ದಾಬಸ್ ಪೇಟೆ: ಇಲ್ಲಿನ ರಾಜ್ಯ ಹೆದ್ದಾರಿ 3ರಲ್ಲಿ (ಕೊರಟಗೆರೆ, ಮಧುಗಿರಿ, ಪಾವಗಡ ಸಂಪರ್ಕ ಕಲ್ಪಿಸುವ ರಸ್ತೆ) ಸೋಮವಾರ ರಾತ್ರಿ 7.20ರ ಸಮಯದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ.
ಈ ಮಾರ್ಗದಲ್ಲಿ ಸಿಗುವ ಚನ್ನೋಹಳ್ಳಿ ಹಾಗೂ ನರಸೀಪುರ ನಡುವಿನ ಪೆಟ್ರೋಲ್ ಬಂಕ್‌ನಿಂದ ತುಸು ದೂರದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅದನ್ನು ನೋಡಿದ ಕೆಲ ವಾಹನ ಪ್ರಯಾಣಿಕರು ಭಯಗೊಂಡಿದ್ದಾರೆ.
ದಾಬಸ್ ಪೇಟೆ ಮಾರ್ಗದಿಂದ ನಾನು ವಾಹನದಲ್ಲಿ ಬರುತ್ತಿದ್ದೆ. ಪೆಟ್ರೋಲ್ ಬಂಕ್ ಬಿಟ್ಟು ಮುಂದೆ ಹೋಗುವಾಗ ರಸ್ತೆಯಲ್ಲಿ ಚಿರತೆ ಕಂಡಿತು. ಒಂದು ಕ್ಷಣ ಭಯವಾಯಿತು. ನರಸೀಪುರ ಕಡೆಯಿಂದ ವಾಹನದಲ್ಲಿ ಬರುತ್ತಿದ್ದವರು ಹೆದರಿದರು. ನಂತರ ಚಿರತೆ ಇಮಚೇನಹಳ್ಳಿ ಕಡೆ ಓಡಿತು ಎಂದರು ಪ್ರತ್ಯಕ್ಷದರ್ಶಿ ನಂಜೇಗೌಡ.
‘ಇದೇ ಸ್ಥಳದಲ್ಲಿ ಕೆಲವು ದಿನಗಳ ಹಿಂದೆ ಚಿರತೆ ಓಡಾಡುತ್ತಿತ್ತು. ನಾನು ಫೋನ್‌ನಲ್ಲಿ ಮಾತಾಡುತ್ತಾ ನಿಂತಿರುವಾಗ ರಾಮದೇವ ಬೆಟ್ಟದ ಕಡೆಯಿಂದ ಬಂದ ಚಿರತೆ ನನ್ನ ಸನಿಹದಲ್ಲೇ ಹಾದು ಹೋಯ್ತು. ನಾನು ನಾಯಿ ಇರಬೇಕು ಎಂದುಕೊಂಡೆ. ರಸ್ತೆಯಲ್ಲಿ ವಾಹನಗಳ ಬೆಳಕು ಬಿದ್ದಾಗ ಅದು ಚಿರತೆ ಅಂತ ತಿಳಿಯಿತು’ ಎಂದು ಉಮೇಶ್ ಹೇಳಿದರು.
ಸಂಜೆ ವೇಳೆಗೆ ಚಿರತೆ ಓಡಾಡುತ್ತಿದ್ದು, ಈ ಭಾಗದಲ್ಲಿರುವ ಒಂಟಿ ಮನೆಯವರು ಹಾಗೂ ವಾಹನ ಚಾಲಕರಲ್ಲಿ ಆತಂಕ ಮೂಡಿಸಿದೆ.
‘ಈ ಭಾಗದ ನಿವಾಸಿಗಳು ತಮ್ಮ ಮೇಕೆ, ಕುರಿ, ದನಗಳನ್ನು ಕೊಟ್ಟಿಗೆಗೆ ಕಟ್ಟಬೇಕು. ರಾತ್ರಿ ವೇಳೆ ಎಲ್ಲರೂ ಒಂಟಿಯಾಗಿ ಓಡಾಡಬಾರದು’ ಎಂದ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.