
ಆನೇಕಲ್‌ನಲ್ಲಿ ಕರುನಾಡ ರೈತ ಗೋಪಾಲಕರ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ರಾಸುಗಳ
ಆನೇಕಲ್ : ಕರುನಾಡ ರೈತ ಗೋಪಾಲಕರ ಸಂಘವು ಪಶುಪಾಲನ ಇಲಾಖೆ ಹಾಗೂ ಬೆಂಗಳೂರು ಹಾಲು ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ 48 ಲೀಟರ್ ಹಾಲು ನೀಡಿದ ಬೆಂಗಳೂರಿನ ನಾಗರಭಾವಿಯ ಬಿ.ಎಂ.ನಾಗರಾಜು ಅವರ ಹಸು ಪ್ರಥಮ ಸ್ಥಾನ ಗಳಿಸಿತು. ಒಂದು ಲಕ್ಷ ನಗದು ಬಹುಮಾನ ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು.
45.2 ಲೀಟರ್ ಹಾಲು ಕರೆದ ಜಯನಗರದ ಪಟಾಲಮ್ಮ ಪಶುಪಾಲನ ಸೇವಾ ಸಮಿತಿಯ ಅಶೋಕ್ ಗೌಡ ಅವರ ರಾಸು ದ್ವಿತೀಯ ಬಹುಮಾನ ₹80 ಸಾವಿರ ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕಗ್ಗಲೀಪುರದ ರಾಮಚಂದ್ರರೆಡ್ಡಿ ಅವರ ರಾಸು 45.06 ಲೀಟರ್ ಹಾಲು ಕರೆದು ಮೂರನೇ ಬಹುಮಾನ ₹60ಸಾವಿರ ನಗದು ಮತ್ತು ಟ್ರೋಫಿ, ಆನೇಕಲ್ ತಾಲ್ಲೂಕಿನ ಕಾವಲಹೊಸಹಳ್ಳಿಯ ಮನೋಜ್ ರೆಡ್ಡಿ ಅವರ ರಾಸು ನಾಲ್ಕನೇ ಬಹುಮಾನ ₹40ಸಾವಿರ ನಗದು, ಪಾದರಾಯನಪುರದ ಜಯಮ್ಮ ಅವರ ರಾಸು ಐದನೇ ಮತ್ತು ಗುಂಜೂರು ಚೇತನ್ ಅವರ ರಾಸು ಆರನೇ ಬಹುಮಾನ ಪಡೆದವು.
ಪಟ್ಟಣದ ಎಎಸ್‌ಬಿ ಮೈದಾನದಲ್ಲಿ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆ ವೀಕ್ಷಿಸಲು ಜನರು ಕುತೂಹಲದಿಂದ ಆಗಮಿಸಿದ್ದರು. ಮೂರು ದಿನ ನಡೆದ ಸ್ಪರ್ಧೆಯಲ್ಲಿ ಎರಡು ದಿನಗಳ ಹಾಲಿನ ಇಳುವರಿ ಆಧರಿಸಿ ಬಹುಮಾನ ನೀಡಲಾಯಿತು.
ಶುಕ್ರವಾರದಿಂದ ಆರಂಭವಾದ ಸ್ಪರ್ಧೆ ಭಾನುವಾರ ರಾತ್ರಿ 8ರವರೆಗೂ ನಡೆಯಿತು. ಚಳಿ ಮತ್ತು ಮಂಜಿನ ನಡುವೆಯೂ ಸ್ಪರ್ಧೆಗಳು ನಡೆದಿದ್ದು ವಿಶೇಷವಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರಿಗೆ ಪಶುವೈದ್ಯಕೀಯ ಇಲಾಖೆಯ ವತಿಯಿಂದ ಹಾಲಿನ ಕ್ಯಾನ್‌ಗಳನ್ನು ವಿತರಿಸಲಾಯಿತು.
ರೈತರು ರಾಸುಗಳನ್ನು ದೇವರಂತೆ ಪೂಜಿಸುತ್ತಾರೆ. ರೈತರ ಅಭಿವೃದ್ಧಿಯಲ್ಲಿ ಹೈನುಗಾರಿಕೆಯ ಪಾತ್ರ ಪ್ರಮುಖವಾಗಿದೆ. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ಹೇಳಿದರು.
ಹೈನುಗಾರಿಕೆಯಿಂದ ಸಾವಿರಾರು ರೈತರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯ ಸೆನೆಟ್ ಸದಸ್ಯ ಉಲ್ಲಾಸ್ ಶಿವಣ್ಣ ಅಭಿಪ್ರಾಯಪಟ್ಟರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ಭಾರ್ಗವ್ ರೆಡ್ಡಿ, ಹುಲ್ಲಹಳ್ಳಿ ಶ್ರೀನಿವಾಸ್, ಎಸ್.ಆರ್.ಟಿ.ಅಶೋಕ್ ರೆಡ್ಡಿ, ವರ್ತೂರು ಸಂತೋಷ್, ಶ್ರೀನಿವಾಸ್, ವೆಂಕಟೇಶ್ ರೆಡ್ಡಿ, ಪಾರ್ಥಮ್ಮ, ದಿಲೀಪ್ ಗೌಡ, ಮನೋಜ್, ಮುನಿವೆಂಕಟಪ್ಪ, ರಮೇಶ್ ರೆಡ್ಡಿ, ಮುನಿರಾಜು, ಮುರುಗೇಶ್, ಪ್ರವೀಣ್, ಎಚ್.ಶ್ರೀನಿವಾಸ ರೆಡ್ಡಿ, ವೆಂಕಟೇಶ್, ಚೇತನ್, ಮಂಜುನಾಥ್, ರಾಜಣ್ಣ, ಅಭಿಲಾಷ್, ಮಧು, ಗಿರೀಶ್, ನಾರಾಯಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.