ADVERTISEMENT

‘ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗದ ಸ್ನೇಹಿ’

ಭಾರತೀಯ ಮಜ್ದೂರ್ ಸಂಘದಿಂದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:24 IST
Last Updated 29 ಡಿಸೆಂಬರ್ 2025, 5:24 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಭಾರತೀಯ ಮಜ್ದೂರ್ ಸಂಘದಿಂದ ಕಾರ್ಮಿಕರ ಸಂಹಿತೆಗಳ ಬಗ್ಗೆ ಕಾರ್ಯಾಗಾರ ನಡೆಯಿತು
ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಭಾರತೀಯ ಮಜ್ದೂರ್ ಸಂಘದಿಂದ ಕಾರ್ಮಿಕರ ಸಂಹಿತೆಗಳ ಬಗ್ಗೆ ಕಾರ್ಯಾಗಾರ ನಡೆಯಿತು   

ಆನೇಕಲ್: ಕೇಂದ್ರ ಸರ್ಕಾರದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಧ್ವನಿ ಇಲ್ಲದ ಅಸಂಘಟಿತ ಕಾರ್ಮಿಕರಿಗೆ ಧ್ವನಿಯಾಗಿದೆ. ಓಲಾ, ಉಬರ್ ಸೇರಿದಂತೆ ಗಿಗ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡುತ್ತದೆ ಎಂದು ಭಾರತೀಯ ಮಜ್ದೂರ್ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಸುರೇಂದ್ರನ್ ಹೇಳಿದರು.

ತಾಲ್ಲೂಕಿನ ಅತ್ತಿಬೆಲೆಯಲ್ಲಿ ಭಾರತೀಯ ಮಜ್ದೂರ್ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಮಿಕರ ಸಂಹಿತೆ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು.

ಈ ಹಿಂದೆ ಇದ್ದ ಸ್ವಾತಂತ್ರ್ಯ ಪೂರ್ವದ 29 ಕಾರ್ಮಿಕ ಕಾಯ್ದೆಗಳನ್ನು ಸರಳಿಕೃತಗೊಳಿಸಿ, ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ರೂಪಿಸಲಾಗಿದ್ದು, ಕಾರ್ಮಿಕ ಸಂಹಿತೆಗಳು ಕಾರ್ಮಿಕ ಸ್ನೇಹಿಯಾಗಿದೆ ಎಂದು ಹೇಳಿದರು.

ADVERTISEMENT

ಈ ಹಿಂದಿನ ಕಾಯ್ದೆಗಳಲ್ಲಿ ವೇತನದ ಬಗ್ಗೆ ಒಂದೊಂದು ಕಾಯ್ದೆಗಳಲ್ಲಿ ಒಂದೊಂದು ವ್ಯಾಖ್ಯಾನಗಳಿದ್ದವು. ಇದೀಗ ಹೊಸ ಸಂಹಿತೆಯಲ್ಲಿ ವೇತನದ ವ್ಯಾಖ್ಯಾಯನ್ನು ಸ್ಪಷ್ಟವಾಗಿಸಲಾಗಿದೆ. ಕಾರ್ಮಿಕ ಕಾಯ್ದೆಗಳಲ್ಲಿ ವಿವಿಧ ಬಗೆಯ ಕಾರ್ಮಿಕ ನ್ಯಾಯಾಲಗಳಿದ್ದವು ಇದೀಗ ಒಂದೇ ರೀತಿಯ ಕಾರ್ಮಿಕ ನ್ಯಾಯಾಲಯ ರೂಪಿಸಲಾಗಿದೆ. ಉದ್ಯೋಗ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಕಾರ್ಮಿಕರನ್ನು ಗುಲಾಮೀಕರಣಗೊಳಿಸುವ ಹುನ್ನಾರವನ್ನು ಹೊಸ ಕಾರ್ಮಿಕ ಸಂಹಿತೆಗಳು ಬದಲಾಯಿಸಿದೆ. ಮಾಲೀಕ ಮತ್ತು ಕೆಲಸಗಾರರ ನಡುವಿನ ಔದ್ಯೋಗಿಕ ಸಂಬಂಧವನ್ನು ವೃದ್ಧಿಸಲಿದೆ.  ಇದೊಂದು ಕಾರ್ಮಿಕರ ವೈಚಾರಿಕ ಕ್ರಾಂತಿಯಾಗಿದೆ ಎಂದು ಹೇಳಿದರು.

ಕಾರ್ಮಿಕ ಇಲಾಖೆಯ ಆಯುಕ್ತ ಸಂದೀಪ್, ಶಿಕ್ಷಣಾಧಿಕಾರಿ ಕುಮರೇಶನ್, ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಭಾರತದ ಸಂಘಟನಾ ವಿಭಾಗದ ದೊರೈರಾಜ್‌, ರಾಜ್ಯ ಘಟಕದ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಉಪಾಧ್ಯಕ್ಷ ವೆಂಕಟೇಶ್ ಇದ್ದರು.

ಹೊಸ ಕಾನೂನಿನ ಬಗ್ಗೆ ಅಪಪ್ರಚಾರ ಕಾರ್ಮಿಕರ ಸಂಹಿತೆಗಳ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ವಿವಿಧೆಡೆ ವದಂತಿ ಹಬ್ಬಿಸಲಾಗುತ್ತಿದೆ. ಕೆಲಸದ ಸಮಯದ ಬಗ್ಗೆ ಅನವಶ್ಯಕವಾಗಿ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಹೊಸ ಕಾರ್ಮಿಕ ಸಂಹಿತೆಗಳಿಂದ ಕಾರ್ಮಿಕರ ಹಕ್ಕುಗಳು ಹೆಚ್ಚಾಗುತ್ತವೆ. ವೈದ್ಯಕೀಯ ಹಕ್ಕು ಸಮಾನ ಕೆಲಸಕ್ಕೆ ಸಮಾನ ವೇತನ ಮಹಿಳಾ ಸಬಲೀಕರಣಕ್ಕೆ ಸಂಹಿತೆಗಳು ಉಪಯುಕ್ತವಾಗಿದೆ. ನೇಕಾರರು ಬೀದಿಬದಿ ಕಾರ್ಮಿಕರು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಲು ಮತ್ತು ಸಾಮಾಜಿಕವಾಗಿ ಸಬಲರಾಗಲು ಹೊಸ ಕಾನೂನು ಉಪಯುಕ್ತವಾಗಿದೆ ಎಂದು ಭಾರತೀಯ ಮಜ್ದೂರ್ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಸುರೇಂದ್ರನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.