ADVERTISEMENT

ಬಿಐಎಲ್‌ನಲ್ಲಿ 12 ಸಾವಿರ ಉದ್ಯೋಗ ಸೃಷ್ಟಿ: ಸಿಇಒ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2023, 22:01 IST
Last Updated 11 ಅಕ್ಟೋಬರ್ 2023, 22:01 IST
   

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಂದಿನ ಎರಡು ವರ್ಷಗಳಲ್ಲಿ 12 ಸಾವಿರ ಉದ್ಯೋಗ ಸೃಷ್ಟಿಸಲಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಹರಿ ಮರಾರ್ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ನಡೆದ ವಾಣಿಜ್ಯ ಸಮಾವೇಶದಲ್ಲಿ ‘ಬೆಂಗಳೂರು ರೂಪಾಂತರ’ ಕುರಿತ ಚರ್ಚೆ‌‌ಯಲ್ಲಿ ಮಾತನಾಡಿದರು.

ನಗರದ ಉದ್ಯಮ, ಕೈಗಾರಿಕೆ ಮತ್ತು ಸಾರಿಗೆ ಕ್ಷೇತ್ರ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ವಿಮಾನ ನಿಲ್ದಾಣದ ಪ್ರಗತಿ ಇಡೀ ದೇಶಕ್ಕೆ ಮಾದರಿಯಾಗಿದೆ. ಎರಡನೇ ಟರ್ಮಿನಲ್ ಆರಂಭಕ್ಕೂ ಮುನ್ನ ನಿಲ್ದಾಣದಲ್ಲಿ 25 ಸಾವಿರ ಉದ್ಯೋಗಿಗಳು ಇದ್ದರು. ಈಗ 38 ಸಾವಿರಕ್ಕೆ ಏರಿಕೆ ಆಗಿದೆ. ಈ ಸಂಖ್ಯೆ ಇನ್ನೆರಡು ವರ್ಷದಲ್ಲಿ ಒಟ್ಟು 50 ಸಾವಿರ ತಲುಪಲಿದೆ ಎಂದರು.

ADVERTISEMENT

₹500 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಆವರಣದಲ್ಲಿ ಇಂಡಿಗೋ ಮತ್ತು ಏರ್ ಇಂಡಿಯಾ ಹಬ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಕೃಷಿ ಮಾರುಕಟ್ಟೆ ಹಾಗೂ ಆಧುನಿಕ ತಂತ್ರಜ್ಞಾನ ಕುರಿತು ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯದ ಕೃಷಿಕರನ್ನು ಉದ್ಯಮಿಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ನೂತನ ಯೋಜನೆ ರೂಪಿಸಲಾಗುವುದು ಎಂದರು.

2024ರ ಅಂತ್ಯದ ವೇಳೆಗೆ ನಿಲ್ದಾಣದ ಪ್ರಯಾಣಿಕರ ಸಂಖ್ಯೆ 4 ಕೋಟಿ ತಲುಪುವ ನಿರೀಕ್ಷೆ ಇದ್ದು, ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಅಗತ್ಯವಿದೆ ಎಂದರು.

ಎಫ್ಐಸಿಸಿಐ ಕರ್ನಾಟಕ ಕೌನ್ಸಿಲ್ ಅಧ್ಯಕ್ಷ ಉಲ್ಲಾಸ್ ಕಾಮತ್ ಮಾತನಾಡಿದರು.

ರೋಟರಿ ಇಂಟರ್‌ನ್ಯಾಷನಲ್‌ ಜಿಲ್ಲಾ ಗವರ್ನರ್ ಉದಯ ಕುಮಾರ ಭಾಸ್ಕರ್, ವಿಷನ್ ಗ್ರೂಪ್‌ನ ಪ್ರಶಾಂತ ಪ್ರಕಾಶ, ನಟ ಪ್ರಕಾಶ ಬೆಳವಾಡಿ, ಇಸ್ರೇಲ್‌ನ ಮಹಿಳಾ ಉದ್ಯಮಿ ನೋವಾ ಮುಜಾಫಿ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.