
ಹೊಕೋಟೆ: ನಗರದ ಹಳೆ ಕೋಟಿ ವ್ಯಾಪ್ತಿಯಲ್ಲಿರುವ ಅಮಾನಿ ಚಿಕ್ಕಕೆರೆಯಿಂದ ದಕ್ಷಿಣ ಪಿನಾಕಿನಿ ನದಿಗೆ ಸಂಪರ್ಕಿಸುವ ರಾಜಕಾಲುವೆಯಲ್ಲಿ ಅನಧಿಕೃತವಾಗಿ ರಿಟೈನಿಂಗ್ ವಾಲ್ ನಿರ್ಮಿಸಲಾಗಿದೆ. ಅಲ್ಲದೆ, ಖಾಸಗಿ ವ್ಯಕ್ತಿಯೊಬ್ಬರ ಜಮೀನಿಗೆ ತೆರಳಲು ರಾಜಕಾಲುವೆಗೆ ಮಣ್ಣು ತುಂಬಿಸಲಾಗಿದೆ. ಇದರಿಂದ ಕಲುಷಿತ ನೀರು ಹರಿಯದೆ ದುರ್ನಾತ ಬೀರುತ್ತಿದೆ.
ಈ ಸಂಬಂಧ ಜಿಲ್ಲಾಧಿಕಾರಿ, ತಹಶೀಲ್ದಾರ್, ನಗರಸಭೆ ಆಯುಕ್ತ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿಗೆ ಸ್ಥಳೀಯರು ದೂರು ಸಲ್ಲಿಸಿದ್ದಾರೆ. ಆದಾಗ್ಯೂ, ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಾನಿ ಚಿಕ್ಕಕೆರೆಯಿಂದ ದಕ್ಷಿಣ ಪಿನಾಕಿನಿ ನದಿ ಸಂಪರ್ಕಿಸುವ ರಾಜಕಾಲುವೆಯಲ್ಲಿ ನಗರಸಭೆಯ ತ್ಯಾಜ್ಯ ಘಟಕದ ಮುಂಭಾಗ ಲೇಔಟ್ ಸಂಪರ್ಕ ರಸ್ತೆಗಾಗಿ ಸಂಪೂರ್ಣ ಮುಚ್ಚಲಾಗಿದೆ. ದೋಬಿ ಘಾಟ್ ಮುಂಭಾಗದ ಖಾಸಗಿ ಜಮೀನಿನ ಸಂಪರ್ಕಕ್ಕಾಗಿ ರಾಜಕಾಲುವೆಯನ್ನು ಮಣ್ಣು ಹಾಕಿ ಮುಚ್ಚಲಾಗಿದೆ. 60 ಅಡಿ ಅಗಲವಿದ್ದ ರಾಜಕಾಲುವೆ ಇದೀಗ 3ರಿಂದ 4 ಅಡಿಗೆ ಸೀಮಿತವಾಗಿದೆ.
ಒತ್ತುವರಿಯಿಂದಾಗಿ ಸಾರ್ವಜನಿಕರ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಜೀವ ಆಸ್ತಿ ರಕ್ಷಣೆಗೆ ಗಂಭೀರ ಅಪಾಯ ಎದುರಾಗಿದೆ. ವಿಶೇಷವಾಗಿ, ಈ ರಾಜಕಾಲುವೆ ಕೆರೆಗೆ ಅತ್ಯಂತ ಸಮೀಪದಲ್ಲಿದ್ದು, ಮಳೆಗಾಲದಲ್ಲಿ ಕೆರೆ ತುಂಬಿ ಹರಿದರೆ, ನೀರು ಹೊರ ಹರಿಯಲು ಮಾರ್ಗವಿಲ್ಲದೆ ಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.
ರಾಜಕಾಲುವೆಗಳನ್ನು ರಕ್ಷಿಸುವ ಜವಾಬ್ದಾರಿಯು ಜವಾಬ್ದಾರಿ ಆಡಳಿತ ಇಲಾಖೆ ಮೇಲಿದೆ. ರಾಜಕಾಲುವೆ ಒತ್ತುವರಿಯನ್ನು ನಿರ್ಲಕ್ಷಿಸುವುದು ಭವಿಷ್ಯದಲ್ಲಿ ಗಂಭೀರ ಕಾನೂನು ಮತ್ತು ಸಾರ್ವಜನಿಕ ಹೊಣೆಗಾರಿಕೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೆ, ರಾಜಕಾಲುವೆಯನ್ನು ಪ್ರಭಾವಿಗಳು ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡರೂ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದು ಕರ್ನಾಟಕ ಭೂ ರಾಜಸ್ವ ಅಧಿನಿಯಮ, ಸಾರ್ವಜನಿಕ ಆಸ್ತಿ ಸಂರಕ್ಷಣಾ ಕಾನೂನು ಮತ್ತು ಸರ್ಕಾರಿ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಎನ್ನುತ್ತಾರೆ ನಿವಾಸಿಗಳು.
ಪ್ರಭಾವಿಗಳು ಕೇವಲ ಸರ್ಕಾರಿ ಆಸ್ತಿಯಷ್ಟೇ ಅಲ್ಲದೆ, ನಮ್ಮ ಮನೆ, ಮಠ ಒತ್ತುವರಿ ಮಾಡಿಕೊಂಡರೂ, ಯಾರೂ ಕೇಳುವವರು ಇಲ್ಲದಂಥ ವಾತಾವರಣ ನಿರ್ಮಾಣವಾಗಿದೆ. ರಾಜಕಾಲುವೆ ಒತ್ತುವರಿ ಬಗ್ಗೆ ಪ್ರಶ್ನಿಸಿದ್ದಲ್ಲಿ, ಮಾರನೇ ದಿನವೇ ನಮ್ಮ ಮೇಲೆ ಧಮ್ಕಿ, ದಾಳಿಗಳು ನಡೆಯುತ್ತವೆ ಎಂದು ಹಳೆಕೋಟೆ ಪ್ರದೇಶದ ರಾಜಕಾಲುವೆ ಸಮೀಪದ ನಿವಾಸಿಗಳು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ.
ರೋಗ ಭೀತಿಯಲ್ಲಿ ನಿವಾಸಿಗಳು
ರಾಜಕಾಲುವೆಯ ಒತ್ತುವರಿಯಿಂದಾಗಿ ಮಳೆಗಾಲದಲ್ಲಿ ಕೆರೆ ತುಂಬಿದಾಗ ನೀರು ಸರಾಗವಾಗಿ ಹರಿಯಲು ಮಾರ್ಗವೇ ಇಲ್ಲದಂತಾಗಿದೆ. ಇದರಿಂದ ಕೆರೆ ತುಂಬಿದಾಗ ನೀರು ಮನೆಗಳಿಗೆ ನುಗ್ಗುವ ಅಪಾಯವಿದೆ. ಜೊತೆಗೆ ರಾಜಕಾಲುವೆ ನೀರು ಹರಿಯದೆ ನಿಂತಲ್ಲೇ ನಿಲ್ಲುವುದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಲಿದ್ದು ರೋಗ ರುಜಿನ ವ್ಯಾಪಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
‘ನಮ್ಮ ಬದುಕುವ ಹಕ್ಕು ಕಸಿಯಬೇಡಿ’
ರಾಜಕಾಲುವೆ ಒತ್ತುವರಿ ಬಗ್ಗೆ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ದೂರು ಕೊಟ್ಟರೂ ಸ್ಪಂದನೆ ಮಾತ್ರ ಸಿಕ್ಕಿಲ್ಲ. ಹಾಗಿದ್ದರೆ ನಾವು ಯಾರಿಗೆ ದೂರು ನೀಡಬೇಕು. ನಮಗೆ ನ್ಯಾಯವೇ ಸಿಗುವುದಿಲ್ಲವೇ. ನಮಗೂ ಬದುಕುವ ಹಕ್ಕು ಇದೆ. ಈ ಹಕ್ಕನ್ನು ಕಸಿಯಬಾರದು. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದರು.
ಹಳೆ ಕೋಟೆಯ ಚಿಕ್ಕಕೆರೆಯ ದೊಬಿ ಘಾಟ್ ಮತ್ತು ಹೊಸದಾಗಿ ಆಹಾರ ಉತ್ಪನ್ನ ತಯಾರಿಕಾ ಘಟಕದ ಬಳಿ 60 ಅಡಿ ಆಗಲವಿದ್ದರೆ ನಗರ ಸಭೆ ತ್ಯಾಜ್ಯ ಘಟಕದ ಮುಂಭಾಗದಲ್ಲಿ 3ರಿಂದ 4 ಅಡಿಗೆ ಬಂದಿದೆ.ಮಂಜುನಾಥ್, ಸ್ಥಳೀಯ ನಿವಾಸಿ
ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನಮಗೂ ಬದುಕುವ ಅವಕಾಶ ಕಲ್ಪಿಸಬೇಕು.ಶ್ರೀನಿವಾಸ್, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.