ADVERTISEMENT

ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹಣ್ಣು, ತರಕಾರು ಮಾರುಕಟ್ಟೆ

ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 5:47 IST
Last Updated 16 ಏಪ್ರಿಲ್ 2020, 5:47 IST
ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ರೈತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು
ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ರೈತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು   

ದೊಡ್ಡಬಳ್ಳಾಪುರ: ‘ರೈತರ ಕೃಷಿಉತ್ಪನ್ನಗಳಿಗೆ ನೇರವಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಬೆಂಗಳೂರು ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ತಲಾ ಎರಡು ಕಡೆಗಳಲ್ಲಿ ಹಣ್ಣು, ತರಕಾರಿ ಮಾರಾಟಕ್ಕೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರಥಮವಾಗಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಜಾರಿಗೆ ತರಲಾಗುತ್ತಿದೆ’ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಹೇಳಿದರು.

ಬುಧವಾರ ನಗರದ ಎಪಿಎಂಸಿ ಸಭಾಂಗಣದಲ್ಲಿ ರೈತರ ಸಭೆಯಲ್ಲಿ ಅವರು ಮಾತನಾಡಿ, ‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೊಳ್ಳುವವರು ಇಲ್ಲದೆ ತೋಟದಲ್ಲಿಯೇ ಹಣ್ಣು ಮತ್ತು ತರಕಾರಿಗಳು ಹಾಳಾಗುತ್ತಿವೆ. ಆದರೆ ಗ್ರಾಹಕರಿಗೆ ತರಕಾರಿ, ಹಣ್ಣಿನ ಬೆಲೆ ದುಬಾರಿಯಾಗಿ ಕೊಳ್ಳಲು ಭಯಪಡುವಂತಾಗಿದೆ. ಈ ಸಮಸ್ಯೆ ನಿವಾರಿಸಲು ರೈತರೇ ನೇರವಾಗಿ ತಾವು ಬೆಳೆದ ಯಾವುದೇ ರೀತಿಯ ಉತ್ಪನ್ನವನ್ನು ನಾವು ನಿಗದಿಪಡಿಸಿರುವ ಸ್ಥಳದಲ್ಲಿ ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆವರೆಗೆ ಸಗಟು ವ್ಯಾಪಾರಿಗಳಿಗೆ ನೇರವಾಗಿ ಮಾರಾಟ ಮಾಡಲು ಅಗತ್ಯ ಇರುವ ಎಲ್ಲಾ ರೀತಿಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ರೈತರಿಂದ ಖರೀದಿ ಮಾಡಿ ಪ್ರತಿ ವಾರ್ಡ್‌ಗಳಲ್ಲಿ ಮಾರಾಟ ಮಾಡಲು ತಳ್ಳುವ ಗಾಡಿ, ಮಿನಿ ಆಟೋಗಳವರನ್ನು ಈಗಾಗಲೇ ಗುರುತಿಸಲಾಗಿದೆ’ ಎಂದರು.

‘ರೈತರು ತಾವು ಬೆಳೆದಿರುವ ಯಾವುದೇ ರೀತಿಯ ಕೃಷಿ ಉತ್ಪನ್ನಗಳನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಲು ಪೊಲೀಸರಿಂದ ಯಾವುದೇ ರೀತಿಯ ತೊಂದರೆಯೂ ಇಲ್ಲ. ಆದರೆ ಸ್ವಂತ ಕಾರುಗಳಲ್ಲಿ ಹಣ್ಣು, ತರಕಾರಿಗಳನ್ನು ತರುವಂತಿಲ್ಲ. ಟ್ರ್ಯಾಕ್ಟರ್‌ ಅಥವಾ ಸರಕು ಸಾಗಾಣಿಕೆ ವಾಹನಗಳಲ್ಲಿಯೇ ಬರಬೇಕಿದೆ’ ಎಂದರು.

ADVERTISEMENT

‘ದ್ರಾಕ್ಷಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಖಾಸಗಿ ವಲಯದಲ್ಲಿನ ವೈನ್‌, ಜ್ಯೂಸ್‌ ತಯಾರಿಕಾ ಘಟಕಗಳ ಬಾಗಿಲು ತೆರೆದು ಉತ್ಪಾದನೆ ಪ್ರಾರಂಭಿಸಲು ಅನುಮತಿ ನೀಡಲು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುವುದು. ದ್ರಾಕ್ಷಿ ಹಣ್ಣು ಕಟಾವು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬರಲು ಅಡ್ಡಿಪಡಿಸುವಂತಿಲ್ಲ. ಗ್ರಾಮಾಂತರ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಬಿತ್ತನೆ ಬೀಜ, ಗೊಬ್ಬರದ ಕೊರತೆ ಇಲ್ಲ.ಕೃಷಿ ಇಲಾಖೆ ಹಾಗೂ ಖಾಸಗಿ ಮಾರಾಟ ಮಳಿಗೆಗಳಲ್ಲೂ ಲಭ್ಯ ಇದೆ’ ಎಂದರು.

ರೈತ ಕೋಡಿನರಸಿಂಹಮೂರ್ತಿ, ಬೈರಪ್ಪ, ಸತೀಶ್‌, ಮಾತನಾಡಿ, ‘ಬೆಂಗಳೂರಿನ ಅಪಾರ್ಟ್‌ಮೆಂಟ್‌ ಸಮೀಪ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸಿದರೆ ಹಣ್ಣು, ತರಕಾರಿಗಳನ್ನು ಸರಬರಾಜು ಮಾಡಲು ತಾಲ್ಲೂಕಿನ ರೈತರು ಸಿದ್ದರಿದ್ದೇವೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಗಿನ ಜಾವ 5 ಗಂಟೆಗೆ ಮಾರಾಟವನ್ನು ಮುಕ್ತಾಯಗೊಳಿಸಲಾಗುತ್ತಿದೆ. ಇದರಿಂದ ರೈತರು ಹಾಗೂ ಕೊಳ್ಳುವವರಿಗೆ ತೊಂದರೆಯಾಗುತ್ತಿದೆ. ಮಾರಾಟದ ಸಮಯವನ್ನು ಮತ್ತಷ್ಟು ವಿಸ್ತರಣೆ ಮಾಡಬೇಕು’ ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿಸಲಾಗಿರುವ ರೈತರಿಗೆ ಹಣ ನೀಡಬೇಕು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಗಿ ಖರೀದಿಯನ್ನು ನಿಲ್ಲಿಸಲಾಗಿದೆ. ಲಾಕ್‌ಡೌನ್‌ ತೆರವಾಗುತ್ತಿದ್ದಂತೆ ರಾಗಿ ಖರೀದಿ ಮಾಡಬೇಕು’ ಎಂದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸತ್‌ ಸದಸ್ಯ ತೇಜಸ್ವಿ ಸೂರ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ್‌, ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ, ಉಪ ವಿಭಾಗಾಧಿಕಾರಿ ಸಿ.ಮಂಜುನಾಥ್‌, ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌, ಡಿವೈಎಸ್‌ಪಿ ಟಿ.ರಂಗಪ್ಪ, ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯ ಇದ್ದರು.

*
ರೈತರು ಉತ್ಪನ್ನವನ್ನು ನಾವು ನಿಗದಿಪಡಿಸಿರುವ ಸ್ಥಳದಲ್ಲಿ ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆವರೆಗೆ ಸಗಟು ಮಾರಾಟ ಮಾಡಲು ಸೌಲಭ್ಯ ಕಲ್ಪಿಸುತ್ತೇವೆ.
–ಆರ್‌. ಅಶೋಕ್‌,ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.