ಷೇರು (ಸಾಂದರ್ಭಿಕ ಚಿತ್ರ)
ಆನೇಕಲ್: ಷೇರು ವರ್ಗಾವಣೆ, ನಿಯಮಬಾಹಿರವಾಗಿ ಹೊಸ ಸದಸ್ಯರ ನೇಮಕ ಮತ್ತು ಅಧಿಕಾರ ದುರಪಯೋಗಪಡಿಸಿಕೊಂಡು ಸಂಬಂಧಿಕರನ್ನು ಸದಸ್ಯರಾಗಿ ನೇಮಿಸಿರುವ ಹಿನ್ನೆಲೆ ಬೆಂಗಳೂರಿನ ಲಾಲ್‌ಬಾಗ್ ಬಳಿಯ ತೋಟದ ಬೆಳೆಗಾರರ ಸಹಕಾರ ಮತ್ತು ಸಂಸ್ಕರಣ ಸಂಘದ(ಹಾಪ್‌ಕಾಮ್ಸ್) ಅಧ್ಯಕ್ಷೆ, ಉಪಾಧ್ಯಕ್ಷ ಸೇರಿ ಎಂಟು ನಿರ್ದೇಶಕರರನ್ನು ಅನರ್ಹಗೊಳಿಸಿ ಸಹಕಾರ ಸಂಘಗಳ ಜಂಟಿ ನಿಬಂಧಕ ಅಶ್ವತ್ಥನಾರಾಯಣ ಆದೇಶ ಹೊರಡಿಸಿದ್ದಾರೆ.
ಹಾಪ್‌ಕಾಮ್ಸ್ ಅಧ್ಯಕ್ಷೆ ಎಚ್.ಕೆ.ನಾಗವೇಣಿ, ಉಪಾಧ್ಯಕ್ಷ ಎ.ಎಸ್.ಚಂದ್ರೇಗೌಡ, ನಿರ್ದೇಶಕರಾದ ಎನ್.ದೇವರಾಜು, ಕೆ.ಎನ್. ವಸಂತಕುಮಾರ್, ಸೊಣ್ಣಪ್ಪ, ಎಂ.ಎಸ್. ಪ್ರಕಾಶ್, ಜಿ.ಆರ್. ಶ್ರೀನಿವಾಸನ್, ಸಂಪಂಗಿರಾಮಯ್ಯ, ಗೋಪಾಲಕೃಷ್ಣ ಬಿ., ಮುನೇಗೌಡ ಅನರ್ಹಗೊಂಡವರು.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 29ಸಿ(8)(ಬಿ)(ಸಿ) ಮತ್ತು (ಡಿ) ಅನ್ವಯ ಅನರ್ಹಗೊಳಿಸಲಾಗಿದೆ. ಮುಂದಿನ ಐದು ವರ್ಷ ಯಾವುದೇ ಸಹಕಾರ ಸಂಘದ ನಿರ್ದೇಶಕರಾಗದಂತೆ ಅನರ್ಹಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಒಕ್ಕೂಟದ ಸದಸ್ಯರು ಹೊಂದಿರುವ ಹೆಚ್ಚುವರಿ ಷೇರುಗಳಲ್ಲಿ ಒಂದೊಂದು ಷೇರುಗಳನ್ನು ಬೇರೆಯವರಿಗೆ ವರ್ಗಾಯಿಸಿ, ನಿಯಮಬಾಹಿರವಾಗಿ ಹೊಸಬರನ್ನು ಸದಸ್ಯರಾಗಿ ನೇಮಿಸಿಕೊಳ್ಳಲಾಗಿದೆ. ಅಲ್ಲದೆ ಸದಸ್ಯತ್ವ ಅರ್ಜಿ ಜೊತೆ ನಿಯಮಾನುಸಾರ ಪಡೆಯಬೇಕಾದ ಪಹಣಿ ಮತ್ತು ಇತರೆ ದಾಖಲೆ ಪಡೆಯದ ಅಂದಿನ ಅಧ್ಯಕ್ಷರು ತಮ್ಮ ಅಧಿಕಾರ ದುರಪಯೋಗ ಮಾಡಿಕೊಂಡು ಸಂಬಂಧಿಕರನ್ನು ಸದಸ್ಯರಾಗಿ ಮಾಡಿಕೊಂಡಿರುವುದು ವಿಚಾರಣೆಯಲ್ಲಿ ಸಾಬೀತು ಆಗಿದೆ. ಇದು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 29–ಸಿ(8)(ಬಿ)ರ ಸ್ಪಷ್ಟ ಉಲ್ಲಂಘನೆ ಆಗಿದೆ. ಹೀಗಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.