
ಹೊಸಕೋಟೆ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಯೋಜನೆಗಳನ್ನು ತಲುಪಿಸುವಲ್ಲಿ ಇಲಾಖೆಗಳು ನಿಸ್ವಾರ್ಥ ಮತ್ತು ಕರ್ತವ್ಯಪರತೆಯಿಂದ ಕಾರ್ಯ ನಿರ್ವಹಿಸಬೇಕು. ಆದರೆ ತಾಲ್ಲೂಕಿನಲ್ಲಿ ಕೆಲವೊಂದು ಇಲಾಖೆಗಳು ಬೇಜವಾಬ್ದಾರಿತನದಿಂದ ನಿರೀಕ್ಷಿಸಿದಷ್ಟು ಅಭಿವೃದ್ದಿ ಕೆಲಸಗಳಲ್ಲಿ ಸಾಧನೆಯನ್ನು ಮಾಡಲಾಗಿಲ್ಲ ಎಂದು ಅಧಿಕಾರಿಗಳನ್ನು ಶಾಸಕ ಶರತ್ ಬಚ್ಚೇಗೌಡ ತರಾಟೆಗೆ ತೆಗೆದುಕೊಂಡರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ 2025-26ನೇ ಸಾಲಿನ ತ್ರೈ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ವಿವಿಧ ಇಲಾಖೆಗಳ ಕಾರ್ಯ ವೈಖರಿಗೆ ಶಾಸಕ ಅಸಮಾಧಾನ ವ್ಯಕ್ತಪಡಿಸಿದರು.
‘ತಾಲ್ಲೂಕಿನಲ್ಲಿ ಕೈಮಗ್ಗ ಕೇಂದ್ರಗಳು ಎಲ್ಲಿವೆ ಎಂಬುದೇ ನಿಮಗೆ ಗೊತ್ತಿಲ್ಲ ಇನ್ನೇನು ಕೆಲಸ ಮಾಡುತ್ತೀರಿ. ಮೊದಲು ತಾಲ್ಲೂಕಿನ ನೆಲವಾಗಲಾ, ನಾರಾಯಣಕೆರೆ ಗ್ರಾಮದ ಕೈಮಗ್ಗವನ್ನು ವೀಕ್ಷಿಸಿ’ ಎಂದು ಜವಳಿ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಆರೋಗ್ಯ ಇಲಾಖೆ ಅಂಕಿ–ಅಂಶ ಗಮಿಸಿದರೆ ಕಳೆದ 9 ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರು ಹೆರಿಗೆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ. ಮತ್ತೊಂದೆಡೆ ಸಿಜರಿನ್ ಮಾಡಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಕೆಲಸಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ 376 ಶಾಲೆಗಳಿದ್ದು, ಕಳೆದ ಸಾಲಿಗೆ ಹೋಲಿಸಿಕೊಂಡರೆ ದಾಖಲಾತಿ ಕುಸಿತ ಕಂಡಿದೆ. ಬ್ಯಾಲಹಳ್ಳಿ ಮತ್ತು ತೆನಿಯೂರು ಶಾಲೆಗಳನ್ನು ಮುಚ್ಚಲಾಗಿದೆ. ದೈಹಿಕರ ಶಿಕ್ಷಕರು ಮತ್ತು ಸಹ ಶಿಕ್ಷಕರ ಕೊರತೆ ಇದೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಇದು ರಾಜ್ಯಮಟ್ಟದ ಸಮಸ್ಯೆಯಾಗಿದ್ದು, ಸರ್ಕಾರವೇ ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ತಾಲ್ಲೂಕಿನ ಸರ್ಕಾರಿ ಶಾಲೆ ಬಲ ವರ್ಧನೆ ಮತ್ತು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕಲ್ಪಿಸಲಾಗುವುದು. ಇದಕ್ಕಾಗಿ ಮ್ಯಾಗ್ನಟ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಹೈನುಗಾರರನ್ನು ಉತ್ತೇಜಿಸಲು ಮಿಲ್ಕಿಂಗ್ ಸ್ಪರ್ಧೆಯನ್ನು ಸೂಲಿಬೆಲೆ ಮತ್ತು ಜಡಿಗೇನಹಳ್ಳಿ ಭಾಗದಲ್ಲಿ ಆಯೋಜಬೇಕೆಂದು ಸಲಹೆ ನೀಡಿರು.
ಜಲಜೀವನ್ ಯೋಜನೆಯ ಹೆಸರಿನಡಿ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ. ಎರಡು ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ಓವರ್ ಹೆಡ್ ಟ್ಯಾಂಕ್ ಈಗಾಲೇ ಸೋರುವ ಮಟ್ಟಕ್ಕೆ ಬಂದಿವೆ. ಎರಡು ವರ್ಷಗಳಲ್ಲಿ ಪೈಪ್ ಅಳವಡಿಕೆ ಬಿಟ್ಟರೆ ಬೇರೆ ಯಾವ ಕೆಲವನ್ನು ಮಾಡಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
‘ಮುತ್ಕೂರು ಗ್ರಾಮದಲ್ಲಿ ರಸ್ತೆ ಮಧ್ಯೆಯೆ ಅಂಗಡಿ ಮುಂಗಟ್ಟು, ಕಾಂಪೌಂಡ್ ನಿರ್ಮಿಸಲಾಗಿದೆ. ಇದನ್ನು ನಾನು ಬಂದು ತೆರವುಗೊಳಿಸಬೇಕಾ?, ತೆರವುಗೊಳಿಸುವ ಜವಾಬ್ದಾರಿ ಯಾರಿದ್ದು?’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ಗಳನ್ನು ಪ್ರಶ್ನಿಸಿದರು.
ತಹಶೀಲ್ದಾರ್ ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಬಚೇಗೌಡ, ಕ್ಷೇತ್ರಶಿಕ್ಷಣಾಧಿಕಾರಿ ಪದ್ಮನಾಬ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು, ನಗರಸಭೆ ಆಯುಕ್ತ ನೀಲಲೋಚನಾ ಪ್ರಭು, ಡಿವೈಎಸ್‌ಪಿ ಮಲ್ಲೇಶ್ ಇದ್ದರು.
ದೂರು ಕೊಟ್ಟರಷ್ಟೇ ಕ್ರಮವೇ?
117 ಪ್ರಕರಣ 8 ಗಂಭೀರ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡುತ್ತಿದ್ದೀರಿ? ಆದರೆ ಎಷ್ಟೋ ಹಳ್ಳಿಗಲ್ಲಿ ಕದ್ದುಮುಚ್ಚಿ ಮದ್ಯ ಮಾರಾಟ ಮಾಡಲಾಗುತ್ತಿದೆ. ನಿಮಗೆ ತಿಳಿದಿದಿಯೇ? ಇಂತಹದನನು ಪತ್ತೆಹಚ್ಚಿ ಎಷ್ಟು ಪ್ರಕರಣ ದಾಖಲಿಸಿದ್ದೀರಿ? ದೂರು ಕೊಟ್ಟರೆ ಮಾತ್ರವೇ ಜಪ್ತಿ ಮಾಡುತ್ತೇವೆ ಎನ್ನುತ್ತೀರಿ? ಹಾಗಾದರೆ ದೂರು ಬಂದಿಲ್ಲ ಎಂದರೆ ಕ್ರಮ ಕೈಗೊಳ್ಳುವುದಿಲ್ಲವೇ’ ಎಂದು ಶಾಸಕ ಶರತ್ ಬಚ್ಚೇಗೌಡ ಅಬಕಾರಿ ಅಧಿಕಾರಿಗಳ ಬೆವರಿಳಿಸಿದರು.
ಪೋಡಿ ಆಂದೋಲನದಲ್ಲಿ ಸಾಧನೆ ಪೋಡಿ ಆಂದೋಲನದಲ್ಲಿ ಇದುವರೆಗೆ ಸುಮಾರು 300 ಕ್ಕೂ ಹೆಚ್ಚು ಬ್ಲಾಕ್‌ಗಳಲ್ಲಿ ರೈತರಿಗೆ ಖಾತೆ ಪಹಣಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 300 ಕ್ಕೂ ಹೆಚ್ಚು ಬ್ಲಾಕ್ ಗಳಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಇನ್ನೂ ಎರಡು ವಾರಗಳಲ್ಲಿ ವಿತರಿಸಲಾಗುವುದು. ಹೊಸ ಬ್ಲಾಕ್ ಸೃಷ್ಟಿಯಲ್ಲಿ ರಾಜ್ಯದಲ್ಲೇ ತಾಲ್ಲೂಕು ಮೊದಲ ಸ್ಥಾನದಲ್ಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.