ADVERTISEMENT

ದೊಡ್ಡಬಳ್ಳಾಪುರ | ನಗರದ ತುಂಬಾ ಕಸದ ರಾಶಿ, ಗಬ್ಬುನಾತ: ಸದಸ್ಯರ ಆಕ್ರೋಶ

ನಾಮಕಾವಸ್ಥೆಗೆ ಬ್ಲಾಕ್‌ಸ್ಪಾಟ್‌ । ಮೂರು ದಿನಕ್ಕೊಮ್ಮೆ ಕಸ ಸಂಗ್ರಹ;

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 6:40 IST
Last Updated 23 ಸೆಪ್ಟೆಂಬರ್ 2025, 6:40 IST
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ರವಿಕುಮಾರ್‌ ಮಾತನಾಡಿದರು
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ರವಿಕುಮಾರ್‌ ಮಾತನಾಡಿದರು   

ದೊಡ್ಡಬಳ್ಳಾಪುರ:  ‘ಇಡೀ ನಗರವೇ ಕಸದಿಂದ ಗಬ್ಬು ನಾರುತ್ತಿದೆ. ಆದರೆ ನಗರಸಭೆ ಪರಿಸರ ವಿಭಾದ ಅಧಿಕಾರಿಗಳು ಗುರುತಿಸಿರುವುದು ಮಾತ್ರ ಕೇವಲ 139 ಬ್ಲಾಕ್‌ ಸ್ಪಾಟ್‌. ಸದಸ್ಯನಾಗಿರುವ ನಮ್ಮ ಮನೆ ಬಳಿಗೆ ಮೂರು ದಿನಗಳಿಗೆ ಒಮ್ಮೆ ಕಸ ಸಂಗ್ರಹಕ್ಕೆ ಬರುತ್ತಾರೆ. ಹೀಗಾದರೆ ಸಾರ್ವಜನಿಕರು ಮನೆಯ ಕಸವನ್ನು ರಸ್ತೆ ಬದಿಗೆ ತಂದು ಸುರಿಯದೇ ಇನೇನು ಮಾಡ್ತಾರೆ ಎಂದು ಎಂದು ನಗರಸಭೆ ಸದಸ್ಯ ಎಂ.ಜಿ.ಶ್ರೀನಿವಾಸ್‌ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್‌ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸರ್ಕಾರ ಕಟ್ಟು ನಿಟ್ಟಿನ ಸುತ್ತೋಲೆ ಹೊರಡಿಸಿದ ನಂತರ ಎಚ್ಚೆತ್ತಿರುವ ನಗರಸಭೆ ಅಧಿಕಾರಿಗಳು ನಾಮಕಾವಸ್ಥೆಗೆ ಕಸ ಸುರಿಯುವ ಬ್ಲಾಕ್ಸ್‌ ಸ್ಪಾಟ್‌ ಗುರುತಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತದಲ್ಲಿ ನಗರದ ಯಾವ ರಸ್ತೆಯಲ್ಲಿ ಒಡಾಡಿದರು ರಸ್ತೆಗಳ ಬದಿಯಲ್ಲಿ ಕಸದ ರಾಶಿ ಕಾಣಬಹುದು ಎಂದರು.

ಪೌರಕಾರ್ಮಿಕರ ಕ್ರೀಡಾಕೂಟ, ಪೌರಕಾರ್ಮಿಕರ ದಿನಾಚರಣೆ ಮಾಹಿತಿಯನ್ನು ಸಹ ಹಿಂದಿನ ದಿನ ಸಂಜೆ ತಿಳಿಸಿದ್ದಾರೆ. ಪ್ರತಿ ವರ್ಷ ಪೌರಕಾರ್ಮಿಕರ ದಿನಾಚರಣೆಯಲ್ಲಿ ಕಾರ್ಮಿಕರಿಗೆ ನಗರಸಭೆಯಿಂದ ಉಡುಗರೆಯನ್ನು ನೀಡಲಾಗುತ್ತಿದೆ. ಈ ಬಗ್ಗೆಯೂ ಸಹ ಇದುವರೆಗೂ ಚರ್ಚೆ ನಡೆಸಿಲ್ಲ, ಟೆಂಡರ್‌ ಸಹ ಕರೆದಿಲ್ಲ ಎಂದು ಸದಸ್ಯರಾದ ಆದಿಲಕ್ಷ್ಮೀ, ಶಿವು, ನಾಗರಾಜ್‌ ಅಸಮಧಾನ ವ್ಯಕ್ತಪಡಿಸಿದರು.

ADVERTISEMENT

ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಪೌರಾಯುಕ್ತ ಕಾರ್ತಿಕೇಶ್ವರ್‌, ನಗರದಲ್ಲಿನ ಬ್ಲಾಕ್‌ ಸ್ಪಾಟ್‌ ಗುರುತಿಸಿ ಕಸ ನಿರ್ವಹಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು, ಕಸ ನಿರ್ವಹಣೆ ಕುರಿತು ನಿಗಾವಹಿಸಲು ಸ್ವಸಹಾಯ ಸಂಘದ 18 ಮಹಿಳೆಯರನ್ನು ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದಾರೆ. ಮನೆ ಮನೆಯಿಂದ ಪ್ರತಿದಿನ ಸಮರ್ಪಕವಾಗಿ ಕಸ ಸಂಗ್ರಹ ಮಾಡುತ್ತಿರುವ ಕುರಿತು ನಿಖರವಾಗಿ ತಿಳಿದುಕೊಳ್ಳಲು ಮೊಬೈಲ್‌ ಆಪ್‌ ಅಭಿವೃದ್ಧಿ ಪಡಿಸಲಾಗಿದ್ದು, ನಗರದ 27ನೇ ವಾರ್ಡ್‌ ಸೋಮೇಶ್ವರ ಬಡಾವಣೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದರ ಯಶಸ್ಸಿನ ನಂತರ ಇಡೀ ನಗರಕ್ಕೆ ವಿಸ್ತರಣೆ ಮಾಡಲಾಗುವುದು. ಇದರಿಂದ ಬ್ಲಾಕ್‌ ಸ್ಪಾಟ್‌ಗಳನ್ನು ನಿರ್ಮೂಲನೆ ಮಾಡಲು ಹಾಗೂ ರಸ್ತೆ ಬದಿಯಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ನಗರಭೆ ಉಪಾಧ್ಯಕ್ಷ ಎಂ.ಮಲ್ಲೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ರವಿಕುಮಾರ್‌ ಇದ್ದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮೃತಪಟ್ಟ ಹೇಮಾವತಿಪೇಟೆಯ ಸದಸ್ಯ ಭಾಸ್ಕರ್‌, ಮಾಜಿ ಸದಸ್ಯೆ ಕದರಮ್ನ ಅವರ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ನಗರಸಭೆ ಆಡಳಿತ ವೈಖರಿ ವಿರುದ್ಧ ಅಸಮಾಧಾನ

11 ಗಂಟೆಗೆ ಆರಂಭವಾಗಬೇಕಿರುವ ಸೆಭೆಯನ್ನು 12 ಗಂಟೆಗೆ ಆರಂಭಿಸಲಾಗಿದೆ. ನಾಲ್ಕು ತಿಂಗಳಿಂದ ಸಭೆಯನ್ನೇ ನಡೆಸದೆ ಎಲ್ಲಾ ಲೆಕ್ಕಾಚಾರ ಕಾಮಗಾರಿಗಳ ಗುತ್ತಿಗೆಗಳನ್ನು ಅರ್ಧ ದಿನದಲ್ಲೇ ಪರಿಶೀಲಿಸಿ ಒಪ್ಪಿಗೆ ನೀಡಬೇಕು ಎನ್ನುವ ನಿರೀಕ್ಷೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಶ್ರೀನಿವಾಸ್‌ ನಗರಸಭೆ ಆಡಳಿತ ವೈಖರಿ ಹೇಗಿದೆ ಎನ್ನುವುದೇ ತಿಳಿಯದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಮತ್ತೊಬ್ಬ ಸದಸ್ಯ ತ.ನ.ಪ್ರಭುದೇವ್‌ ವಿವಿಧ ಕಾಮಗಾರಿ ಟೆಂಡರ್‌ಗಳು ಸೇರಿದಂತೆ ಸುಮಾರು ₹18 ಕೋಟಿ ವೆಚ್ಚದ ಲೆಕ್ಕಪತ್ರಗಳನ್ನು ನೋಡದೆ ಒಪ್ಪಿಗೆ ಸೂಚಸಲು ಸಾಧ್ಯವಿಲ್ಲ. ಪ್ರತಿ ತಿಂಗಳು ಸಭೆ ನಡೆಸುವಂತೆ ಕೇಳುತ್ತಲೇ ಬಂದಿದ್ದರು ಸಹ ಸಭೆಗಳನ್ನು ನಡೆಸಿಲ್ಲ. ಈಗ 4 ತಿಂಗಳ ಲೆಕ್ಕಪತ್ರಗಳ ಬದಲಿಗೆ 2 ತಿಂಗಳ ಲೆಕ್ಕಪತ್ರಗಳ ಪರಿಶೀಲನೆ ನಡೆಸಿ ಒಪ್ಪಿಗೆ ಪಡೆದು ಉಳಿದು ಎರಡು ತಿಂಗಳ ವಿಷಯಗಳನ್ನು ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿದರು. 

ಅಧಿಕಾರಿಗಳಿಗೆ ತರಾಟೆ ಎರಡು ದಿನಗಳ ಹಿಂದೆ ನಗರಸಭೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ ನಡೆಸಲಾಗಿದೆ. ಆದರೆ ಸದಸ್ಯರಿಗೆ ಸಭೆ ಇರುವ ಹಿಂದಿನ ರಾತ್ರಿ ಮಾಹಿತಿ ನೀಡಲಾಗಿದೆ. ಮುಂಚಿತವಾಗಿಯೇ ಮಾಹಿತಿ ನೀಡಿದರೆ ನಗರದಲ್ಲಿ ಆಗಬೇಕಿರುವ ಕೆಲಸಗಳು ಸಮಸ್ಯೆಗಳ ಕುರಿತು ನಾವು ಸಹ ಶಾಸಕರ ಗಮನಕ್ಕೆ ತರುತ್ತಿದ್ದೆವು. ಆದರೆ ದಿಢೀರನೇ ಸಭೆ ನಡೆಸುವ ಅಗತ್ಯವಾದರು ಏನಿತ್ತು ಎಂದು ಸದಸ್ಯರಾದ ಎಚ್‌.ಎಸ್‌.ಶಿವಶಂಕರ್‌ ನಾಗರಾಜ್‌ ಅವರು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.