲೇ ವ್ಯಾಪಾರ ನಡೆಯಲಿ

ಎಪಿಎಂಸಿ ಮಾರುಕಟ್ಟೆ ನಗರದಿಂದ ಹೊರಗಿದೆ, ವ್ಯಾಪಾರ ಕಡಿಮೆಯಾಗುತ್ತದೆ ಎನ್ನುವ ಕುಂಟುನೆಪ ಹೇಳುತ್ತಿದ್ದರು. ಆದರೆ ಇಂದು ಅತ್ಯಂತ ವಿಶಾಲವಾದ ಪ್ರದೇಶದಲ್ಲಿ ಹಣ್ಣು, ತರಕಾರಿ ಬಹಿರಂಗ ಹರಾಜು ನಡೆಯುತ್ತಿದೆ. ಇದರಿಂದ ರೈತರು, ವ್ಯಾಪಾರಸ್ಥರು ಹಾಗೂ ಗ್ರಾಹಕರು ಕಾರು, ಬೈಕ್‌ಗಳಲ್ಲಿ ಬಂದು ಹೋಗಲು ಅನುಕೂಲವಾಗಿದೆ. ಇದೇ ರೀತಿ ಹೂವು ಮಾರುಕಟ್ಟೆಯ ವಹಿವಾಟು ಎಪಿಎಂಸಿ ಆವರಣದಲ್ಲೇ ನಡೆಯುವಂತೆ ಕಡ್ಡಾಯವಾಗಬೇಕು. ಇದರಲ್ಲಿ ಯಾರೂ ಸಹ ಸ್ವಾರ್ಥ ಚಿಂತನೆ ಮಾಡಬಾರದು. ಎಲ್ಲರ ಹಿತವು ಮುಖ್ಯವಾಗಬೇಕು ಎಂದು ಮುದ್ದನಾಯಕನಪಾಳ್ಯ ಹೂವು ಬೆಳೆಗಾರ ಪ್ರಕಾಶ್ ತಿಳಿಸಿದರು.

ಮುಕ್ತ ಮಾರುಕಟ್ಟೆ

ಹೂವಿನ ಮಾರುಕಟ್ಟೆ ಕೆಲವೇ ಜನರ ಹಿಡಿತದಿಂದ ತಪ್ಪಬೇಕು. ರೈತರು ಸಹ ಹೂವು ಮಾರಾಟಕ್ಕೆ ಅವಕಾಶ ಇರಬೇಕು. ಈ ಎಲ್ಲಾ ಸೌಲಭ್ಯಗಳು ದೊರೆಯಬೇಕಾದರೆ ಎಪಿಎಂಸಿ ಆವರಣದಲ್ಲಿ ಹೂವು ವ್ಯಾಪಾರ ನಡೆಯಬೇಕು ಎಂದು ಹೂವಿನ ವ್ಯಾಪಾರಿ ಕಂಟನಕುಂಟೆ ಅಶ್ವಥ್‌ ಒತ್ತಾಯಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಉಜ್ಜನಿ ಗ್ರಾಮದಲ್ಲಿ ಬೆಳೆಯಲಾಗಿರುವ ಸುಗಂಧರಾಜ ಹೂವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.