
ಬಂಧನ
ದೇವನಹಳ್ಳಿ: ಜಮೀನು ಸರ್ವೆ ಕಾರ್ಯ ಹಾಗೂ 11ಇ ನಕ್ಷೆ ಮಾಡಿಕೊಡಲು ರೈತನಿಂದ ಲಂಚ ಪಡೆದ ಆರೋಪ ಸಾಬೀತಾದ ಕಾರಣ ಖಾಸಗಿ ಸರ್ವೇಯರ್‌ಗೆ ಜಿಲ್ಲಾ ನ್ಯಾಯಾಲಯ ಸರ್ವೇಯರ್‌ಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದ ರೈತ ಎನ್. ಲಕ್ಷ್ಮಣ ಬಿನ್ ನಾರಾಯಣಪ್ಪ ಅವರಿಗೆ ಸೇರಿದ ಸಾಸಲು ಗ್ರಾಮದ ಸರ್ವೆ ನಂ. 26/2ರಲ್ಲಿ 30 ಗುಂಟೆ ಜಮೀನಿನ ಸರ್ವೆ ಹಾಗೂ 11ಇ ನಕ್ಷೆ ಮಾಡಿಕೊಡಲು ಖಾಸಗಿ ಸರ್ವೇಯರ್ ಆಗಿದ್ದ ಡಿ.ಬಿ.ಗೌಡ ₹3,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2013ರ ನವೆಂಬರ್ 29ರಂದು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಸುಬ್ರಮಣ್ಯ ಪ್ರಕರಣದ ತನಿಖೆ ನಡೆಸಿ, ಬಳಿಕ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಜೆ. ದಯಾನಂದ, ಆರೋಪಿ ವಿರುದ್ಧ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಇದೇ ಜ. 30ರಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ವಿಜಯಕುಮಾರ್, ದೇವನಹಳ್ಳಿಯ ಖಾಸಗಿ ಸರ್ವೇಯರ್ ಡಿ.ಬಿ. ಗೌಡ ವಿರುದ್ಧ ಆರೋಪ ಸಾಬೀತಾಗಿದೆ. ಭ್ರಷ್ಟಾಚಾರ ತಡೆ ಕಾಯಿದೆ ಅಡಿ ₹25 ಸಾವಿರ ದಂಡ ಹಾಗೂ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.