
ದೇವನಹಳ್ಳಿ: ಜಿಲ್ಲಾಡಳಿತ ಭವನದ ಆವರಣದಲ್ಲಿ ಮಳೆನೀರು ಸಂಗ್ರಹ ಘಟಕ ಸ್ಥಾಪನೆಗೆ ಸೋಮವಾರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮಳೆಗಾಲದ ಸಂದರ್ಭದಲ್ಲಿ ಜಿಲ್ಲಾಡಳಿತ ಭವನ ಸಂಕೀರ್ಣದ ಮೇಲ್ಛಾವಣಿಗೆ ಬೀಳುವ ಮಳೆನೀರನ್ನು ಸಂಗ್ರಹಿಸಿ ಪುನರ್‌ಬಳಕೆ ಮಾಡುವ ಉದ್ದೇಶದಿಂದ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಲಾಗುತ್ತಿದೆ. ಇದರಿಂದ ಮಳೆನೀರು ಪೋಲಾಗುವುದನ್ನು ತಡೆಯುವ ಜೊತೆಗೆ ಅಂತರ್ಜಲ ಮರುಪೂರಣಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಅಂತರ್ಜಲ ಇಲಾಖೆಯಿಂದ ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ಅಂದಾಜು ₹10 ಲಕ್ಷ ವೆಚ್ಚದಲ್ಲಿ 30,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಲಾಗಲಿದ್ದು, ಸಂಗ್ರಹವಾಗುವ ಮಳೆನೀರನ್ನು ವಿವಿಧ ಉದ್ದೇಶಗಳಿಗೆ ಪುನರ್‌ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಹಾಯಕ ರಾಜೀವ್ ಸುಲೋಚನ, ಜಿಲ್ಲಾ ಅಂತರ್ಜಲ ಇಲಾಖೆಯ ಉಪನಿರ್ದೇಶಕಿ ಜಾನಕಿ ಪಿ., ಹಿರಿಯ ಭೂವಿಜ್ಞಾನಿ ಎಸ್. ಪಲ್ಲವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.