ಚಿಂತಾಮಣಿ ಮುಖ್ಯ ರಸ್ತೆಯಿಂದ ಹೊಸದಿಂಬಹಳ್ಳಿ ಹಳ್ಳಿಯ ಕಚ್ಚಾರಸ್ತೆ
ಸೂಲಿಬೆಲೆ(ಹೊಸಕೋಟೆ) :‘ದೇವನಹಳ್ಳಿ ಏರ್‌ಪೋರ್ಟ್ ಪಕ್ಕದಲ್ಲೇ ಇದಿರಿ... ನಮ್ಮೂರಕ್ಕ ಸರಿಯಾದ ರಸ್ತೆಗಳು ಇಲ್ಲ, ಬಸ್ಸುಗಳು ಬರಲ್ಲ. ನಮ್ ಕಷ್ಟಗಳು ಒಂದಲ್ಲ, ಎರಡಲ್ಲ...’
–ಇದು ಸೂಲಿಬೆಲೆ ಹೋಬಳಿಯ ದೊಡ್ಡಅರಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸದಿಂಬಹಳ್ಳಿ ಗ್ರಾಮಸ್ಥರ ಅಳಲು.
ಡಾಂಬರು ಕಾಣದ ಕಚ್ಚಾರಸ್ತೆ. ಹದಗೆಟ್ಟ ರಸ್ತೆಯಿಂದಲೇ ಬಸ್ ಕಾಣದ ಊರು. ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ಕೊರತೆಯಿಂದ ಹೊಸದಿಂಬಳ್ಳಿ ಗ್ರಾಮಸ್ಥರು ಬಸಳಿದು ಹೋಗಿದ್ದಾರೆ.
ಹದಗೆಟ್ಟ ರಸ್ತೆಯಿಂದ ಈ ಊರಿಗೆ ಬಸ್ ಬಾರದ ಕಾರಣ ಬೇರೆ ಊರಿಗೆ ಹೋಗಿ ಬಸ್ ಹಿಡಿಯಬೇಕಿದೆ. ಶಾಲೆ–ಕಾಲೇಜಿಗೆ ಉಳ್ಳವರ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲಾ–ಕಾಲೇಜು ಬಸ್ ಬರುತ್ತದೆ. ಬಡವರು ಮತ್ತು ದಲಿತರು ಮಕ್ಕಳು ನಿತ್ಯ ನಡೆದುಕೊಂಡು ಹೋಗಬೇಕು. ಇಲ್ಲದೆ ಬಸ್ ಸಿಗುವ ಕಡೆಗೆ
ನಡೆಯಬೇಕು.
ಈ ಸಂಕಷ್ಟವನ್ನು ಬಿಚ್ಚಾಡುವ ಗ್ರಾಮಸ್ಥರು, ‘ಸರ್ಕಾರಿ ಅಥವಾ ಖಾಸಗಿ ವಾಹನಕ್ಕಾಗಿ ನಮ್ಮೂರಿನಿಂದ 1.5 ಕಿ.ಮೀ. ಅಂತರದಲ್ಲಿರುವ ಶಿವನಾಪುರ ಕ್ರಾಸ್‌ಗೆ ಹೋಗಬೇಕು. ಇಲ್ಲವೇ 1 ಕಿ. ಮೀ. ಅಂತರದಲ್ಲಿ ಬಾವಪುರಕ್ಕೆ ಹೋಗಬೇಕು. ನಮ್ಮೂರಿಗಂತೂ ಯಾವುದೇ ಆಟೋ ಆಗಲಿ ಅಥವಾ ಬಸ್ ಆಗಲಿ ಬರೋದಿಲ್ಲ. ಸ್ವಂತ ವಾಹನ ಇರುವವರು ಓಡಾಡುತ್ತಾರೆ.
ಇಲ್ಲದಿರುವವರು ಹೊಸಕೋಟೆ ಅಥವಾ ಬೆಂಗಳೂರಿಗೆ ಹೋಗಬೇಕಾದರೆ ಬಸ್ ಬರುವ ಕಡೆ ನಡೆದುಕೊಂಡು ಹೋಗಿ ನಿಲ್ಲಬೇಕು’ ಎನ್ನುತ್ತಾರೆ ಗ್ರಾಮಸ್ಥರು.
ಈ ಅಳಲು ಒಂದೆರಡು ದಿನದಲ್ಲ ದಶಕಗಳದ್ದು. ಇಲ್ಲಿನ ಜನ ಕೊರತೆಗಳನ್ನು ಅನುಸರಿಸಿಕೊಂಡು ಸಮಸ್ಯೆಗಳ ನಡುವೆಯೇ ಬದುಕು ನಡೆಸುತ್ತಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಹೊಸದಿಂಬಹಳ್ಳಿಗೆ ರಸ್ತೆ ಮಾಡಿಸಲು ಕಾಲು ದಾರಿಯನ್ನು ಹಸನು ಮಾಡಿ ಮಣ್ಣು ಹೊಡೆದು ಹದ ಮಾಡಲಾಗಿತ್ತು. ಆದರೆ ಅರಣ್ಯ ಅಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸಿದರು. ಅಂದಿನಿಂದ ಅದು ಹಾಗೆ ಇದೆ. ಮಳೆಗಾಲದಲ್ಲಿ ಈ ರಸ್ತೆ ಕೆಸರು ಗದ್ದೆ ಆಗುತ್ತೆ. ಬೇಸಿಗೆಯಲ್ಲಿ ಧೂಳಿನ ಸ್ನಾನ ಮಾಡಿಸುತ್ತದೆ.
ಹೀಗಾಗಿ ಗ್ರಾಮಸ್ಥರು ಆ ರಸ್ತೆ ಬಿಟ್ಟು ಬಾವಪುರದ ಗ್ರಾಮದ ಕಡೆ ಇರುವ ಸಂಪರ್ಕ ರಸ್ತೆಯನ್ನು ಬಳಸುತ್ತಿದ್ದಾರೆ. ಆದರೆ ಆ ರಸ್ತೆ ಡಾಂಬರು ಕಂಡು 15 ವರ್ಷ ಕಳೆದಿದೆ. ಮಳೆ, ಮತ್ತಿತರ ಕಾರಣದಿಂದ ಜಲ್ಲಿ ಎದ್ದು ವಾಹನಗಳು ಓಡಾಡಲು ಸಹ ಕಷ್ಟ ಆಗುತ್ತದೆ. ಆದರೂ ಸಂಬಂಧಪಟ್ಟವರು ರಸ್ತೆ ದುರಸ್ತಿ ಮಾಡಿಸಿಲ್ಲ.
ಶಾಲಾ ವಾಹನ, ಟ್ರ್ಯಾಕ್ಟರ್, ದ್ವಿಚಕ್ರ ವಾಹನಗಳನ್ನು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಟ್ಟರೆ ಸಾಕು ಅದಕ್ಕಿಂತ ಮತ್ತೇನು ನಮಗೆ ಬೇಡ ಎಂದು ಮನವಿ ಮಾಡುತ್ತಾರೆ ಸ್ಥಳೀಯರು.
ನಂದಗುಡಿ ವಲಯ ಅರಣ್ಯ ಪ್ರದೇಶ ಸಮೀಪದಲ್ಲಿ ಹೊಸದಿಂಬಹಳ್ಳಿ ಇದೆ. ಮೀಸಲು ಅರಣ್ಯ ಪ್ರದೇಶ ಸಮೀಪ ಇರುವ ಕಾರಣ ಇಲ್ಲಿ ಯಾವುದೇ ಕಾಮಗಾರಿ ನಡೆಸಲು ಆಗುತ್ತಿಲ್ಲ. ಅರಣ್ಯ ಪ್ರದೇಶಕ್ಕೆ ದಕ್ಕೆ ಆಗುತ್ತದೆ ಎಂದು ಅರಣ್ಯ ಇಲಾಖೆ ಯಾವ ಕಾಮಗಾರಿಗೂ ಅನುಮತಿ ನೀಡುತ್ತಿಲ್ಲ. ಇದರಿಂದ ಸೌಕರ್ಯವೇ ಇಲ್ಲದೆ ಕಷ್ಟಪಡುತ್ತಿದ್ದೇವೆ. ಕಾಡಿನ ಪಕ್ಕದಲ್ಲಿ ಇರುವುದೇ ನಮಗೆ ಶಾಪವೇ ಎಂದು ಇಲ್ಲಿನ ಗ್ರಾಮಸ್ಥರು ನೋವು ತೋಡಿಕೊಂಡರು.
ಹೊಸದಿಂಬಹಳ್ಳಿ ಜನರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ 10 ಕಿ.ಮೀ ದೂರದ ಸೂಲಿಬೆಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಇಲ್ಲದೆ 4.5 ಕಿ.ಮೀ. ಅಂತರದಲ್ಲಿರುವ ನಂದಗುಡಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ 12 ಕಿ.ಮೀ. ದೂರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಬರಬೇಕು. ವಾಹನ ಇರುವವರು ಯಾವುದೇ ಸಮಸ್ಯೆ ಇಲ್ಲದೆ ಹೋಗುತ್ತಾರೆ. ವಾಹನಗಳಿಲ್ಲದವರ ಫಜೀತಿ ಯಾರಿಗೂ ಬೇಡ ಎನ್ನುತ್ತಾರೆ ಗ್ರಾಮಸ್ಥರು
ಈ ಊರು ಚಿಕ್ಕದು, ಇವರಿಗೆ ರಸ್ತೆ ಏನಕ್ಕೆ ಬೇಕು ಎಂದು ಸ್ಥಳೀಯ ಆಡಳಿತಗಳು 15 ವರ್ಷದಿಂದ ರಸ್ತೆ ಮಾಡಿಸಿಲ್ಲ. ವೋಟು ಕೇಳಲು ಮಾತ್ರ ನಮ್ಮೂರಿಗೆ ಬರುವ ರಾಜಕಾರಣಿಗಳು ಇನ್ನು ಮುಂದೆ ಒಂದು ಕೆಲಸವನ್ನು ಮಾಡಿ ಕೊಡಲ್ಲ, ವೋಟು ಕೇಳಲ್ಲ ಎಂದು ಬೋರ್ಡ್ ಹಾಕಿಸಿಬಿಡಿ, ನಾವು ನಮ್ಮ ದಾರಿ ನೋಡಿಕೊಳ್ಳುತ್ತೇವೆ.ತಿರುಮಲಪ್ಪ, ನಿವಾಸಿ, ಹೊಸದಿಂಬಹಳ್ಳಿ
ನಮ್ಮೂರ ರಸ್ತೆಯೇ ಹಿಂಗೇ ಅಂದರೆ ನಮ್ಮಗಳ ಬದುಕು ಇನ್ನು ಹೇಗಿರಬೇಕು ಯೋಚಿಸಿ, ಇನ್ನಾದರೂ ನಮ್ಮೂರಿನ ರಸ್ತೆ ದುರಸ್ತಿ ಮಾಡಿಸಿ ಬಾವಪುರಕ್ಕೆ ಬರುವ ಬಸ್ ನಮ್ಮೂರಿಗೂ ಬರುವ ಹಾಗೆ ಮಾಡಿದರೆ ಸಾಕು ಇನ್ನೇನು ಕೇಳೋದಿಲ್ಲ. ನಮ್ಮ ಮಕ್ಕಳು ಬೇರೆ ಊರಿಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾರೆಚಿಕ್ಕಮುನಿಯಪ್ಪ, ನಿವಾಸಿ, ಹೊಸದಿಂಬಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.