ADVERTISEMENT

ಅನ್ಯಾಯವಾದಾಗ ನೆನಪಾಗುವುದೇ ಗಾಂಧಿ, ಅಂಬೇಡ್ಕರ್‌: ಪ್ರಕಾಶ್‌ ಮಂಟೇದ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 16:20 IST
Last Updated 30 ಜನವರಿ 2024, 16:20 IST
ದೊಡ್ಡಬಳ್ಳಾಪುರದಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆಯಿಂದ ಗಾಂಧೀಜಿ ಹುತಾತ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಸೌಹಾರ್ದ ಮೆರವಣಿಗೆ ನಡೆಯಿತು
ದೊಡ್ಡಬಳ್ಳಾಪುರದಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆಯಿಂದ ಗಾಂಧೀಜಿ ಹುತಾತ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಸೌಹಾರ್ದ ಮೆರವಣಿಗೆ ನಡೆಯಿತು   

ದೊಡ್ಡಬಳ್ಳಾಪುರ: ಗಾಂಧೀಜಿ ಅವರನ್ನು ದೈಹಿಕವಾಗಿ ಕೊಲೆ ಮಾಡಿರಬಹುದು. ಆದರೆ ಅವರ ವಿಚಾರಗಳನ್ನು ಯಾರೂ, ಎಂದಿಗೂ ಕೊಲ್ಲುವುದು ಅಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರಕಾಶ್‌ ಮಂಟೇದ ಹೇಳಿದರು.

ಮಂಗಳವಾರ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆಯಿಂದ ಗಾಂಧೀಜಿ ಹುತಾತ್ಮ ದಿನಾಚರಣೆ ಅಂಗವಾಗಿ ನಡೆದ ಸೌಹಾರ್ದತೆಗಾಗಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಪನಿಂದ ಬಸವಣ್ಣ, ಕುವೆಂಪು ಸೇರಿದಂತೆ ನಾಡಿನ ಎಲ್ಲ ಅನುಭಾವಿಗಳು ಮಾನವತ್ವ ಬೋಧಿಸಿದ್ದಾರೆ. ಆ ಮೂಲಕ ಗಾಂಧೀಜಿ ವಿಚಾರ ನಾಡಿನೆಲ್ಲೆಡೆ ನೆಲೆಯೂರಿವೆ. ಇಲ್ಲಿನ ಎಲ್ಲ ಧರ್ಮ, ಜಾತಿಯ ಜನ ಒಂದಾಗಿ ಬಾಳುತ್ತ ತೋರಿಸಿದ್ದಾರೆ. ಇಂತಹ ನಾಡಿನಲ್ಲಿ ಎಂದಿಗೂ ವಿಭಜನೆ ಸಾಧ್ಯವಿಲ್ಲ. ಯುವ ಸಮೂಹ ಗಾಂಧೀಜಿಯ ವಿಚಾರಗಳನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ದೇಶದ ಏಕತೆ, ಸಮಗ್ರತೆ ಹಾಗೂ ಜಾತ್ಯಾತೀತವಾಗಿ ಬದುಕುವುದನ್ನು ಕಲಿಯಬೇಕಿದೆ. ನಮಗೆ ಅನ್ಯಾಯವಾದಾಗ ಮೊದಲು ನೆನಪಾಗುವುದೇ ಗಾಂಧಿ, ಅಂಬೇಡ್ಕರ್‌. ಇವರ ವಿಚಾರಗಳಲ್ಲಿ ಮುನ್ನಡೆದಾಗ ಮಾತ್ರವೇ ನ್ಯಾಯ ದೊರೆಯಲು ಸಾಧ್ಯ ಎಂದರು.

ADVERTISEMENT

ಜನಪರ ಹೋರಾಟಗಾರ ಜಗದೀಶ್‌ ಮಾತನಾಡಿ, ಕನ್ನಡ ನಾಡಿನಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಅದೆಷ್ಟೇ ವಿಷ ಬೀಜಗಳನ್ನು ಬಿತ್ತಲು ಪ್ರಯತ್ನಿಸಿದರೂ ಅದು ಫಲ ನೀಡುವುದಿಲ್ಲ. ಶರಣರು, ದಾಸರು ಹಾಕಿರುವ ಭದ್ರಬುನಾದಿಯೇ ಇಲ್ಲಿ ಸೌಹಾರ್ದತೆ ನೆಲೆಸಲು ಹಾಗೂ ಗಾಂಧೀಜಿ ವಿಚಾರಗಳು ಜೀವಂತವಾಗಿರಲು ಸಹಕಾರಿ ಎಂದರು.

ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಸೌಹಾರ್ದ ಮೆರವಣಿಗೆ ಮಾಡಿ ತಾಲ್ಲೂಕು ಕಚೇರಿ ವೃತ್ತದಲ್ಲಿ ಸೌಹಾರ್ದ ಮಾನವ ಸರಪಳಿ ರಚಿಸಲಾಯಿತು.

ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆಯ ಆರ್‌.ಚಂದ್ರತೇಜಸ್ವಿ, ಜಿ.ಲಕ್ಷ್ಮಿಪತಿ, ಜಿ.ಚುಂಚೇಗೌಡ, ರಾಜುಸಣ್ಣಕ್ಕಿ, ಕೆ.ಎಸ್‌.ಪ್ರಭಾ, ನಳಿನಾಕ್ಷಿ, ಸಂಜೀವ್‌ನಾಯಕ್‌, ಕೆ.ವೆಂಕಟೇಶ್‌, ಡಿ.ಪಿ.ಅಂಜನೇಯ, ಗುರುರಾಜಪ್ಪ, ಪಿ.ಎ.ವೆಂಕಟೇಶ್‌, ರುದ್ರಾರಾಧ್ಯ, ಸಿ.ಎಚ್‌.ರಾಮಕೃಷ್ಣ, ವಿಜಯಕುಮಾರ್‌, ಗೂಳ್ಯ ಹನುಮಣ್ಣ, ಪುನಿತ್‌, ರಾಮಾಂಜಿ, ಷಫೀರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.