
ಆನೇಕಲ್: ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗ್ಲದೊಡ್ಡಿ ಗ್ರಾಮದಲ್ಲಿ ತಾಂಡ್ಯ ಅಭಿವೃದ್ಧಿ ನಿಗಮದ ₹25 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಶಾಸಕ ಬಿ.ಶಿವಣ್ಣ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಬಂಗ್ಲದೊಡ್ಡಿ ಗ್ರಾಮವು ಕಾಡಂಚಿನ ಗ್ರಾಮವಾಗಿದೆ. ಈ ಗ್ರಾಮದ ಜನರು ಪ್ರತಿನಿತ್ಯ ಕಾಡಾನೆ, ಕಾಡು ಪ್ರಾಣಿಗಳಿಂದಾಗಿ ಸಮಸ್ಯೆ ಅನುಭವಿಸುತ್ತಾರೆ. ಸುಸಜ್ಜಿತ ರಸ್ತೆ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಭೂಮಿಪೂಜೆ ನೆರವೇರಿಸಲಾಗಿದೆ. ಈ ಗ್ರಾಮಕ್ಕೆ ಹೊಂದಿಕೊಂಡಂತೆ ಕರ್ನಾಟಕ ಗೃಹ ಮಂಡಳಿಯ ನಿವೇಶನ, ಅಂತರರಾಷ್ಟ್ರೀಯ ಕ್ರೀಡಾಂಗಣ ಸಮೀಪದಲ್ಲಿಯೇ ಬರುವುದರಿಂದ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದರು.
ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಹಾಗಾಗಿ ಕ್ರೀಡಾಂಗಣದವರೆಗೆ ಮೆಟ್ರೋ ವಿಸ್ತರಣೆ ಮಾಡಬೇಕು. ಇದರಿಂದಾಗಿ ಆನೇಕಲ್ ಪಟ್ಟಣ, ಜಿಗಣಿ ಪುರಸಭೆ ಸೇರಿದಂತೆ ವಿವಿಧೆಡೆಯ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಮೆಟ್ರೋ ವಿಸ್ತರಣೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ವಿಎಸ್‌ಎಸ್‌ಎನ್ ಅಧ್ಯಕ್ಷ ಐಸಿಎಂ.ಕೃಷ್ಣಮೂರ್ತಿ ಮಾತನಾಡಿ, ಬಂಗ್ಲದೊಡ್ಡಿಯು ಕಾಡಂಚಿನ ಗ್ರಾಮವಾಗಿದೆ. ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿತ್ತು. ಈ ರಸ್ತೆಯಲ್ಲಿ ಓಡಾಡಲು ಪರದಾಡಬೇಕಾಗಿತ್ತು. ಕಾಡಾನೆಗಳು ದಾಳಿಯಿಟ್ಟಾಗ ಈ ರಸ್ತೆಯಲ್ಲಿ ಸಂಚರಿಸಲು ಭಯದ ವಾತಾವರಣ ನಿರ್ಮಾಣವಾಗಿತ್ತು. ಸುಸಜ್ಜಿತ ರಸ್ತೆಯಾಗುವುದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲ. ಇಂಡ್ಲವಾಡಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಕರ್ನಾಟಕ ಗೃಹ ಮಂಡಳಿ ಹೆಚ್ಚಿನ ಅನುದಾನ ನೀಡಬೇಕು. ವಿಎಸ್‌ಎಸ್‌ಎನ್ ಸ್ವಂತ ಕಟ್ಟಡ ಹೊಂದಿ ಸುಸಜ್ಜಿತ ಬ್ಯಾಂಕ್ ನಿರ್ಮಿಸಲು ಜಾಗ ನೀಡಬೇಕು ಎಂದರು.
ಆನೇಕಲ್ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಇಂಡ್ಲವಾಡಿ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್ ಗೌಡ, ಲಿಂಗಣ್ಣ, ರತ್ನಮ್ಮ ಅಶ್ವತ್ಥಪ್ಪ, ಅರೇಹಳ್ಳಿ ಮಧುಸೂದನ್, ಗೋವಿಂದರಾಜು, ಶುಭಾನಂದ್, ಬೆಟ್ಟಪ್ಪ, ಪ್ರಕಾಶ್, ತುಳಸಿ ನಾಯಕ್, ಅಭಿ, ಮಹದೇಶ್, ಮುತ್ತುರಾಜ್, ಮಹದೇವಣ್ಣ, ಸಂಪತ್, ರವಿಕುಮಾರ್, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.