ADVERTISEMENT

ಸರ್ಕಾರದ ಸಾಧನೆಯೇ ಗೆಲುವಿಗೆ ಶ್ರೀರಕ್ಷೆ: ಕಂದಾಯ ಸಚಿವ ಆರ್‌. ಅಶೋಕ್‌ ವಿಶ್ವಾಸ

ಚುನಾವಣಾ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 4:29 IST
Last Updated 29 ನವೆಂಬರ್ 2021, 4:29 IST
ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಎಚ್.ಎಸ್. ಗೋಪಿನಾಥ ರೆಡ್ಡಿ ಪರವಾಗಿ ಕಂದಾಯ ಸಚಿವ ಆರ್. ಅಶೋಕ್ ಮತಯಾಚಿಸಿದರು. ಶಾಸಕರಾದ ಎಂ. ಕೃಷ್ಣಪ್ಪ, ಸತೀಶ್‌ ರೆಡ್ಡಿ ಹಾಗೂ ಮುಖಂಡರು ಹಾಜರಿದ್ದರು
ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಎಚ್.ಎಸ್. ಗೋಪಿನಾಥ ರೆಡ್ಡಿ ಪರವಾಗಿ ಕಂದಾಯ ಸಚಿವ ಆರ್. ಅಶೋಕ್ ಮತಯಾಚಿಸಿದರು. ಶಾಸಕರಾದ ಎಂ. ಕೃಷ್ಣಪ್ಪ, ಸತೀಶ್‌ ರೆಡ್ಡಿ ಹಾಗೂ ಮುಖಂಡರು ಹಾಜರಿದ್ದರು   

ಆನೇಕಲ್: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿವೆ. ಈ ಬಾರಿಯ ಚುನಾವಣೆಯಲ್ಲಿ 15-16 ಸ್ಥಾನವನ್ನು ಪಕ್ಷ ಗೆಲ್ಲಲಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಎಚ್‌.ಎಸ್. ಗೋಪಿನಾಥರೆಡ್ಡಿ ಪರವಾಗಿ ಮತಯಾಚಿಸಿ ಮಾತನಾಡಿದರು.

ಬೆಂಗಳೂರು ನಗರ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಗೋಪಿನಾಥರೆಡ್ಡಿ 300 ಮತಗಳಿಗೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ಬೆಂಗಳೂರು ನಗರ ಜಿಲ್ಲೆಯ 28 ವಿಧಾನಸಭಾ ಸದಸ್ಯರ ಪೈಕಿ 15 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಮೂವರು ಸಂಸದರಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿಯೂ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲಾ ಸದಸ್ಯರು ಒಗ್ಗಟ್ಟು ಮತ್ತು ಸಾಂಘಿಕ ಪ್ರಯತ್ನದಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.

ಬೆಂಗಳೂರು ನಗರ ವಿಧಾನ ಪರಿಷತ್‌ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತ ಮತ್ತು ಎಂಜಿನಿಯರಿಂಗ್‌ ಪದವೀಧರನಿಗೆ ಟಿಕೆಟ್‌ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ಮುನ್ಸೂಚನೆಯಿಂದ ಕಾಂಗ್ರೆಸ್‌ ಬಾಡಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ಟೀಕಿಸಿದರು.

ಕ್ಷೇತ್ರದವರನ್ನು ಬಿಟ್ಟು ಬೇರೆ ಪ್ರದೇಶದವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ರಾಜಕೀಯ ಅನುಭವವೇ ಇಲ್ಲದ ವ್ಯಕ್ತಿಗೆ ಮೇಲ್ಮನೆಯ ಟಿಕೆಟ್‌ ಘೋಷಿಸಿದೆ. ಅಭ್ಯರ್ಥಿಯ ಮೇಲೆ ಕ್ರಿಮಿನಲ್‌ ಪ್ರಕರಣಗಳಿವೆ ಎನ್ನಲಾಗಿದೆ. ಇಂತಹ ವ್ಯಕ್ತಿಗೆ ಟಿಕೆಟ್‌ ಘೋಷಿಸಿರುವುದು ಆ ಪಕ್ಷಕ್ಕೆ ಅವಮಾನವಾದಂತಾಗಿದೆ ಎಂದರು.

ಬಿಜೆಪಿಯ ಎಲ್ಲಾ ಶಾಸಕರು, ಕಾರ್ಯಕರ್ತರು ಹಗಲಿರುಳೆನ್ನದೇ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಶಾಸಕರಲ್ಲಿ ಚುನಾವಣೆಯ ಹುರುಪು ಕಾಣಿಸುತ್ತಿಲ್ಲ ಎಂದು ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೂ ಉಸ್ತುವಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಬಿಜೆಪಿ ಬೆಂಬಲಿತ ಸದಸ್ಯರು ಪಕ್ಷದ ತತ್ವ, ಸಿದ್ಧಾಂತದ ಮೇಲೆ ನಂಬಿಕೆಯಿಟ್ಟಿರುವ ಕಾರ್ಯಕರ್ತರಾಗಿದ್ದಾರೆ. ಹಾಗಾಗಿ ಯಾವುದೇ ಗ್ರಾಮ ಪಂಚಾಯಿತಿ ಸದಸ್ಯರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಹಣದ ಆಮಿಷ ಒಡ್ಡಲು ಸಾಧ್ಯವಿಲ್ಲ. ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಶಾಸಕರಾದ ಎಂ. ಕೃಷ್ಣಪ್ಪ, ಸತೀಶ್‌ ರೆಡ್ಡಿ, ಅಭ್ಯರ್ಥಿ ಗೋಪಿನಾಥ ರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌. ರಮೇಶ್‌, ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಸಂದೀಪ್‌, ಮಂಡಲ ಅಧ್ಯಕ್ಷರಾದ ಎನ್. ಶಂಕರ್‌, ಎಸ್‌.ಆರ್‌.ಟಿ. ಅಶೋಕ್‌ ರೆಡ್ಡಿ, ರಾಜಶೇಖರ ರೆಡ್ಡಿ, ಮುಖಂಡರಾದ ಬಿ.ಜಿ. ಆಂಜಿನಪ್ಪ, ಕೆ.ವಿ. ಶಿವಪ್ಪ, ಅತ್ತಿಬೆಲೆ ಬಸವರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.