ADVERTISEMENT

ಹೈನುಗಾರಿಕೆಯಿಂದ ನಿರ್ದಿಷ್ಟ ಆದಾಯ: ಶಾಸಕ ಶರತ್ ಬಚ್ಚೇಗೌಡ

ಚಿಕ್ಕ ಹುಲ್ಲೂರುನಲ್ಲಿ ಪಶು ಆಸ್ಪತ್ರೆ ಉದ್ಘಾಟಿಸಿದ ಶಾಸಕ ಶರತ್ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 3:31 IST
Last Updated 13 ಏಪ್ರಿಲ್ 2021, 3:31 IST
ಹೊಸಕೋಟೆ ತಾಲ್ಲೂಕಿನ ಚಿಕ್ಕಹುಲ್ಲೂರು ಗ್ರಾಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದರು
ಹೊಸಕೋಟೆ ತಾಲ್ಲೂಕಿನ ಚಿಕ್ಕಹುಲ್ಲೂರು ಗ್ರಾಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದರು   

ಹೊಸಕೋಟೆ: ‘ಈಗಿನ ನೀರಿನ ಪರಿಸ್ಥಿತಿಯಲ್ಲಿ ರೈತರು ಬೆಳೆಯುವ ಬೆಳೆಯಿಂದ ನಿರ್ದಿಷ್ಟ ಆದಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಹೈನುಗಾರಿಕೆಯಿಂದ ಪ್ರತಿ ತಿಂಗಳು ನಿರ್ದಿಷ್ಟವಾದ ಆದಾಯವನ್ನು ನಿರೀಕ್ಷಿಸಬಹುದಾಗಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲ್ಲೂಕಿನ ಚೊಕ್ಕಹಳ್ಳಿ ಪಂಚಾಯಿತಿಯ ಚಿಕ್ಕ ಹುಲ್ಲೂರು ಗ್ರಾಮದಲ್ಲಿ ಪಶು ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾವಿರಾರು ಅಡಿ ಆಳಕ್ಕೆ ತೋಡಿಸಿದ ಕೊಳವೆಬಾವಿ ನೀರು ಯಾವಾಗ ಬೇಕಾದರೂ ಬತ್ತಿಹೋಗಿ ರೈತರು ಬೆಳೆದ ಬೆಳೆಗಳು ಹಾಳಾಗುತ್ತದೆ. ಆದರೆ ಮನೆಯಲ್ಲಿ ಸಾಕಿದ ಒಂದು ಅಥವಾ ಎರಡು ಹಸುಗಳಿಂದ ಪ್ರತಿ ನಿತ್ಯ ಬರುವ ಹಾಲನ್ನು ಡೇರಿಗೆ ಹಾಕಿ ಮನೆಯ ಹೆಣ್ಣುಮಕ್ಕಳು ನಿದಿಷ್ಟ ವರಮಾನ ಪಡೆಯುತ್ತಾರೆ’ ಎಂದರು.

ADVERTISEMENT

‘ಈ ಭಾಗದ ರೈತರಿಗೆ ಪಶು ಆಸ್ಪತ್ರೆಯ ಕೊರತೆಯಿತ್ತು. ಮೂಕ ಪ್ರಾಣಿಗಳಿಗೆ ಬರುವ ಕಾಯಿಲೆಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಲಾಗದೆ ಪರದಾಡುತ್ತಿದ್ದ ರೈತರ ಅನುಕೂಲಕ್ಕಾಗಿ ಸುಮಾರು ₹35 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯನ್ನು ಕೇವಲ ಮೂರು ತಿಂಗಳಿನಲ್ಲಿ ಕಟ್ಟಲಾಗಿದೆ’ ಎಂದರು.

38 ಕೆರೆಗಳಿಗೆ ನೀರು: ‘ಜಡಗೇನಹಳ್ಳಿ ಹಾಗೂ ಅನುಗೊಂಡನಹಳ್ಳಿ ಹೋಬಳಿಗಳ 38 ಕೆರೆಗಳಿಗೆ ಮುಂದಿನ ವರ್ಷದ ಆಗಸ್ಟ್ ಹೊತ್ತಿಗೆ ನೀರು ತುಂಬಿಸುವ ಕೆಲಸವಾಗಿತ್ತದೆ. ಆದರೆ ನಂದಗಗುಡಿ ಹಾಗೂ ಕಸಬಾದ ಕೆರೆಗಳಿಗೆ ಕೆಸಿ ವ್ಯಾಲಿಯ ನೀರಿನಿಂದ ಕೆರೆಗಳಿಗೆ ನೀರು ಬರಬೇಕಾಗಿದೆ. ಅದು ಈಗಾಗಲೇ ತಾವರೆಕೆರೆವರೆಗೆ ಬಂದಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಕೆರೆಗಳೂ ತುಂಬಿ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ದ್ಧಿಯಾಗುತ್ತದೆ’ ಎಂದರು.

ಬೆಂಗಳೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಹುಲ್ಲೂರು ಮಂಜುನಾಥ್ ಮಾತನಾಡಿ, ‘ಮೂಕ ಪ್ರಾಣಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಹಸುಗಳು ಗಂಡು ಕರುಗಳನ್ನು ಹಾಕಿದರೆ ಅದನ್ನು ಮನೆಯಿಂದ ಹೊರಹಾಕದೆ ಅದನ್ನೂ ನಾವೇ ಸಾಕಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರವು ಪ್ರತಿ ತಾಲ್ಲೂಕಿಗೆ ಗೋವಿನ ಆಶ್ರಮವನ್ನು ಕಟ್ಟಿಸುವ ಆಶ್ವಾಸನೆ ನೀಡಿದ್ದು ಆಗ ಅದನ್ನು ನಾವು ಉಪಯೋಗಿಸಿಕೊಳ್ಳಬಹುದು’ ಎಂದರು.

ಚಿಕ್ಕ ಹುಲ್ಲೂರು ಗ್ರಾಮದ ಅಂಗವನಾಡಿ ಕಟ್ಟಡದ ಉದ್ಘಾಟನೆಯನ್ನೂ ನೆರವೇರಿಸಲಾಯಿತು. ಚೊಕ್ಕಹಳ್ಳಿಯಲ್ಲಿ ಎಸ್ ಸಿ ಮತ್ತು ಎಸ್ ಟಿ ಜನಾಂಗದವರಿಗೆ ಸಾವಿರ ಲೀಟರ್‌ ನೀರಿನ ಟ್ಯಾಂಕ್‌ ಗಳನ್ನು ಗ್ರಾಮ ಪಂಚಾಯಿತಿಯಿಂದ ನೀಡಲಾಯಿತು. ಪ್ರತಿ ಮನೆಗೆ ಕಸದ ಬುಟ್ಟಿಗಳನ್ನೂ ಸಹಾ ವಿತರಿಸಿದರು.

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ರೂಪ ಮರಿಯಪ್ಪ, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಶ್ರೀನಿವಾಸ್, ಟಿಎಪಿಸಿಎಂಎಸ್ ಆಧ್ಯಕ್ಷ ಎಲ್ ಆ್ಯಂಡ್ ಟಿ. ಮಂಜುನಾಥ್, ಚೊಕ್ಕಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳ ನಾಗಾರ್ಜುನ್, ಮುಖಂಡರಾದ ಬಚ್ಚೇಗೌಡ, ಬಂಗಾರಪ್ಪ, ರಾಮೇಗೌಡ ಭಾಗವಹಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.