ಆನೇಕಲ್: ‘ಮನೆಗಳವು ಪ್ರಕರಣದಲ್ಲಿ ಬಂಧಿಸಲಾದ ಆರೋಪಿಗಳಿಂದ ಎರಡು ಕೆ.ಜಿ ಚಿನ್ನ ವಶಪಡಿಸಿಕೊಂಡ ಚಂದಾಪುರ– ಸೂರ್ಯಸಿಟಿ ಪೊಲೀಸರು ಕೇವಲ 200 ಗ್ರಾಂ ಚಿನ್ನ ಮಾತ್ರ ವಶಪಡಿಸಿಕೊಂಡಿರುವುದಾಗಿ ದಾಖಲೆಗಳಲ್ಲಿ ತೋರಿಸಿದ್ದಾರೆ’
ಸಾಮಾಜಿಕ ಕಾರ್ಯಕರ್ತ, ವಕೀಲ ವೆಂಕಟಾಚಲಪತಿ ಎಂಬುವವರು ಗುರುವಾರ ಚಂದಾಪುರ– ಸೂರ್ಯಸಿಟಿ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಎಸ್‌ಪಿ ನಾಗರಾಜ್ ನೇತೃತ್ವದಲ್ಲಿ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ.
ಚಂದಾಪುರ–ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಐದಾರು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿವೆ. ಒಂದೇ ತಂಡದಿಂದ ಈ ಎಲ್ಲಾ ಕಳ್ಳತನ ನಡೆಸಿದೆ ಎನ್ನಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 2 ಕೆ.ಜಿ ಬಂಗಾರ ವಶಪಡಿಸಿಕೊಂಡ ಸೂರ್ಯಸಿಟಿ ಪೊಲೀಸರು, ದಾಖಲೆಗಳಲ್ಲಿ 200 ಗ್ರಾಂ ಚಿನ್ನವನ್ನು ಮಾತ್ರ ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ ಎಂದು ವೆಂಕಟಾಚಲಪತಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.