ADVERTISEMENT

ಆನೇಕಲ್‌: ಪರ್ಯಾಯ ಮಾರ್ಗದಲ್ಲೂ ದಟ್ಟಣೆ

ಹೆದ್ದಾರಿಯಲ್ಲಿ ಭೂಕುಸಿತ; ಹೆದ್ದಾರಿಯಲ್ಲಿ ಇಳಿದ ವಾಹನ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:28 IST
Last Updated 6 ಫೆಬ್ರುವರಿ 2026, 6:28 IST
<div class="paragraphs"><p>ಆನೇಕಲ್‌ ತಾಲ್ಲೂಕಿನ ತಿರುಮಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಗುರುವಾರ ವಿರಳವಾಗಿತ್ತು</p></div>

ಆನೇಕಲ್‌ ತಾಲ್ಲೂಕಿನ ತಿರುಮಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಗುರುವಾರ ವಿರಳವಾಗಿತ್ತು

   

ಆನೇಕಲ್:  ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿನ ಕಾಮಗಾರಿ ಸ್ಥಳದಲ್ಲಿ ಬುಧವಾರ ಉಂಟಾಗಿದ್ದ ಭೂಕುಸಿತದಿಂದ ಗುರುವಾರ ವಾಹನ ಸಂಪೂರ್ಣ ದಟ್ಟಣೆ ಕಡಿಮೆಯಾಗಿತ್ತು. ಪರ್ಯಾಯ ಮಾರ್ಗದಲ್ಲೂ ವಾಹನ ದಟ್ಟಣೆ ಹೆಚ್ಚಾಗಿದೆ. ಗ್ರಾಮೀಣ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದರಿಂದ ಸ್ಥಳೀಯರ ಓಡಾಟಕ್ಕೆ ತೊಂದರೆ ಆಯಿತು.

ಸಾಮಾಜಿಕ ಜಾಲತಾಣಗಳಲ್ಲಿ ಭೂಕುಸಿತದ ವಿಡಿಯೊ ಹರಿದಾಡಿದ್ದರಿಂದ ವಾಹನಗಳ ಸಂಖ್ಯೆ ಇಳಿಮುಖವಾಗಿತ್ತು. ಪರ್ಯಾಯ ಮಾರ್ಗಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ADVERTISEMENT

ಭೂಕುಸಿತದಿಂದ ಬುಧವಾರ ನಾಲ್ಕೈದು ಗಂಟೆಗಳಿಗೂ ಹೆಚ್ಚು ಕಾಲ ವಾಹನ ದಟ್ಟಣೆ ಉಂಟಾಗಿತ್ತು. ಇದರಿಂದ ಗುರುವಾರ ಚಂದಾಪುರದಿಂದ ಅತ್ತಿಬೆಲೆ, ಹೊಸೂರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಬಹುತೇಕ ಮಂದಿ ಪರ್ಯಾಯ ಮಾರ್ಗಗಳ ಬಳಕೆಗೆ ಮುಂದಾಗಿದ್ದರು. ಅತ್ತಿಬೆಲೆ, ಹೊಸೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ತೆರಳುವವರು ಆನೇಕಲ್‌—ಪೂನಪಲ್ಲಿ-ಹೊಸೂರು, ಆನೇಕಲ್‌—ಅತ್ತಿಬೆಲೆ ಕಡೆಯಿಂದ ಪ್ರಯಾಣಿಸಿದರು. ಇದರಿಂದ ಆನೇಕಲ್‌, ಚಂದಾಪುರಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. 

ವಾಹನ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಹೆಚ್ಚು ಮಂದಿ ಗ್ರಾಮೀಣ ಪ್ರದೇಶಗಳ ರಸ್ತೆಯನ್ನೇ ಬಳಸಿದರು. ಮರಸೂರು-ಮಾಯಸಂದ್ರ-ಅತ್ತಿಬೆಲೆ, ಬಂಡಾಪುರ-ಬಳಗಾರನಹಳ್ಳಿ-ತಿರುಮಗೊಂಡನಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿಯ ಪ್ರಯಾಣವನ್ನು ತಪ್ಪಿಸಿಕೊಳ್ಳಲು ಸಾರ್ವಜನಿಕರು ಹಪಹಪಿಸುತ್ತಿದ್ದರು. ಗುರುವಾರ ಸಹ ಹೆದ್ದಾರಿಯ ಅಂಡರ್‌ಪಾಸ್‌ ಕಾಮಗಾರಿ ಎಂದಿನಂತೆ ನಿಧಾನಗತಿಯಲ್ಲಿ ಸಾಗಿತ್ತು.

ಕಾಮಗಾರಿಗೆ ವೇಗ ನೀಡಿ: ಆನೇಕಲ್ ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ–44ರಲ್ಲಿ ಮೂರು ಕಡೆ ಅಂಡರ್‌ಪಾಸ್‌ ನಿರ್ಮಾಣಕ್ಕೆ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ ಏಳೆಂಟು ತಿಂಗಳಿನಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಗೆ ವೇಗ ನೀಡಿದರೆ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ವಾಹನ ದಟ್ಟಣೆಯಿಂದ ಪ್ರತಿನಿತ್ಯ ವಾಹನ ಸವಾರರು ಪರದಾಡುವಂತಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಈ ಬಗ್ಗೆ ತ್ವರಿತ ಕ್ರಮ ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಆಸ್ಪತ್ರೆಗಳಿಗೆ ಇಂದೊಂದೆ ದಾರಿ: ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಹೊಸೂರಿನಿಂದ ವೀರಸಂದ್ರವರೆಗೂ 15ಕ್ಕೂ ಹೆಚ್ಚು ಪ್ರತಿಷ್ಠಿತ ಆಸ್ಪತ್ರೆಗಳಿವೆ. ಬಹುತೇಕ ಆಸ್ಪತ್ರೆಗಳು ಹೃದಯ, ಮೂಳೆ ಸೇರಿದಂತೆ ವಿವಿಧ ವಿಭಾಗಗಳ ಆಸ್ಪತ್ರೆಗಳಾಗಿವೆ. ತುರ್ತು ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಾಹನ ದಟ್ಟಣೆಯಲ್ಲಿ ಸಿಲುಕಿದರೆ ಭಾರಿ ತೊಂದರೆ ಅನುಭವಿಸಬೇಕಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿರುವವರು ಈ ರಸ್ತೆಯನ್ನು ಬಳಸಬಾರದು ಎನಿಸುತ್ತದೆ ಆದರೆ ಕೆಲವು ಆಸ್ಪತ್ರೆಗಳಿಗೆ ಇದೊಂದೇ ಮಾರ್ಗವಾಗಿದೆ ಎಂದು ಅತ್ತಿಬೆಲೆಯ ಬಾಬು ತಿಳಿಸಿದರು.

ಸರ್ವೀಸ್‌ ರಸ್ತೆ ಹದಗೆಟ್ಟಿರುವುದು
ಮಂದಗತಿ ಕಾಮಗಾರಿ ಸ್ಥಳದಲ್ಲಿ ಭೂ ಕುಸಿತ
ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಕಾಮಗಾರಿ

ಸರ್ವೀಸ್‌ ರಸ್ತೆ ಅಭಿವೃದ್ಧಿಪಡಿಸಿ

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಅಂಡರ್‌ಪಾಸ್‌ ಕಾಮಗಾರಿ ಪೂರ್ಣಗೊಳ್ಳುವುದು ತಡವಾದರೆ ಅಲ್ಲಿಯವರೆಗೆ ಸರ್ವೀಸ್‌ ರಸ್ತೆ ನಿರ್ಮಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಿತ್ಯ ಈ ರಸ್ತೆ ಬಳಸುವ ವಾಹನ ಸವಾರರು ಒತ್ತಾಯಿಸಿದ್ದಾರೆ. ಸರ್ವೀಸ್‌ ರಸ್ತೆಯನ್ನೂ ಎಲ್ಲೆಂದರಲ್ಲಿ ಅಗೆಯಲಾಗಿದೆ.

ರಸ್ತೆಯ ಪಕ್ಕದಲ್ಲಿಯೇ ಬೃಹತ್‌ ಗಾತ್ರದ ಹಳ್ಳಗಳಿವೆ. ಚರಂಡಿ ಕೊಳಚೆ ನೀರು ಸರ್ವೀಸ್‌ ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಸರ್ವೀಸ್‌ ರಸ್ತೆಯಲ್ಲಿ ಸಂಚರಿಸುವುಉ ಕಷ್ಟವಾಗಿದೆ. ಹಾಗಾಗಿಯೇ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಹನ ದಟ್ಟಣೆಯನ್ನು ತಪ್ಪಿಸಲು ಸರ್ವೀಸ್‌ ರಸ್ತೆ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಹೊರ ವರ್ತುಲ ರಸ್ತೆ ಬೇಕು  ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ವಾಹನಗಳ ಓಡಾಟವೇ ಹೆಚ್ಚಾಗಿರುತ್ತವೆ.

ಇದರಿಂದ ಉಳಿದ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತಿದೆ. ಭಾರಿ ಗಾತ್ರದ ವಾಹನಗಳ ಓಡಾಟಕ್ಕೆ ಹೊರ ವರ್ತುಲ ರಸ್ತೆ ಸೂಕ್ತ. ಹೊಸೂರು ಮೂಲಕ ತಮಿಳುನಾಡಿಗೆ ತೆರಳುವ ಲಾರಿಗಳು ಸೇರಿದಂತೆ ಹಲವು ವಾಹನಗಳು ಹೊರ ವರ್ತುಲ ರಸ್ತೆಯಲ್ಲಿ ಹೋಗುವಂತೆ ಯೋಜನೆ ರೂಪಿಸಬೇಕು. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಹೆದ್ದಾರಿಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ. ಹೀಗಾಗಿ ಸರ್ಕಾರ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಚಂದಾಪುರದ ನಾರಾಯಣ್‌ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.