ADVERTISEMENT

ದೊಡ್ಡಬಳ್ಳಾಪುರ: ರೇಷ್ಮೆಸೀರೆ ಮಳಿಗೆಯ ಜಾಗ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:10 IST
Last Updated 23 ಆಗಸ್ಟ್ 2025, 2:10 IST
ದೊಡ್ಡಬಳ್ಳಾಪುರ ರೋಜಿಪುರದ ಸರ್ವೇ ನಂಬರ್‌ 31ರಲ್ಲಿನ ರೇಷ್ಮೆ ಸೀರೆಗಳ ವಾಣಿಜ್ಯ ಮಳಿಗೆ ನಿರ್ಮಿಸಲು ಮೀಸಲಿರಿಸಿದ್ದ ಜಾಗದ ಒತ್ತುವರಿಯನ್ನು ಶುಕ್ರವಾರ ತೆರವು ಮಾಡಲಾಯಿತು
ದೊಡ್ಡಬಳ್ಳಾಪುರ ರೋಜಿಪುರದ ಸರ್ವೇ ನಂಬರ್‌ 31ರಲ್ಲಿನ ರೇಷ್ಮೆ ಸೀರೆಗಳ ವಾಣಿಜ್ಯ ಮಳಿಗೆ ನಿರ್ಮಿಸಲು ಮೀಸಲಿರಿಸಿದ್ದ ಜಾಗದ ಒತ್ತುವರಿಯನ್ನು ಶುಕ್ರವಾರ ತೆರವು ಮಾಡಲಾಯಿತು   

ದೊಡ್ಡಬಳ್ಳಾಪುರ: ನಗರದಲ್ಲಿ ತಯಾರಾಗುವ ರೇಷ್ಮೆ ಸೀರೆಗಳಿಗೆ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ರೇಷ್ಮೆ ಸೀರೆಗಳಿಗೆ ಪ್ರತ್ಯೇಕವಾಗಿ ವಾಣಿಜ್ಯ ಮಳಿಗೆ ನಿರ್ಮಿಸಲು ಹಿಂದೂಪುರ-ಬೆಂಗಳೂರು ರಾಜ್ಯ ಹೆದ್ದಾರಿಯ ಡಿ.ಕ್ರಾಸ್‌ ಸಮೀಪ ಮೀಸಲಿರಿಸಿದ್ದ ಜಾಗವನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡು ಕಟ್ಟಲಾಗಿದ್ದ ಶೆಡ್‌ಗಳನ್ನು ಶುಕ್ರವಾರ ತಾಲ್ಲೂಕು ಆಡಳಿತ ತೆರವುಗೊಳಿಸಿ ತನ್ನ ವಶಕ್ಕೆ ಪಡೆದುಕೊಂಡಿದೆ.

‘ನಗರ ವ್ಯಾಪ್ತಿಯ ರೋಜಿಪುರದ ಸರ್ವೇ ನಂಬರ್‌ 31ರಲ್ಲಿ ಹೆದ್ದಾರಿ ಬದಿಯಲ್ಲಿನ ಅತ್ಯಂತ ಆಯಕಟ್ಟಿನ 10 ಗುಂಟೆ ರೇಷ್ಮೆ ಸೀರೆ ವಾಣಿಜ್ಯ ಮಳಿಗೆಗಾಗಿ ಮೀಸಲಿರಿಸಲಾಗಿತ್ತು. ಈ ಜಾಗ ಉಳ್ಳವರ ಪಾಲಾಗದಂತೆ ರಕ್ಷಿಸುವ ಉದ್ದೇಶದಿಂದ ಒತ್ತುವರಿಯನ್ನು ತೆರವು ಮಾಡಿ ವಶಕ್ಕೆ ಪಡೆಯುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿತ್ತು. ಸರ್ಕಾರಿ ಜಾಗ ಒತ್ತುವರಿ ತೆರವು ಮುಂದುವರೆಯಲಿದೆ’ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.

2018ರಲ್ಲಿ ನಗರದ ರೋಜಿಪುರದ ಸರ್ವೇ ನಂಬರ್‌ 31ರಲ್ಲಿ ಹಿಂದೂಪುರ ರಾಜ್ಯ ಹೆದ್ದಾರಿ ಬಿದಿಯಲ್ಲಿನ ಅತ್ಯಂತ ಆಯಕಟ್ಟಿ ಸ್ಥಳದಲ್ಲಿ 10 ಗುಂಟೆ ಜಾಗವನ್ನು ರೇಷ್ಮೆ ಸೀರೆಗಳ ಮಾರಾಟಕ್ಕಾಗಿ ವಾಣಿಜ್ಯ ಮಳಿಗೆ ನಿರ್ಮಿಸಲು ಅಂದಿನ ಜಿಲ್ಲಾಧಿಕಾರಿ ಕರೀಗೌಡ ಅವರು ಮೀಸಲಿರಿಸಿದ್ದರು.

ADVERTISEMENT

ನಗರದ ಸುಮಾರು 35 ಸಾವಿರ ವಿದ್ಯುತ್‌ ಮಗ್ಗಗಳಿಂದ ನೇಯಲಾಗುತ್ತಿರುವ ರೇಷ್ಮೆ ಸೀರೆಗಳು ರಾಜ್ಯದ ಇತರೆ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟವಾಗುತ್ತಿವೆ. ಇದರಿಂದ ಇಲ್ಲಿನ ನೇಕಾರರು ನಷ್ಟ ಅನುಭವಿಸುವಂತಾಗಿದೆ. ಇಲ್ಲಿನದೇ ಹೆಸರಿನ ‘ದೊಡ್ಡಬಳ್ಳಾಪುರ ರೇಷ್ಮೆ ಸೀರೆ’ ಬ್ರಾಂಡ್‌ ಕಲ್ಪಿಸುವ ಚಿಂತನೆಯೊಂದಿಗೆ ಸ್ಥಳ ಮೀಸಲಿರಿಸಲಾಗಿತ್ತು. ಆದರೆ ರಾಜಕೀಯ ಇಚ್ಚಾಶಕ್ತಿ ಹಾಗೂ ನೇಕಾರರಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ ಬ್ರಾಂಡ್‌ ಕಲ್ಪಿಸುವ ಕನಸು ಈಡೇರಿರಲಿಲ್ಲ. ಹಾಗಾಗಿ ಅತ್ಯಂತ ಆಯಕಟ್ಟಿನ ಸ್ಥಳವನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡು ಶೆಡ್‌ಗಳನ್ನು ನಿರ್ಮಿಸಿದ್ದರು. ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿ ವಹಿಸುವ ಮೂಲಕ ದೊಡ್ಡಬಳ್ಳಾಪುರ ರೇಷ್ಮೆ ಸೀರೆಗಳಿಗೆ ಬ್ರಾಂಡ್‌ ಕಲ್ಪಿಸಲು ಮುಂದಾಗಬೇಕು ಎಂದು ನೇಕಾರರು ಆಗ್ರಹಿಸಿದ್ದಾರೆ.

ಶೀಘ್ರ ಮಳಿಗೆ ನಿರ್ಮಿಸಿ

  ರಾತ್ರಿ ಹಗಲೆನ್ನದೇ ಸೀರೆ ನೇಯುವ ಇಲ್ಲಿನ ನೇಕಾರರು ಕಾಂಚಿಪುರಂ ಮೊಣಕಾಲ್ಮೂರು ಸೇರಿದಂತೆ ಇತರೆ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡುವಂತಾಗಿದೆ. ಈ ಹಿಂದೆ ಇಲ್ಲಿನ ಸೀರೆಗಳಿಗೆ ಪ್ರತ್ಯೇಕ ಬ್ರಾಂಡ್‌ ಕಲ್ಪಿಸುವ ಉದ್ದೇಶದಿಂದ ಡಿ.ಕ್ರಾಸ್‌ ಸಮೀಪ ಮೀಸಲಿಡಲಾಗಿರುವ 10 ಗುಂಟೆ ಜಾಗದಲ್ಲಿ ರೇಷ್ಮೆ ಸೀರೆ ಮಾರಾಟ ಮಳಿಗೆಯನ್ನು ಶೀಘ್ರವಾಗಿ ನಿರ್ಮಿಸಬೇಕು. ಇದರಿಂದ ಘಾಟಿ ದೇವಾಸ್ಥಾನ ನಂದಿ ಬೆಟ್ಟಕ್ಕೆ ಪ್ರತಿ ದಿನ ಹೋಗುವ ನೂರಾರು ಜನ ಪ್ರವಾಸಿಗರು ಸೀರೆ ಖರೀದಿಸಲು ಹಾಗೂ ಹೊರಗಿನ ವ್ಯಾಪಾರಿಗಳು ಬರಲು ಅನುಕೂಲವಾಗಲಿದೆ. ಮೋಹನ್‌ ರೇಷ್ಮೆ ಸೀರೆ ನೇಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.