ADVERTISEMENT

ನಂದಗುಡಿ | ರಾಜ್ಯೋತ್ಸವ ಪರಿಕಲ್ಪನೆ ಬದಲಾಗಬೇಕು: ಚಂದ್ರಶೇಖರ್ ನಂಗಲಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 5:37 IST
Last Updated 6 ಜನವರಿ 2026, 5:37 IST
ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಮತ್ತು ಸ್ತ್ರಿಶಕ್ತಿ ಸ್ವ ಸಹಾಯ ಸಂಘಗಳು ಜನ ರಾಜ್ಯೋತ್ಸವ ಮತ್ತು ಕುವೆಂಪು ಜಯಂತಿ ಅಚರಿಸಲಾಯಿತು
ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಮತ್ತು ಸ್ತ್ರಿಶಕ್ತಿ ಸ್ವ ಸಹಾಯ ಸಂಘಗಳು ಜನ ರಾಜ್ಯೋತ್ಸವ ಮತ್ತು ಕುವೆಂಪು ಜಯಂತಿ ಅಚರಿಸಲಾಯಿತು   

ನಂದಗುಡಿ(ಹೊಸಕೋಟೆ): ಕನ್ನಡ ಭಾಷೆ ಎಂದು ಅನ್ನದ ಭಾಷೆಯಾಗಿ ರೂಪುಗೊಳ್ಳುತ್ತದೆಯೋ ಅಂದು ಕನ್ನಡದ ಹಿರಿಮೆ, ಗರಿಮೆ ಇಮ್ಮಡಿಗೊಳ್ಳುತ್ತದೆ ಎಂದು ವಿಮರ್ಶಕ, ಸಾಹಿತಿ ಚಂದ್ರಶೇಖರ್ ನಂಗಲಿ ಅಭಿಪ್ರಾಯಪಟ್ಟರು 

‘ಬ್ರಿಟಿಷರು ನಮ್ಮನ್ನು ಆಳಿ ಹೋದ ನಂತರವೂ ಪರಭಾಷೆಯಾದ ಇಂಗ್ಲೀಷ್ ಇಂದಿಗೂ ನಮ್ಮನ್ನು ಅಳುತ್ತಿದೆ.ಪಾಶ್ಚಾತ್ಯ ರಾಷ್ಟ್ರಗಳಲ್ಲಿ  ಅವರದೇ ಮಾತೃ ಭಾಷೆ ಆಡಳಿತ ಮತ್ತು ಜನಮಾನಸದ ಭಾಷೆಯಾಗಿರುತ್ತದೆ ಎಂದರು.

ಹಿಂಡಿಗನಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ 70ನೇ ಜನ ರಾಜ್ಯೋತ್ಸವ ಮತ್ತು ಕುವೆಂಪು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಹಿಂಡಿಗನಾಳ, ಹೊಸವೆಂಕಟಾಪುರ, ನೆಲವಾಗಿಲು ಗ್ರಾಮಗಳ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಮತ್ತು ಸ್ತ್ರಿಶಕ್ತಿ ಸ್ವ ಸಹಾಯ ಸಂಘಗಳು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದವು.

ಅಡಂಬರದ ರಾಜ್ಯೋತ್ಸವ ಬಿಟ್ಟು ಇನ್ನು ಮುಂದೆ ಜನ ರಾಜ್ಯೋತ್ಸವ ಅಚರಿಸಬೇಕಿದೆ. ಜನಮಾನಸದಿಂದ ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕಿದೆ. ಕರ್ನಾಟಕದಲ್ಲಿ ಯಾರೆ ಇರಲಿ ಅವರೆಲ್ಲರೂ ಕನ್ನಡಿಗರೆ. ಅವರ ಮಾತೃ ಭಾಷೆ ಯಾವುದೇ ಇರಲಿ ಅವರೆಲ್ಲರೂ ಕನ್ನಡಿಗರು ಎಂದು ಒಪ್ಪಿಕೊಳ್ಳುವುದೇ ನಿಜವಾದ ಕನ್ನಡದ ಕಸ್ತೂರಿತನ ಎಂದರು. 

ಇಂದು ಶಿಕ್ಷಣ, ಆರೋಗ್ಯ, ಕೃಷಿ, ಧರ್ಮ ವ್ಯಾಪಾರೀಕರಣಗೊಂಡಿವೆ. ಇದರಿಂದಲೇ ಇಂದು ರೈತ, ಕೂಲಿ ಕಾರ್ಮಿಕ, ಮಹಿಳೆ ಮತ್ತು ಮಾಧ್ಯಮ ವರ್ಗದರು ಜೀವನ ನಡೆಸಲು ಸಾಧ್ಯವಾಗದಂತಹ ಉಸಿರುಗಟ್ಟಿಸುವಂತಹ ಸ್ಥಿತಿ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜನರು ನೂರು ಮತಗಳನ್ನು ತೊರೆದು ಮಹಾನ್ ಮನವಾತವಾದಿಗಳಾದ ಕುವೆಂಪು, ಅಲ್ಲಮಪ್ರಭು, ಬುದ್ಧ, ಬಸವ ತೋರಿಸಿಕೊಟ್ಟ ಅಧ್ಯಾತ್ಮದೆಡೆಗೆ ಸಾಗಬೇಕಿದೆ. ಇಲ್ಲವೆಂದರೆ ಮಾನವತ್ವ ನಶಿಸುತ್ತದೆ ಎಂದರು.

ಕನ್ನಡವು ಜನರ ಸಮಸ್ಯೆ, ನೋವುಗಳಿಗೆ ಧ್ವನಿಯಾಗಿ ನಿಲ್ಲುವ ಹಂತಕ್ಕೆ ಬೆಳೆಯಬೇಕಿದೆ. ಇಲ್ಲವೆಂದರೆ ಕನ್ನಡದ ಹೆಸರಿನಲ್ಲಿ ಕಣ್ಣೋರೆಸುವ ಕೆಲಸಗಳು ಕಾಣದ ಕೈಗಳಿಂದ ಆಗುತ್ತವೆ ಎಂದು ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ತಾಲ್ಲೂಕು ಕಾರ್ಯದರ್ಶಿ ಮೋಹನ್ ಬಾಬು ಹೇಳಿದರು.

ಸ್ಫೂರ್ತಿ ಅಂಗವಿಕಲರ ಸಂಸ್ಥೆಯಿಂದ ಕುವೆಂಪು ಕವಿತೆಯ ಸಾಲುಗಳನ್ನು ಸುಸ್ರಾವ್ಯಾವಾಗಿ ಹಾಡಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿತ್ತು.

ಎಚ್ ಕೆ ನಾರಾಯಣ ಗೌಡ, ಗ್ರಾ. ಪಂ ಸದಸ್ಯರಾದ ಮಧು, ಚಿಂತಾಮಣಿ ಕೆ ಎಸ್ ಆರ್ ಟಿ ಸಿ ನಿರೀಕ್ಷಿಕರಾದ ಬೈರೆಡ್ಡಿ,  ವಿಜಯೇಂದ್ರ, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ವೆಂಕಟರಾಜು, ರಮೇಶ್ ವೇದಿಕೆಯಲ್ಲಿದ್ದರು. 

ಮಂದಿರ ಮಸೀದಿ ಚರ್ಚು ಈಗ ಸರ್ಕಾರವನ್ನು ಆಳುವ ಮಟ್ಟಕ್ಕೆ ಬೆಳೆಯುತ್ತಿವೆ. ದೇಶ ಪುನಃ ಮಧ್ಯಕಾಲದ ಅಂಧಕಾರದ ಯುಗಕ್ಕೆ ಮತ್ತೆ ಎಲ್ಲಿ ಮರಳುತ್ತೆವೋ ಎಂಬ ಆತಂಕ ಕಾಡುತ್ತಿದೆ
– ಚಂದ್ರಶೇಖರ್ ನಂಗಲಿ ವಿಮರ್ಶಕ
ಕ್ಯೂಬಾದಂತಹ ಸಣ್ಣ ರಾಷ್ಟ್ರದಲ್ಲಿ ಆರೋಗ್ಯ ವ್ಯವಸ್ಥೆ ಹೇಗಿದೆ ಎಂದರೆ ಪ್ರಧಾನಿ ಹಾಗೂ ಜನಸಾಮಾನ್ಯನಿಗೆ ಒಂದೇ ರೀತಿಯ ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆ. ಆದರೆ ಭಾರತದಲ್ಲಿ ಖಾಸಗೀಕರಣಗೊಂಡಿರುವ ವೈದ್ಯಕೀಯ ಕ್ಷೇತ್ರ ಜನಸಾಮಾನ್ಯನಿಗೆ ಒಂದು ರೀತಿ ಚಿಕಿತ್ಸೆ ಹಾಗೂ ಶ್ರೀಮಂತನಿಗೆ ಒಂದು ರೀತಿ ಚಿಕಿತ್ಸೆ ನೀಡುತ್ತದೆ
- ಮುನಿರಾಜು ತಾಲ್ಲೂಕು ದಲಿತ ಹಕ್ಕುಗಳ ಕಾರ್ಯದರ್ಶಿ ಹೊಸಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.