ದೊಡ್ಡಬಳ್ಳಾಪುರ: ನಟ ಪ್ರಥಮ್ ಮೇಲಿನ ಹಲ್ಲೆ ಮತ್ತು ಕೊಲೆಯತ್ನ ಆರೋಪಿಗಳಾದ ಯಶಸ್ವಿನಿ, ಬೇಕರಿ ರಘು ಗುರುವಾರ ದೊಡ್ಡಬಳ್ಳಾಪುರನ್ಯಾಯಾಲಯಕ್ಕೆ ಹಾಜರಾಗಿ ನಿರೀಕ್ಷಣಾ ಜಾಮೀನು
ಪಡೆದುಕೊಂಡರು.
ನಗರದ ಜೆಎಂಎಫ್ ನ್ಯಾಯಾಲಯ ಇಬ್ಬರು ಆರೋಪಿಗಳಿಗೂ ತಲಾ ₹10 ಸಾವಿರ ಬಾಂಡ್, ಇಬ್ಬರ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿದೆ. ಪೊಲೀಸರು ವಿಚಾರಣೆಗೆ ಕರೆದಾಗ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದೆ.
ಜುಲೈ 22ರಂದು ತಾಲ್ಲೂಕಿನ ರಾಮಯ್ಯನಪಾಳ್ಯ ಸಮೀಪದ ಯಲ್ಲಮ್ಮ ದೇವಾಲಯ ವಾರ್ಷಿಕ ಪೂಜೆ ವೇಳೆ ತಮ್ಮ ಮೇಲೆ ಹಲ್ಲೆ, ಕೊಲೆ ಯತ್ನ ನಡೆದಿದೆ ಎಂದು ಪ್ರಥಮ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಥಮ್ ಅವರಿಗೆ ಸ್ಥಳ ಮಹಜರ್‌ಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಮುಂದೆ
ಹಾಜರಾದರು.
ಪ್ರಥಮ್ ಜೊತೆ ಘಟನೆ ನಡೆದ ಸ್ಥಳಕ್ಕೆ ತೆರಳಿದ ಪೊಲೀಸರು ಸ್ಥಳ ಮಹಜರು ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿರುವ ಮಾಹಿತಿಗೂ, ಘಟನಾ ಸ್ಥಳಕ್ಕೂ ಹೋಲಿಕೆ ಕಂಡು ಬಂದಿದ್ದು, ಯಲ್ಲಮ್ಮ ದೇವಾಲಯ ಸಮೀಪ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿಕೊಂಡರು.
ಪತ್ರಕರ್ತರೊಂದಿಗೆ ಮಾತನಾಡಿದ ಪ್ರಥಮ್, ‘ದೂರಿನಲ್ಲಿ ತಿಳಿಸಿರುವ ಎಲ್ಲಾ ಮಾಹಿತಿ ಸತ್ಯ. ಹಲ್ಲೆ, ಕೊಲೆಯತ್ನ ನಡೆದ ಸ್ಥಳವನ್ನು ಪೊಲೀಸರಿಗೆ ತೋರಿಸಲಾಗಿದೆ. ಉಳಿದ ಕಾನೂನು ಕ್ರಮಗಳನ್ನು ಪೊಲೀಸರು ತೆಗೆದುಕೊಳ್ಳಲಿದ್ದಾರೆ ಎಂದರು.
ರಾಮಯ್ಯನಪಾಳ್ಯ ಸಮೀಪದ ದೇಗುಲ ಪೂಜೆ ವೇಳೆ ಘಟನೆ ಹಲ್ಲೆ, ಕೊಲೆ ಆರೋಪ ಮಹಜರು ವಿಡಿಯೊ ಚಿತ್ರೀಕರಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.