ಆನೇಕಲ್: ಕಾಂಗ್ರೆಸ್‌ಗೆ ದೇಶಪ್ರೇಮ ಈಗ ಹುಟ್ಟಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ರಾಷ್ಟ್ರದ ಭದ್ರತೆಯಲ್ಲಿ ಯಾರು ಸಹ ರಾಜಕಾರಣ ಮಾಡಬಾರದು. ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಕಾಂಗ್ರೆಸ್ ಪಕ್ಷ ಶ್ರಮ ವಹಿಸಿದೆ. 40 ವರ್ಷಗಳ ಹಿಂದೆ ಬಿಜೆಪಿ ಪಕ್ಷ ಇರಲಿಲ್ಲ. ಬಿಜೆಪಿಯಿಂದ ದೇಶ ಪ್ರೇಮ ಕಲಿಯುವ ಅವಶ್ಯಕತೆಯಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ತಾಲ್ಲೂಕಿನ ಬ್ಯಾಡದೇನಹಳ್ಳಿ ಗೇಟ್‌ನಲ್ಲಿ ಬಸವೇಶ್ವರ ಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಅಭಿವೃದ್ಧಿಪಡಿಸಿರುವ ವಾಣಿಜ್ಯ ಮಳಿಗೆ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ರಕ್ತದಲ್ಲಿಯೇ ದೇಶಪ್ರೇಮವಿದೆ. ಬಿಜೆಪಿಯವರು ಸುಳ್ಳು ಹೇಳಿಲ್ಲ ಅಂದ್ರೆ ತಿಂದ ಅನ್ನ ಜೀರ್ಣ ಅಗುವುದಿಲ್ಲ ಮತ್ತು ನಿದ್ದೆ ಬರುವುದಿಲ್ಲ ಎಂದರು.
ಭಾರತದ ಸೈನಿಕರ ಮೇಲೆ ನಮಗೆಲ್ಲಾ ಹೆಮ್ಮೆಯಿದೆ. ನೆಹರೂ ಅವರ ಅವಧಿಯಲ್ಲಿ ಚೀನಾ ಮೇಲೆ, ಲಾಲ್‌ಬಹದ್ದೂರ್ ಶಾಸ್ತ್ರೀ ಅವರ ಅವಧಿಯಲ್ಲಿ ಯುದ್ದಗಳು ನಡೆದಿದ್ದವು. ಇಂದಿರಾಗಾಂಧಿ ಅವರ ಅವಧಿಯಲ್ಲಿಯೂ ಪಾಕಿಸ್ತಾನಕ್ಕೆ ಯುದ್ದದಲ್ಲಿ ಸರಿಯಾದ ಪಾಠ ಕಲಿಸಲಾಗಿತ್ತು. ಆದರೂ ಪಾಕಿಸ್ತಾನಕ್ಕೆ ಬುದ್ದಿ ಬಂದಿಲ್ಲ. ಭಾರತೀಯ ಸೇನೆ ಕಾರ್ಯಾಚರಣೆ ಮೂಲಕ ಉಗ್ರರನ್ನು ಸೆದೆ ಬಡಿಯುತ್ತಿದೆ. ಇದರ ಜೊತೆಗೆ ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಮಿಲಿಟರಿ ಮತ್ತು ರಾಜಕಾರಣಿಗಳಿಗೆ ಬುದ್ದಿ ಕಲಿಸಬೇಕು ಎಂದರು.
ಕರ್ನಾಟಕದ 36 ಸಾವಿರ ದೇವಾಲಯಗಳಲ್ಲಿಯೂ ಸೈನಿಕರ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಲು ಸೂಚನೆ ನೀಡಲಾಗಿದೆ. ಇದರಿಂದ ಸೈನಿಕರಲ್ಲಿ ನೈತಿಕ ಬಲ ನೀಡಲಾಗುವುದು. ಭಾರತ ಸೈನ್ಯದೊಂದಿಗೆ ರಾಜ್ಯದ ಆರು ಕೋಟಿ ಕನ್ನಡಿಗರು ನಿಲ್ಲಲಿದ್ದಾರೆ ಎಂದು ತಿಳಿಸಿದರು.
ದೇಗುಲ ಆಸ್ತಿ ರಕ್ಷಣೆ: ಧಾರ್ಮಿಕ ಕೇಂದ್ರಗಳು ಆರ್ಥಿಕವಾಗಿ ಸದೃಢ ಗೊಳ್ಳಲು ವಿವಿಧ ಕಾರ್ಯಕ್ರಮ ರೂಪಿಸಿಕೊಳ್ಳಬೇಕು. ಸ್ಥಳೀಯರು ಮತ್ತು ಗ್ರಾಮಸ್ಥರು ಗ್ರಾಮಗಳಲ್ಲಿ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿ ಗ್ರಾಮಗಳಲ್ಲಿಯೂ ದೇವಾಲಯ, ಕೆರೆ ಕುಂಟೆಗಳು ಗ್ರಾಮದ ಆಸ್ತಿ. ಹಾಗಾಗಿ ಇವುಗಳನ್ನು ಅಭಿವೃದ್ಧಿಪಡಿಸಲು ಗ್ರಾಮಸ್ಥರು ಸಹಕರಿಸಬೇಕು ಎಂದರು.
ಸಂಸದ ಡಾ. ಸಿ.ಎನ್ ಮಂಜುನಾಥ್, ಶಾಸಕ ಬಿ ಶಿವಣ್ಣ, ವಿಧಾನ ಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮುನಿರೆಡ್ಡಿ, ತೋಟಗಾರಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಕೂನಮಡಿವಾಳ ಸೋಮಣ್ಣ, ಬಸವೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಪಿ.ಶಾಮ್ ರೆಡ್ಡಿ, ಉಪಾಧ್ಯಕ್ಷ ನಾರಾಯಣ ರೆಡ್ಡಿ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ರೆಡ್ಡಿ, ಸಹಕಾರ್ಯದರ್ಶಿ ಎಂ ಶಿವಣ್ಣ, ಖಜಾಂಚಿ ಆನಂದ್ ಪ್ರಕಾಶ್, ಸದಸ್ಯರಾದ ರವೀಂದ್ರ ರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ವೇಣುಗೋಪಾಲ್, ನಾರಾಯಣಪ್ಪ, ಶ್ರೀನಿವಾಸ್ ರೆಡ್ಡಿ, ಬಾಬು, ಅರುಣ್ ಕುಮಾರ್, ಮಹೇಶ್, ರಾಮ ರೆಡ್ಡಿ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.