ವಿಜಯಪುರ: ‘ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರು ಬೆಳೆದಂತಹ ರೇಷ್ಮೆಗೂಡಿಗೆ ಉತ್ತಮ ಬೆಲೆ ಸಿಗುತ್ತಿದೆ. ಗೂಡು ತೂಕ ಮಾಡಿದ ನಂತರ 20 ನಿಮಿಷದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವಂತಹ ವ್ಯವಸ್ಥೆ ನಮ್ಮಲ್ಲಿದೆ. ಆದ್ದರಿಂದ ರೈತರು ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಬನ್ನಿ’ ಎಂದು ಉಪನಿರ್ದೇಶಕ ಸುಂದರರಾಜ್ ರೈತರಲ್ಲಿ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾರುಕಟ್ಟೆಯಲ್ಲಿ ರೈತರಿಗೆ ಅನುಕೂಲವಾದ ಎಲ್ಲಾ ರೀತಿಯ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಇ-ಹರಾಜು ಮಾಡಲಾಗುತ್ತಿದೆ. ಹರಾಜಿನಲ್ಲಿ ಭಾಗವಹಿಸುವ ನೂಲು ಬಿಚ್ಚಾಣಿಕೆದಾರರಿಂದ ಹರಾಜಿಗೂ ಮೊದಲೇ ಹಣವನ್ನು ನಮ್ಮ ಖಾತೆಗೆ ಜಮೆ ಮಾಡಿಸಿಕೊಂಡ ನಂತರವೇ ಅವರಿಗೆ ಹರಾಜಿನಲ್ಲಿ ಭಾಗವಹಿಸಲಿಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ’ ಎಂದರು.
‘ಇ-ಹರಾಜಿನಲ್ಲಿ ನೂಲು ಬಿಚ್ಚಾಣಿಕೆದಾರರು ಕೊಟ್ಟಿರುವ ಬೆಲೆಯನ್ನು ರೈತರು ಒಪ್ಪಿಕೊಂಡ ನಂತರವೇ ತೂಕ ಮಾಡಲಿಕ್ಕೆ ಅನುಮತಿ ಕೊಡಲಾಗುತ್ತಿದೆ. ಮೂರು ಬಾರಿ ಹರಾಜಿನಲ್ಲಿ ನೀಡಿರುವ ಬೆಲೆಯು ರೈತರಿಗೆ ಸಮಾಧಾನವಾಗದಿದ್ದಲ್ಲಿ ಮಾರುಕಟ್ಟೆಯ ಅಧಿಕಾರಿಗಳು ರೈತರ ಬಳಿಗೆ ಹೋಗಿ ಅವರೊಂದಿಗೆ ಸಮಾಲೋಚನೆ ಮಾಡಿದ ನಂತರವೇ ಹರಾಜು ಮುಕ್ತಾಯಗೊಳಿಸಲಾಗುತ್ತಿದೆ ಆದ್ದರಿಂದ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ. ರೈತರು ಮಾರುಕಟ್ಟೆಗೆ ಗೂಡು ತೆಗೆದುಕೊಂಡು ಬರಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.