
ಹೆದ್ದಾರಿ ಸಮೀಪ ಕಸದ ರಾಶಿ
ದೊಡ್ಡಹುಲ್ಲೂರು (ಹೊಸಕೋಟೆ): ಬೆಂಗಳೂರು ತ್ಯಾಜ್ಯವನ್ನು ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಸುರಿದು, ಬೆಂಕಿ ಹಚ್ಚಲಾಗುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಸ್ವಚ್ಛ ಪರಿಸರ ಮಲಿನವಾಗುವ ಜತೆಗೆ ಸ್ಥಳೀಯರಲ್ಲಿ ಕಾಯಿಲೆ ಭೀತಿ ಹುಟ್ಟಿಸಿದೆ. ಗ್ರಾಮ ಪಂಚಾಯಿತಿಯಿಂದ ಘನ್ಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ಸುರಿಯುತ್ತಿದ್ದರೂ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಬದಲಿಗೆ ಸುಡಲಾಗುತ್ತಿದೆ. ಇದರಿಂದ ಘಟಕದ ಸಮೀಪ ಇರುವ ದಲಿತ ಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ.
ನಮ್ಮ ಅಂಗಡಿಗೆ 200 ಮೀ ದೂರದಲ್ಲಿ ರಾತ್ರಿ 3 ಗಂಟೆ ನಂತರ ಬೆಂಗಳೂರಿಂದ ಕಸ ತಂದು ಸುರಿದು ಹೋಗುತ್ತಾರೆ. ಆ ಕಸದ ವಾಸನೆಗೆ ಅಂಗಡಿಯಲ್ಲಿ ಇರಲು ಆಗುವುದಿಲ್ಲ. ವ್ಯಾಪಾರವು ಆಗುತ್ತಿಲ್ಲ. ಯಾರು ಕಸ ಸುರಿಯುತ್ತಾರೆ ಎಂದು ನೋಡಲು ಮಧ್ಯ ರಾತ್ರಿವರೆಗೂ ಕಾವಲು ಕಾಯುವ ಪರಿಸ್ಥಿತಿ ಬಂದಿದೆಮಂಜುನಾಥ್, ಸೊಣ್ಣದೇನಹಳ್ಳಿ
ಬೇರೆ ಸರ್ಕಾರಿ ಜಾಗ ಇದ್ದರೂ ದಲಿತರು ವಾಸಿಸುವ ಸೊಣ್ಣದೇನಹಳ್ಳಿ, ಸೊಂಪುರ, ಸಿದ್ದಾರ್ಥನಗರದ ಮಧ್ಯೆ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಿರುವುದು ಸರಿಯಲ್ಲ. ಬೆಂಗಳೂರಿನ ಕಸ ತಂದು ಇಲ್ಲಿ ಸುರಿದು ಬೆಂಕಿ ಹಚ್ಚುತ್ತಿದ್ದರೂ ನೋಡಿಯೂ ನೋಡದಂತಹ ಅಧಿಕಾರಿಗಳ ನಡೆ ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.ಮುನಿರಾಜು, ಸೊಣ್ಣದೇನಹಳ್ಳಿ
ಸೊಣ್ಣದೇನಹಳ್ಳಿ ಬಳಿಯ ತ್ಯಾಜ್ಯ ನಿರ್ವಹಣಾ ಘಟಕದ ಬಳಿ ಕಸಕ್ಕೆ ಬೆಂಕಿ ಹಚ್ಚುವುದರ ಪರಿ ಹೇಗಿರುತ್ತದೆ ಎಂದರೆ ಹಗಲು ಸಂದರ್ಭದಲ್ಲೇ ಹೆಡ್‌ಲೈಟ್ ಹಾಕಿಕೊಂಡು ವಾಹನ ಚಲಾಯಿಸಿಬೇಕು. ಇಲ್ಲವೆಂದರೆ ಮುಂದೆ ಬರುವ ವಾಹನ ಗೊತ್ತಾಗದಷ್ಟೂ ಹೊಗೆ ರಸ್ತೆ ತುಂಬಾ ಹರಡಿಕೊಂಡಿರುತ್ತೆಗಣೇಶ್, ಹೊಸಕೋಟೆ
ಸಿಸಿಟಿವಿ ಕ್ಯಾಮೆರಾ ಅಳವಡಿಕೆ
ತ್ಯಾಜ್ಯ ನಿರ್ವಹಣಾ ಘಟಕದ ಸುತ್ತಲೂ ರಾತ್ರಿ ಸಂದರ್ಭದಲ್ಲಿ ಕಸ ತಂದು ಸುರಿದು ಬೆಂಕಿ ಹಚ್ಚುವುದನ್ನು ತಡೆಯಲು ಸದ್ಯ ಕಬ್ಬಿಣದ ಗೇಟ್ ಅಳವಡಿಸಿದ್ದೇವೆ. ಆದರೂ ಘಟಕದ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಕಸ ಸುರಿಯುತ್ತಿದ್ದಾರೆ. ಯಾರು ಕಸ ಸುರಿಯುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾವನ್ನು ವಾರದಲ್ಲಿ ಅಳವಡಿಸುತ್ತೇವೆ. 15 ದಿನದೊಳಗೆ ಕಸ ವಿಂಗಡಣೆ ಯಂತ್ರಗಳನ್ನು ತರಿಸುತ್ತಿದ್ದವೆರವಿಕುಮಾರ್, ಪಿಡಿಒ, ಚೊಕ್ಕಹಳ್ಳಿ ಗ್ರಾಮಪಂಚಾಯಿತಿ
ಇತ್ತೀಚಿಗೆ ನಡೆದ ಸಭೆಯಲ್ಲಿ ಸೊಣದೇನಹಳ್ಳಿ ತ್ಯಾಜ್ಯ ಘಟಕದಲ್ಲಿನ ಕಸ ನಿರ್ವಹಣೆಯನ್ನು ನಿಸರ್ಗ ಎಂಟರ್ ಪ್ರೈಸಸ್ ಕಂಪನಿಗೆ ವಹಿಸಲಾಗಿದೆ. ಇನ್ನೂ 15 ದಿನದೊಳಗೆ ಸಮಸ್ಯೆಗೆ ಪರಿಹಾರ ದೊರೆಯಲಿದೆಆಶಾ, ಪಿಡಿಒ, ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ
ಬೆಂಗಳೂರು ಮಹಾನಗರದಲ್ಲಿ ಉತ್ಪತಿಯಾಗುವ ಕಸವನ್ನು ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಣ್ಣದೇನಹಳ್ಳಿ, ಸೊಂಪುರ ಹಾಗೂ ನಗರದ ಸಮೀಪದ ಸಿದ್ದಾರ್ಥ ನಗರದ ಸಮೀಪ ವಿಲೇವಾರಿ ಮಾಡಲಾಗುತ್ತಿದೆ. ಅಲ್ಲದೆ ಈ ಕಸಕ್ಕೆ ಬೆಂಕಿ ಹಾಕುವ ಮೂಲಕ ಇಡೀ ವಾತವರಣವನ್ನೇ ಕಲುಷಿತಗೊಳಿಸಲಾಗುತ್ತಿದೆ.
ಮಹಾನಗರ ಬೆಳೆದಂತೆ ಅಲ್ಲಿನ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು. ಆದರೆ ಇಲ್ಲಿ ಉತ್ಪತಿಯಾಗುವ ಕಸವನ್ನು ಆಡಳಿತಗಳು ಹಾಗೂ ಗುತ್ತಿಗೆದಾರರು ಗ್ರಾಮೀಣ ಪ್ರದೇಶಗಳಲ್ಲಿ ಕಸ ಸುರಿಯಲಾಗುತ್ತಿದೆ. ಬೆಂಗಳೂರು ನಗರ ಜನತೆಗೆ ಸೊಪ್ಪು, ತರಕಾರಿ, ಹಣ್ಣು ಮತ್ತು ಹೂ ಬೆಳೆದು ಕೊಡುವ ಗ್ರಾಮೀಣರಿಗೆ ಕಸ ಉಡುಗೊರೆಯೇ!.
ಕಸ ಸುರಿಯುತ್ತಿರುವ ಬಹುತೇಕ ಪ್ರದೇಶಗಳು ಪರಿಶಿಷ್ಟರು ವಾಸ ಮಾಡುವ ಜಾಗಕ್ಕೆ ಸಮೀಪದಲ್ಲೇ ಇವೆ. ಕಸದ ರಾಶಿಯಿಂದ ಹೊಮ್ಮುವ ದುರ್ನಾತ ಹಾಗೂ ಕಸದ ಬೆಂಕಿಯ ಹೊಗೆ ಇಲ್ಲಿನ ನಿವಾಸಿಗಳು ಊಟ, ನಿದ್ದೆ ಮತ್ತು ನೆಮ್ಮದಿ ಕಸಿದಿದೆ. ಈ ಬಗ್ಗೆ ಹಲವು ದಲಿತ ಸಮುದಾಯದವರು ದನಿ ಎತ್ತಿದ್ದರೂ ಯಾರಿಂದಲೂ ಸ್ಪಂದನೆ ದೊರೆತಿಲ್ಲ. ‘ನಾವು ದಲಿತರೆಂದು ಏಕಿಷ್ಟು ನಿರ್ಲಕ್ಷ್ಯ ಮಾಡುತ್ತಿದ್ದೀರಿ?’ ಎಷ್ಟೇ ಬಾರಿ ಅವಲತ್ತುಕೊಂಡರೂ ಅವರ ಸಮಸ್ಯೆಗೆ ಯಾರು ಕಿವಿಯಾಗಿಲ್ಲ.
ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಮತ್ತು ಚೊಕ್ಕಹಳ್ಳಿ ಗ್ರಾಮ ಪಂಚಾಯಿಟಿ ವ್ಯಾಪ್ತಿಯ ಚೊಕ್ಕಹಳ್ಳಿ, ಪಿಲಗುಂಪೆ, ಮಲ್ಲಿಮಾಕನಪುರ, ದೊಡ್ಡಹುಲ್ಲುರು, ಚಿಕ್ಕಹುಲ್ಲೂರು, ಚೋಳಪ್ಪನಹಳ್ಳಿ, ಹಲಸಹಳ್ಳಿ, ಗ್ಲೋಬಲ್ ಸ್ಕೂಲ್, ಸೊಣ್ಣದೇನಹಳ್ಳಿ ಗ್ರಾಮಗಳ ಕಸವನ್ನು ದಲಿತರು ವಾಸಿಸುವ ಸೊಣ್ಣದೇನಹಳ್ಳಿ, ಸೊಂಪುರ ಮತ್ತು ಸಿದ್ಧಾರ್ಥನಗರ ಗ್ರಾಮಗಳ ಮಧ್ಯೆ ಇರುವ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕದಲ್ಲಿ ಸುರಿಯಾಲಾಗುತ್ತಿದೆ. ಆದರೆ ನಿರ್ವಹಣೆ ಘಟಕ ಸ್ಥಗಿತಗೊಂಡಿರುವುದರಿಂದ ಕಸದ ರಾಶಿ ಬೆಟ್ಟದಂತೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜೊತೆಗೆ ಈ ಘಟಕದ ಸುತ್ತಲೂ ಬೆಂಗಳೂರಿನ ಕಸ ಸುರಿದು ಬೆಂಕಿ ಹಚ್ಚಲಾಗುತ್ತಿದೆ.
ಈ ಪ್ರಕ್ರಿಯೆ ಹಲವು ತಿಂಗಳಿಂದ ಅವ್ಯಾಹತವಾಗಿ ನಡೆಯುತ್ತಿದ್ದರೂ ಯಾರು ತಡೆಯುವವರೇ ಇಲ್ಲ. ಕಸದ ದುರ್ನಾತ, ಕಸ ಸುಟ್ಟ ದಟ್ಟ ಹೊಗೆಯಿಂದ ವಾತಾವರಣ ಕಲುಷಿತಗೊಂಡು ಈ ಭಾಗದ ದಲಿತ ನಿವಾಸಿಗಳ ನೆಮ್ಮಿದಿ ಕಸಿದಿದ್ದು, ಕಾಯಿಲೆ ಹರಡುವ ಭೀತಿ ಹೆಚ್ಚಾಗಿದೆ.
‘ಇಲ್ಲಿ ದಲಿತರು ಬಿಟ್ಟರೆ ಬೇರೆ ಸಮುದಾಯಗಳಿಲ್ಲ. ಹೀಗಾಗಿಯೇ ದಲಿತರು ವಾಸ ಮಾಡುವ ಜಾಗದ ಸಮೀಪವೇ ಕಾಣದ ಕೈಗಳು ಹಣದ ಆಸೆಗೆ ಕಸವನ್ನು ಇಲ್ಲಿ ತಂದು ಸುರಿದು ಬೆಂಕಿ ಹಚ್ಚುವಂತಹ ನೀಚ ಮಾಡುತ್ತಿದ್ದಾರೆ’ ಸ್ಥಳೀಯರು ದೂರಿದ್ದಾರೆ.
ಸಂಜೆ ಆದರೆ ನಮ್ಮ ಮನೆ ಮುಂದೆ ಇರಲು ಆಗುತ್ತಿಲ್ಲ. ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಮಕ್ಕಳು, ಮುದುಕರಿಗೆ ರೋಗ ಹರಡುವಿಕೆ ಹೆಚ್ಚಾಗುತ್ತಿದೆ. ತ್ಯಾಜ್ಯ ಘಟಕದ ಸಮೀಪವೇ ಸೊಣದೇಹಳ್ಳಿ ಮತ್ತು ಸಿದ್ದಾರ್ಥನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಪ್ರತಿನಿತ್ಯ ಮಕ್ಕಳ ಕಲಿಕೆಗೆ ಸುಟ್ಟ ಕಸದ ದುರ್ನಾತ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಗ್ರಾಮಸ್ಥರು ಅಳಲು ತೊಡಿಕೊಂಡರು.
ನಗರದ ಸಂತೆ ಗೇಟ್‌ನಿಂದ ಸಿದ್ದಾರ್ಥ ನಗರ, ಸೊಣ್ಣದೇನಹಳ್ಳಿ, ದೊಡ್ಡಹುಲ್ಲೂರು, ಚಿಕ್ಕಹುಲ್ಲೂರು, ಪಿಲಗುಂಪೆ, ಚೊಕ್ಕಹಳ್ಳಿ, ಮಲ್ಲಿಮಾಕನಪುರ ಗ್ರಾಮಗಳ ಮೂಲಕ ಹಾದು ಹೋಗುವ ಬೆಂಗಳೂರು ಮತ್ತು ಕಡಪ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ. ಹೊಸಕೋಟೆ ಶಿಡ್ಲಘಟ್ಟ ರಾಜ್ಯ ಹೆದ್ದಾರಿ 35ರ ಸೊಣ್ಣದೇನಹಳ್ಳಿ ಗ್ರಾಮದ ಹೊರವಲಯ ಸೌಪರ್ಣಿಕ ಅಪಾರ್ಟ್ಮೆಂಟ್ ಸಮೀಪದ ವರೆಗೂ. ಹೊಸಕೋಟೆಯ ಡೇರಿ ಮುಂಭಾಗದ ಕುರುಬರಹಳ್ಳಿ ಗುಟ್ಟ.
ಸೊಣ್ಣದೇನಹಳ್ಳಿ ಮತ್ತು ಹೊಸಕೋಟೆಯ ಡೇರಿ ಮುಂಭಾಗದ ಕುರುಬರಹಳ್ಳಿ ಗುಟ್ಟದಲ್ಲಿ ರಾತ್ರಿ ಸಮಯದಲ್ಲಿ ಕಸ ಸುರಿಯಲಾಗುತ್ತಿದೆ. ಯಾರು ತಂದು ಸುರಿಯುತ್ತಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಆದರೆ ಕಸದ ಪ್ರಮಾಣ ಕಾಣ ಬಾರದೆಂದು ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ವಾಯು ಮಾಲಿನ್ಯ ಹೆಚ್ಚಾಗಿದೆ. ಆದರೆ ಇದಕ್ಕೆ ಕಡಿವಾಣ ಹಾಕಲು ಯಾರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ.
ದೊಡ್ಡಹುಲ್ಲೂರು ಮತ್ತು ಚೊಕ್ಕಹಳ್ಳಿ ಗ್ರಾಮಪಂಚಾಯಿತಿ ಜಂಟಿಯಾಗಿ ಸೊಣದೇನಹಳ್ಳಿ ಗ್ರಾಮದಲ್ಲಿ 10 ಗುಂಟೆಯಲ್ಲಿ ವರ್ಷದ ಹಿಂದೆ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ನಿರ್ಮಿಸಿವೆ . ಆದರೆ ಇಲ್ಲಿವರೆಗೂ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಬೇಕಾದ ಯಂತ್ರೋಪಕರಣಗಳನ್ನು ತರಿಸಿಲ್ಲ. ಕಸವನ್ನು ಹೇಗೆ ವಿಂಗಡಿಸಲಾಗುತ್ತದೆ ಎಂಬುದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಬದಲಿಗೆ ಘಟಕವನ್ನು ಡಂಫಿಂಗ್ ಯಾರ್ಡ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿಯೇ ಬೆಂಗಳೂರಿನಿಂದ ರಾತ್ರಿ ಸಂದರ್ಭದಲ್ಲಿ ವಾಹನಗಳಲ್ಲಿ ಕಸ ತಂದು ಸುರಿದು ಬೆಂಕಿ ಹಚ್ಚುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮವನ್ನು ಕೈಗೊಳ್ಳದಂತೆ ಜಾಣ ಕುರುಡತನ ಪ್ರದರ್ಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.