ADVERTISEMENT

16 ಬಜೆಟ್ ಮಂಡಿಸಲು ಜಾಲಪ್ಪ ಕಾರಣ, ಅವರಿಗೆ ಸದಾ ಋಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ಜನ್ಮಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 20:17 IST
Last Updated 19 ಅಕ್ಟೋಬರ್ 2025, 20:17 IST
ದೊಡ್ಡಬಳ್ಳಾಪುರದಲ್ಲಿ ಭಾನುವಾರ ನಡೆದ ಆರ್‌.ಎಲ್‌.ಜಾಲಪ್ಪ ಜನ್ಮಶತಮಾನೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಧಿಗೆ ಪುಷ್ಪನಮನ ಸಲ್ಲಿಸಿದರು
ದೊಡ್ಡಬಳ್ಳಾಪುರದಲ್ಲಿ ಭಾನುವಾರ ನಡೆದ ಆರ್‌.ಎಲ್‌.ಜಾಲಪ್ಪ ಜನ್ಮಶತಮಾನೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಧಿಗೆ ಪುಷ್ಪನಮನ ಸಲ್ಲಿಸಿದರು   

ದೊಡ್ಡಬಳ್ಳಾಪುರ: ‘ನಾನು ಹಣಕಾಸು ಸಚಿವನಾಗಲು ಜಾಲಪ್ಪ ಅವರೇ ಕಾರಣ. ಕಂದಾಯ ಖಾತೆ ಬಯಸಿದ್ದೆ. ಹಣಕಾಸು ಸಚಿವ ಆಗಲೇಬೇಕೆಂದು ಸೂಚಿಸಿದರು. ಅವರ ಆಶೀರ್ವಾದದಿಂದ 16 ಬಜೆಜ್‌ ಮಂಡಿಸುವಂತಾಯಿತು. ಅವರಿಗೆ ಸದಾ ಋಣಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ಇಲ್ಲಿ ನಡೆದ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಜನ್ಮಶತಮಾನೋತ್ಸವ ಹಾಗೂ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಾಲಪ್ಪ ಅವರೊಂದಿಗೆ ರಾಜಕೀಯ ಒಡನಾಟದ ‌ಹಳೆ ನೆನಪುಗಳನ್ನು ಮೆಲುಕು ಹಾಕಿದರು.

‘ರಾಜಕೀಯ ಏಳ್ಗೆಗೆ ಅವರ ಪಾತ್ರ ದೊಡ್ಡದು. ಮನೆಯ ಸದಸ್ಯನಂತೆ ಬೆಳೆಸಿದರು. ಸ್ವಾಭಿಮಾನಿ ಆಗಿದ್ದ ಜಾಲಪ್ಪ, ನನ್ನ ರಾಜಕೀಯ ಬೆಳವಣಿಗೆಗೆ ಕಾರಣಕರ್ತರು‌. ನನ್ನನ್ನು ಸಿ.ಎಂ ಮಾಡಲೇಬೇಕೆಂದು ದೇವೇಗೌಡರ ಎದುರು ಹಠ ಹಿಡಿದು ಆಗ್ರಹಪೂರ್ವಕವಾಗಿ ಒತ್ತಾಯಿಸಿದ್ದರು. ನಾನು ಮತ್ತು ಜೆ.ಎಚ್. ಪಟೇಲರಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬ ಚರ್ಚೆ ನಡೆಯುತ್ತಿದ್ದಾಗ ನನ್ನ ಪರ ಗಟ್ಟಿಯಾಗಿ ನಿಂತು ದೇವೇಗೌಡರಿಗೆ ನನ್ನನ್ನೇ ಸಿ.ಎಂ ಮಾಡಬೇಕು ಎಂದು ಒತ್ತಾಯಿಸಿದ್ದನ್ನು ಮರೆಯುವಂತಿಲ್ಲ’ ಎಂದರು.

ADVERTISEMENT

ಇಂದಿರಾಗಾಂಧಿ ಹೆಸರಲ್ಲಿ ಪೌಷ್ಟಿಕ ಆಹಾರ: 

ಗ್ಯಾರಂಟಿ ಯೋಜನೆಗಳಿಂದ ಸುಮಾರು ನಾಲ್ಕುವರೆ ಕೋಟಿ ಜನ‌ ಪ್ರಯೋಜನ‌ ಪಡೆದಿದ್ದಾರೆ. ಬಡವರು, ದಲಿತರು ನೆಮ್ಮದಿಯಿಂದ ‌ಜೀವನ ಮಾಡುತ್ತಿದ್ದಾರೆ. ಇಂದಿರಾಗಾಂಧಿ ಅವರ ಹೆಸರಿನಲ್ಲಿ ‌ಪೌಷ್ಟಿಕ ಆಹಾರ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಲಪ್ಪ ಅಕಾಡೆಮಿ, ಜಾಲಪ್ಪ ಕಾನೂನು ಮಹಾ
ವಿದ್ಯಾಲಯ, ಶತಮಾನೋತ್ಸವ ಭವನ ಉದ್ಘಾಟನೆ, ದೇವರಾಜ ಅರಸ್‌ ವಸತಿ ಶಾಲೆ ನೂತನ ಕಟ್ಟಡಗಳ ಶಿಲಾನ್ಯಾಸ ನೆರವೇರಿಸಿದರು.

ಪ್ರೊ.ಕೆ.ಆರ್‌.ರವಿಕಿರಣ್‌ ಬರೆದಿರುವ ‘ಹೃದಯವಂತ ಆರ್.ಎಲ್.ಜಾಲಪ್ಪ ಜೀವನ ಪಥ’ ಪುಸ್ತಕವನ್ನು ಇದೇ ಸಂದರ್ಭ ಲೋಕಾರ್ಪಣೆಗೊಳಿಸಿದರು. ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಅವರಿಗೆ ಆರ್.ಎಲ್.ಜಾಲಪ್ಪ ಜನ್ಮಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶ್ರೀ ದೇವರಾಜ ಅರಸು ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಜಿ.ಎಚ್‌.ನಾಗರಾಜ, ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ ಹನುಮಂತರಾಜು, ಕರ್ನಾಟಕ ಆರ್ಯ ಈಡಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ತಿಮ್ಮೇಗೌಡ, ಎಐಸಿಸಿ ಸದಸ್ಯ ಎಂ.ಸಿ.ವೇಣುಗೋಪಾಲ್‌, ಶಾಸಕರಾದ ಧೀರಜ್ ಮುನಿರಾಜು, ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವರಾದ ಕೆ.ಆರ್‌.ರಮೇಶ್‌ ಕುಮಾರ್‌, ಪಿ.ಜಿ.ಆರ್ ಸಿಂಧ್ಯ, ರಾಣಿ ಸತೀಶ್‌ ಇತರರು ಇದ್ದರು.‌

ಜಾಲಪ್ಪ ಹೆಸರಲ್ಲಿ ಪ್ರಶಸ್ತಿಗೆ ಒತ್ತಾಯ
ಕೃಷಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಾಧನೆ ಸಲ್ಲಿಸಿರುವ ಆರ್.ಎಲ್.ಜಾಲಪ್ಪ ಹೆಸರಿನಲ್ಲಿ ‌ಪ್ರಶಸ್ತಿ ‌ನೀಡುವ ಕುರಿತು ‌ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಸಹಕಾರ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಸ್ಥಾಪನೆ ಮಾಡಬೇಕು. ಸರ್ಕಾರದಿಂದಲೇ ಜಿಲ್ಲೆಯಲ್ಲಿ ಜನ್ಮಶತಮಾನೋತ್ಸವ ಆಚರಿಸಬೇಕೆಂದು ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್‌.ಸುದರ್ಶನ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.