ADVERTISEMENT

ವಿಜಯಪುರ| ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: ಮತ್ತೆ ಸೌದೆ ಮೊರೆ ಹೋದ ಗ್ರಾಮೀಣರು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 4:22 IST
Last Updated 25 ಫೆಬ್ರುವರಿ 2023, 4:22 IST
ವಿಜಯಪುರ ಹೋಬಳಿ ಮುದ್ದೇನಹಳ್ಳಿಯ ಸಮೀಪದಲ್ಲಿ ಗೃಹಿಣಿ ನಾರಾಯಣಮ್ಮ ಸೌದೆ ಸಂಗ್ರಹಿಸಿ ಹೊರೆ ಕಟ್ಟಿ ಹೊತ್ತುಕೊಂಡು ಸಾಗಿದರು
ವಿಜಯಪುರ ಹೋಬಳಿ ಮುದ್ದೇನಹಳ್ಳಿಯ ಸಮೀಪದಲ್ಲಿ ಗೃಹಿಣಿ ನಾರಾಯಣಮ್ಮ ಸೌದೆ ಸಂಗ್ರಹಿಸಿ ಹೊರೆ ಕಟ್ಟಿ ಹೊತ್ತುಕೊಂಡು ಸಾಗಿದರು   

ವಿಜಯಪುರ(ದೇವನಹಳ್ಳಿ): ಅಡುಗೆ ಅನಿಲ ಸಿಲಿಂಡರ್ ಬೆಲೆ ₹1,150ಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಮತ್ತೆ ಸೌದೆ ಮೊರೆ ಹೋಗಿದ್ದಾರೆ.

ನಿರಂತರವಾಗಿ ಸಿಲಿಂಡರ್‌ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸೌದೆ ಒಲ್ಲೆ ಅಡುಗೆ ಮಾಡುವುದನ್ನು ಪುನಃ
ಆರಂಭಿಸಿದ್ದಾರೆ.

ಸೌದೆ ಅಡುಗೆಯ ಹೊಗೆಯಿಂದ ಮಹಿಳೆಯರು ಆರೋಗ್ಯ ಕೆಡಿಸಿಕೊಳ್ಳಬಾರದೆಂದು ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಸಿಲಿಂಡರ್ ಮತ್ತು ಒಲೆಗಳನ್ನು ವಿತರಣೆ ಮಾಡಿದೆ. ಆದರೆ ಕಳೆದೊಂದು ವರ್ಷದಿಂದ ಸಿಲಿಂಡರ್‌ ಬೆಲೆ ಏರುಗತ್ತಿಯಲ್ಲಿದೆ. ಇದು ಗ್ರಾಮೀಣ ಜನರ ಕೈ ಸುಡುತ್ತಿದೆ.

ADVERTISEMENT

₹1,150 ಕೊಟ್ಟು ಸಿಲಿಂಡರ್ ಖರೀದಿಸುವ ಸಾಮರ್ಥ್ಯವಿಲ್ಲದವರು ಮತ್ತೆ ಹಳೆ ಪದ್ಧತಿಯಲ್ಲೇ ಅಡುಗೆ ಮಾಡಲು ಆರಂಭಿಸಿದ್ದಾರೆ. ಇದಕ್ಕಾಗಿ ಬಯಲು ಹಾಗೂ ಅರಣ್ಯ ಪ್ರದೇಶಗಳಿಗೆ ಸೌದೆ ತರುತ್ತಿದ್ದಾರೆ.

‘ನಾವು ಕೂಲಿ ಮಾಡಿ ಬದುಕು ನಡೆಸುವ ಜನ. ಇದರಲ್ಲೇ ಜೀವನ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು. ಸಿಲಿಂಡರ್‌ಗೆ ₹1,150 ಕೊಡುವುದು ಕಷ್ಟವಾಗಿದೆ. ಸಿಲಿಂಡರ್‌ ಒಲೆಯಲ್ಲೆ ಅಡುಗೆ ಮಾಡಬೇಕೆಂದರೆ ಸಾಲ ಮಾಡಬೇಕಾಗುತ್ತದೆ. ಹೀಗಾಗಿ ಸೌದೆ ಒಲೆಯ ಅಡುಗೆಯೇ ಅನುಕೂಲ’ ಎನ್ನುತ್ತಾರೆ ಮುದ್ದೇನಹಳ್ಳಿಯ ನಾರಾಯಣಮ್ಮ.

ಬೇಸಿಗೆಯಲ್ಲಿ ಸಿಗುವ ಒಣ ಸೌದೆಗಳನ್ನು ಸಂಗ್ರಹಿಸಿ ಮನೆ ಬಳಿ ಲಾಟು ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.