ADVERTISEMENT

ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 14:04 IST
Last Updated 13 ಜನವರಿ 2020, 14:04 IST
ಕನ್ನಡ ಪಕ್ಷದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬೆಲೆ ಏರಿಕೆ ವಿರೋಧಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು
ಕನ್ನಡ ಪಕ್ಷದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬೆಲೆ ಏರಿಕೆ ವಿರೋಧಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು   

ದೊಡ್ಡಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬೆಲೆ ಏರಿಕೆ, ಅವೈಜ್ಞಾನಿಕ ತೆರಿಗೆ ನೀತಿಗಳಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಏರಿರುವ ಬೆಲೆಗಳನ್ನು ಕೂಡಲೇ ಇಳಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಕನ್ನಡ ಪಕ್ಷದಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ ಮಾತನಾಡಿ, ‘ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಪ್ರತಿ ದಿನವು ಏರುತ್ತಲೇ ಇವೆ. ಕೇಂದ್ರ ಸರ್ಕಾರ ರೇಲ್ವೆ ಇಲಾಖೆ ಮೊದಲಾಗಿ ಎಲ್ಲವನ್ನೂ ಖಾಸಗೀಕರಣ ಮಾಡುತ್ತಾ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚುತ್ತಿವೆ. ಬಂಡವಾಳ ಶಾಹಿಗಳ ಸಾವಿರಾರು ಕೋಟಿ ರೂಪಾಯಿ ತೆರಿಗೆಯನ್ನು ಮನ್ನಾ ಮಾಡುವ ಮೂಲಕ ಅದರ ಹೊರೆಯನ್ನು ಜನಸಾಮಾನ್ಯರ ಮೇಲೆ ಹೇರುತ್ತಿದೆ ಎಂದು ಟೀಕಿಸಿದರು.

‘ಕೃಷಿ ಉತ್ಪನ್ನಗಳ ಮೇಲಿನ ತೆರಿಗೆಯಿಂದ ರೈತರು ಹೈರಾಣಾಗಿದ್ದಾರೆ. ಜಿಎಸ್‍ಟಿಯಿಂದಾಗಿ ನಗರದ ಪ್ರಮುಖ ಉದ್ದಿಮೆಯಾದ ನೇಕಾರಿಕೆ ದಿನೇ ದಿನೇ ಅವನತಿಯ ಹಾದಿ ಹಿಡಿಯುತ್ತಿದೆ. ಗುಡಿ ಹಾಗೂ ಸಣ್ಣ ಕೈಗಾರಿಕೆಗಳು ಮುಚ್ಚುತ್ತಿವೆ. ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದ್ದರೂ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ’ ಎಂದು ದೂರಿದರು.

ADVERTISEMENT

‘ರಾಜ್ಯದ ಬಿಜೆಪಿ ಸರ್ಕಾರ ಸಹ ಕೇಂದ್ರದ ಕೈಗೊಂಬೆಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಸಹಾಯಕರಾಗಿ, ಏನೂ ಮಾಡದ ಸ್ಥಿತಿಯಲ್ಲಿದ್ದಾರೆ. ಇವೆಲ್ಲ ಮರೆಮಾಚಲು ಪೌರತ್ವ ತಿದ್ದುಪಡಿ ಕಾಯ್ದೆ ತಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ದೂರಿದರು.

ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ ನಾಯಕ್ ಮಾತನಾಡಿ, ‘ಜನಸಾಮಾನ್ಯರಿಗೆ ಮೂಲ ಸೌಕರ್ಯ ನೀಡಬೇಕಿರುವ ಸರ್ಕಾರಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮರೆತಿವೆ. ದಿನಸಿ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಜೀವನ ಕಷ್ಟಕರವಾಗುತ್ತಿದೆ. ಈ ಕೂಡಲೇ ಸರ್ಕಾರಗಳು ಬೆಲೆ ಇಳಿಕೆ ಮಾಡಿ ಜನರಿಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಕನ್ನಡ ಪಕ್ಷದ ತಾಲ್ಲೂಕು ಉಪಾಧ್ಯಕ್ಷ ಪರಮೇಶ್, ನಗರ ಘಟಕದ ಅಧ್ಯಕ್ಷ ಕೇಬಲ್ ಮುನಿರಾಜು, ಕಾರ್ಯದರ್ಶಿ ಡಿ.ವೆಂಕಟೇಶ್, ಸಂಜಯನಗರ ಘಟಕದ ಅಧ್ಯಕ್ಷ ಮಂಜುನಾಥ್, ನವಜಾಗೃತಿ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.