ADVERTISEMENT

ಆನೇಕಲ್: ಕಾನ್ಶಿರಾಂ ಶೋಷಿತ ಸಮುದಾಯದ ದನಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 3:44 IST
Last Updated 18 ಮಾರ್ಚ್ 2021, 3:44 IST
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಕಾನ್ಶಿರಾಂ ಜನ್ಮ ದಿನಾಚರಣೆ ನಡೆಯಿತು
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಕಾನ್ಶಿರಾಂ ಜನ್ಮ ದಿನಾಚರಣೆ ನಡೆಯಿತು   

ಆನೇಕಲ್:ಬಹುಜನರ ಕಲ್ಯಾಣಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿದ್ದ ಕಾನ್ಶಿರಾಂ ಅವರ ಹೋರಾಟ, ಸಂಘಟನೆ ಎಲ್ಲರಿಗೂ ಆದರ್ಶವಾಗಿದೆ. ಅವರ ತತ್ವ, ಚಿಂತನೆಗಳನ್ನು ಕಾರ್ಯಕರ್ತರು ಅಳವಡಿಸಿಕೊಳ್ಳುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಬಿಎಸ್‌ಪಿ ಪಕ್ಷ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ತಿಳಿಸಿದರು.

ಅವರು ತಾಲ್ಲೂಕಿನ ಚಂದಾಪುರದಲ್ಲಿ ಬಿಎಸ್‌ಪಿಯಿಂದ ಆಯೋಜಿಸಿದ್ದ ಕಾನ್ಶಿರಾಂ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿ ರಾಜಕೀಯಶಕ್ತಿಯಾಗಿ ರೂಪಿಸುವ ನಿಟ್ಟಿನಲ್ಲಿ ಅವರು ತಮ್ಮ ಜೀವಮಾನವೀಡಿ ಶ್ರಮಿಸಿದರು. ದೇಶದ ಆಡಳಿತ ಬಹುಜನರ ಕೈಗೆ ಬಂದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.

ADVERTISEMENT

ಅಣುವಿಜ್ಞಾನಿಯಾಗಿದ್ದ ಕಾನ್ಶಿರಾಂ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ಭಾರತದಲ್ಲಿ ಅಸಂಘಟಿತ ಸಮುದಾಯಗಳನ್ನು ಸಂಘಟಿಸಲು ಸೈಕಲ್‌ ಯಾತ್ರೆ ನಡೆಸಿದರು. ಅಂಬೇಡ್ಕರ್‌ ಅವರ ಚಿಂತನೆ ಅಳವಡಿಸಿಕೊಂಡು ಸಮಾಜ ಕಟ್ಟಲು ಶ್ರಮಿಸಿದರು. ಪ್ರಸ್ತುತ ಆಡಳಿತ ನಡೆಸುತ್ತಿರುವ ಬಿಜೆಪಿ ಸಂವಿಧಾನದ ಮೂಲ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷದಿಂದಲೂ ಜನರಿಗೆ ಯಾವುದೇ ಉಪಯೋಗವಿಲ್ಲ ಎಂದರು.

ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಚಿನ್ನಪ್ಪ ವೈ. ಚಿಕ್ಕಹಾಗಡೆ ಮಾತನಾಡಿ, ಶೋಷಿತ ಸಮುದಾಯಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಅವಕಾಶಗಳು ದೊರೆಯುತ್ತಿಲ್ಲ. ಶೋಷಿತರ ಪರ ಚಿಂತನೆಯುಳ್ಳ ಮತ್ತು ಬಹುಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಬಿಎಸ್‌ಪಿಯನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಹೊಸ ಶಕೆಗೆ ನಾಂದಿ ಹಾಡಬೇಕು ಎಂದರು.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಾಧಕರಿಗೆ ಸನ್ಮಾನಿಸಲಾಯಿತು. ಆಟೊ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಲ್ಲಪ್ಪ, ಜಿಲ್ಲಾ ಉಸ್ತುವಾರಿ ಮುದ್ದುಕೃಷ್ಣ, ಜಿಲ್ಲಾ ಅಧ್ಯಕ್ಷ ಸಿ.ಎಲ್. ಮುನಿಯಲ್ಲಪ್ಪ, ಮುಖಂಡರಾದ ಲೋಕೇಶಾಚಾರಿ, ಶಂಭಪ್ಪ, ಕುಮಾರಾಚಾರಿ, ಮಾದೇಶ್, ಮುನಿಯಲ್ಲಪ್ಪ, ಮುನೀರ್‌ ಬಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.