ADVERTISEMENT

ಕಿಚ್ಚು ಹಾಯ್ದ ರಾಸುಗಳು

ದೊಡ್ಡಬಳ್ಳಾಪುರದಲ್ಲಿ ಸಡಗರದ ಸಂಕ್ರಾಂತಿ ಹಬ್ಬ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 14:43 IST
Last Updated 15 ಜನವರಿ 2020, 14:43 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಸಂಕ್ರಾಂತಿ ಅಂಗವಾಗಿ ಗ್ರಾಮಸ್ಥರು ಕಾಟಿಮರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪಾರಂಪರಿಕ ಆಚರಣೆ ನೆರವೇರಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಸಂಕ್ರಾಂತಿ ಅಂಗವಾಗಿ ಗ್ರಾಮಸ್ಥರು ಕಾಟಿಮರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪಾರಂಪರಿಕ ಆಚರಣೆ ನೆರವೇರಿಸಿದರು   

ದೊಡ್ಡಬಳ್ಳಾಪುರ: ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ತಾಲ್ಲೂಕಿನಾದ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು. ಜನತೆ ಎಳ್ಳು ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂಕ್ರಾಂತಿ ಶುಭಾಶಯಗಳನ್ನು ಕೋರಿದರು. ಮನೆಗಳ ಮುಂದೆ ಸಂಕ್ರಾಂತಿಯ ವಿಶೇಷ ಶುಭಾಶಯಗಳನ್ನು ಕೋರುವ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರವು ಹಬ್ಬಕ್ಕೆ ಮೆರುಗು ನೀಡಿದ್ದವು. ಕಬ್ಬು, ಅವರೇ ಕಾಯಿ,ಕಡಲೇಕಾಯಿಗಳನ್ನು ಗೋವುಗಳಿಗೆ ನೇವೇದ್ಯ ಮಾಡಿ ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸಂಕ್ರಾಂತಿಯಂದು ಪ್ರತಿ ವರ್ಷದಂತೆ ಈ ಬಾರಿಯೂ ಕಾಟಿಮರಾಯನ ಹಬ್ಬದ ಆಚರಣೆ ನಡೆಯಿತು. ಕ್ಷುದ್ರ ದೇವತೆಗಳ ಹೆಸರುಗಳಲ್ಲಿ ಕಾಟಿಮ ಎಂಬುದು ಒಂದು. ರೈತ ತಾನು ಸಾಕುವ ರಾಸುಗಳಿಗೆ ಯಾವುದೇ ಕಾಯಿಲೆ ತೊಂದರೆ ಬಾರದಿರಲೆಂದು ಪೂಜೆ ಸಲ್ಲಿಸುವುದು ಕಾಟಿಮರಾಯನಿಗೆ ಸಲ್ಲಿಸುವ ಪೂಜೆಯ ವಿಶೇಷವಾಗಿದೆ.

ರೈತರು ತಮ್ಮ ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿಸುವ, ಅಚರಣೆಗಳು ಎಲ್ಲೆಡೆ ಕಂಡು ಬಂದವು. ವರ್ಷವಿಡೀ ಧನ, ಧಾನ್ಯ, ಅಭಿವೃದ್ಧಿಯನ್ನು ಮಾಡಿದ ಸೂರ್ಯನಿಗೆ ಮತ್ತು ಭೂಮಿಗೆ ಹಾಗೂ ವ್ಯವಸಾಯದಲ್ಲಿ ಸಹಾಯಕವಾಗಿ ನಿಂತು ನೆರವು ನೀಡಿದ ದನಕರುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಸಂಕ್ರಾಂತಿಯಂದು ವಿಶೇಷ ಆತಿಥ್ಯ. ರಾಸುಗಳಿಗೆ ಮೈ ತೊಳೆದು, ಕೊಂಬುಗಳಿಗೆ ಬಣ್ಣಗಳನ್ನು ಬಳಿದು ಅಲಂಕಾರ ಮಾಡಲಾಗಿತ್ತು.

ADVERTISEMENT

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಜೆ ರಾಸುಗಳಿಗೆ ವಿಶೇಷ ಅಲಂಕಾರ ಮಾಡಿ ಕಿಚ್ಚು ಹಾಯಿಸುವ ಆಚರಣೆ ಮಾಡಲಾಯಿತು.

ಸಂಕ್ರಾಂತಿ ಹಬ್ಬದ ದಿನದಂದು ಬೆಳೆಗ್ಗೆ ತಾಲ್ಲೂಕಿನ ಮಾಕಳಿ ಬೆಟ್ಟದಲ್ಲಿ ಶ್ರೀಮಾಕಳಿ ಮಲ್ಲೇಶ್ವರ ಸ್ವಾಮಿ ಶಿವಲಿಂಗಕ್ಕೆ ಸೂರ್ಯನ ಕಿರಣಗಳು ಸ್ಪರ್ಶಸಿದ ದೃಶ್ಯವನ್ನು ನೂರಾರು ಭಕ್ತರು ಕಂಡು ಪುಳಕಿತರಾದರು.

ನಗರದ ಅಯ್ಯಪ್ಪಸ್ವಾಮಿ ದೇವಾಲಯ, ಕಾಳಮ್ಮದೇವಿ, ಕರೇನಹಳ್ಳಿ ವಾಲಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕಿನ ಚಿಕ್ಕತುಮಕೂರು ಗ್ರಾಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಒಂದು ತಿಂಗಳಿನಿಂದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದ ಭಜನೆ ಕಾರ್ಯ ಸಂಕ್ರಾಂತಿ ಹಬ್ಬವಾದ ಬುಧವಾರ ಗರುಡಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.