ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ| ಶಿಥಿಲಗೊಂಡ ವಿದ್ಯುತ್‌ ಕಂಬ: ನೇತಾಡುತ್ತಿವೆ ತಂತಿಗಳು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:08 IST
Last Updated 19 ಫೆಬ್ರುವರಿ 2026, 5:08 IST
ಹೊಸಕೋಟೆ ತಾಲ್ಲೂಕಿನ ಕೆಂಬಡಿಗಾನಹಳ್ಳಿ ರೈತರ ತೋಟಗಳಲ್ಲಿ ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್‌ ಕಂಬಗಳು
ಹೊಸಕೋಟೆ ತಾಲ್ಲೂಕಿನ ಕೆಂಬಡಿಗಾನಹಳ್ಳಿ ರೈತರ ತೋಟಗಳಲ್ಲಿ ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್‌ ಕಂಬಗಳು   

ಮುಗಬಾಳ(ಹೊಸಕೋಟೆ): ರೈತರ ಜಮೀನಿನಲ್ಲಿರುವ ವಿದ್ಯುತ್‌ ಕಂಬಗಳು ಶಿಥಿಲಗೊಂಡು ವಿದ್ಯುತ್‌ ತಂತಿ ಬಾಗುತ್ತಿದೆ. ಕೆಲವೆಡೆ ತಂತಿಗಳು ತುಂಡರಿಸಿದ್ದು, ಅಪಾಯ ಆಹ್ವಾನಿಸುತ್ತಿದೆ.

ಮುಗಬಾಳ ಪಂಚಾಯಿತಿ ವ್ಯಾಪ್ತಿಯ ಕೆಂಬಡಿಗಾನಹಳ್ಳಿ ರೈತರ ತೋಟಗಳಲ್ಲಿ ವಿದ್ಯುತ್‌ ತಂತಿಗಳು ಕೈಗೆ ಸಿಗುವಷ್ಟು ಕೆಳೆಗೆ ನೇತಾಡುತ್ತಿವೆ. ಕಂಬ ಮುರಿದು ಬೀಳುವ ಸ್ಥಿತಿ ತಲುಪಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಕ್ಯಾರೇ ಎನ್ನುತ್ತಿಲ್ಲ. 

ಈಚೆಗೆ ಮುಗಬಾಳ, ಜಡಿಗೇನಹಳ್ಳಿ, ಹೆತ್ತಕ್ಕಿ ಮೊದಲಾದ ಪಂಚಾಯಿತಿ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ರೈತರ ಅನಧಿಕೃತ ನೀರಾವರಿ ಪಂಪ್‌ಸೆಟ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕಾರ್ಯಾಚರಣೆ ನಡೆಸಿದ್ದರೂ, ಇದೇ ಗ್ರಾಮ ಪಂಚಾಯಿತಿ ವಿದ್ಯುತ್‌ ಕಂಬಗಳು ಹಾಗೂ ತಂತಿಗಳು ಅಪಾಯ ಸ್ಥಿತಿಯಲ್ಲಿದ್ದರೂ ನಿರ್ಲಕ್ಷ್ಯವಹಿಸಿದ್ದಾರೆ.

ADVERTISEMENT

ಈ ಹಿಂದೆಯೇ ಒಮ್ಮೆ ಕುರಿಗಾಹಿಗಳಿಗೆ ವಿದ್ಯುತ್ ಸ್ಪರ್ಶವಾಗಿ ಸ್ವಲ್ಪ ಅಂತರದಲ್ಲಿ ರಾಣಪಾಯದಿಂದ ಪಾರಾಗಿದ್ದಾರೆ. ಇಷ್ಟಾದರೂ ವಿದ್ಯುತ್ ತಂತಿ ಸರಿಪಡಿಸಿಲ್ಲ. ಶಿಥಿಲ ಕಂಬಗಳನ್ನು ಬದಲಿಸಿಲ್ಲ. ರೈತರ ಪ್ರಾಣಕ್ಕೆ ಬೆಲೆ ಇಲ್ಲವೇ’  ಕೆಂಬಡಿಗಾನಹಳ್ಳಿಯ ರೈತ ಮಹಿಳೆ ಕಮಲ ಪ್ರಶ್ನಿಸಿದ್ದಾರೆ.

‘ವಿದ್ಯುತ್ ಕಂಬಗಳು ತಂತಿ ಸಮೇತ ಬಾಗಿದೆ. ಪ್ರತಿನಿತ್ಯ ಈ ಭಾಗದ ಮೂಲಕವೇ ರೈತರು ತಮ್ಮ ಜಮೀನುಗಳಿಗೆ ಮತ್ತು ಜಾನುವಾರುಗಳ ಮೈ ತೊಳೆಯಲು ಕೆರೆಗೆ ತೆರಳಬೇಕಿದೆ. ಇಂಥ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ’ ಎಂದು ರೈತ ಕುಮಾರ್‌ ಪ್ರಶ್ನಿಸಿದ್ದಾರೆ.

ಹೊಸಕೋಟೆ ಕೆಂಬಡಿಗಾನಹಳ್ಳಿಯಲ್ಲಿ ಕೈಗೆ ಎಟಕುವಷ್ಟು ನೇತಾಡುತ್ತಿರುವ ವಿದ್ಯುತ್‌ ತಂತಿ
ವಿದ್ಯುತ್ ಕಂಬ ಮುರಿದು ಬಿದ್ದು 3-4 ತಿಂಗಳಾಗಿದೆ. ಬೆಸ್ಕಾಂ ಅಧಿಕಾರಿಗಳಿಗೆ ಎಷ್ಟು ಬಾರಿ ದೂರು ನೀಡಿದರೂ ಪ್ರಯೋಜನ ಆಗಿಲ್ಲ
ಪಿಲ್ಲಪ್ಪ ರೈತ ಕೆಂಬಡಿಗಾನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.