
ದೊಡ್ಡಬಳ್ಳಾಪುರ: ಕುವೆಂಪು ಅವರು ರಚಿಸಿರುವ ನಾಡಗೀತೆಗೆ ನೂರು ವರ್ಷ ತುಂಬಿದ ಸಂಭ್ರಮವನ್ನು ನಗರದ ವಿವಿಧ ಶಾಲೆಗಳ ಸಾವಿರ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ಆಚರಿಸಲಾಗುತ್ತಿದೆ.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನ.1 ರಂದು ಡಾ.ರಾಜ್ ಕುಮಾರ್ ಪ್ರತಿಮೆ ಮುಂಭಾಗ ನಡೆಯುವ ಕರ್ನಾಟಕ ರಾಜ್ಯೋತ್ಸವದಲ್ಲಿ ಸಾವಿರ ಸ್ವರಗಳ ಸಂಗಮ ಗಾಯನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜ್ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ, ಕುವೆಂಪು ಅವರು 1924-25ರಲ್ಲಿ ‘ಕನ್ನಡ ರಾಷ್ಟ್ರಗೀತೆ’ ಎಂದು ನಾಡಗೀತೆಯನ್ನು ಬರೆದಿದ್ದರು. 2004ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಅಧಿಕೃತ ನಾಡ ಗೀತೆಯಾಗಿಸಿ ಅದಕ್ಕೊಂದು ವಿಶೇಷ ಸ್ಥಾನ ನೀಡಿತು. ಶಾಲೆಗಳಲ್ಲಿ ತರಗತಿಗಳು ಆರಂಭವಾಗುವ ಮೊದಲು ಪ್ರತಿದಿನ ಹಾಡಬೇಕು. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಹ ಹಾಡಬೇಕು ಎಂದು ನಿರ್ದೇಶಿಸಿತು ಎಂದು ಸ್ಮರಿಸಿದರು.
ಕುವೆಂಪು ಅವರು ರಚಿಸಿರುವ ನಾಡಗೀತೆಗೆ 1960ರಲ್ಲಿ ಗಾಯಕ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜಿಸಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕುವೆಂಪು ಅವರ ಸಮ್ಮುಖದಲ್ಲಿ ಅನಂತಸ್ವಾಮಿ ಕೂಡ ಇದನ್ನು ಹಾಡಿದ್ದರು. ಕರ್ನಾಟಕವನ್ನು ಭಾರತಮಾತೆಯ ಮಗಳು ಎಂದು ಬಣ್ಣಿಸುತ್ತದೆ. ಈ ಗೀತೆಯು ಕರ್ನಾಟಕದ ಇತಿಹಾಸ, ಸಂಸ್ಕೃತಿ, ಭಾಷೆ ಮತ್ತು ವೈವಿಧ್ಯಮಯ ಜನಸಮುದಾಯಗಳ ಶಾಂತಿಯುತ ಸಹಬಾಳ್ವೆಯನ್ನು ಕೊಂಡಾಡುತ್ತದೆ. ಇದು ಕನ್ನಡಿಗರಲ್ಲಿ ಅಭಿಮಾನ ಮತ್ತು ಸ್ಫೂರ್ತಿಯನ್ನು ತುಂಬುವ ಮೂಲಕ ನಾಡಿನ ಘನತೆಯನ್ನು ಸಾರುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.