ADVERTISEMENT

ಸೌಕರ್ಯ ಬೆಳಕಿಲ್ಲದ ಸೂರ್ಯನಗರ

ಗೃಹ ಮಂಡಳಿ ನಿರ್ಮಿಸಿದ ಬಡಾವಣೆಯ ಬವಣೆ l 16 ವರ್ಷದಿಂದ ನಡೆಯದ ಅಭಿವೃದ್ಧಿ ಕೆಲಸ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 6:14 IST
Last Updated 12 ಡಿಸೆಂಬರ್ 2022, 6:14 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಸೂರ್ಯಸಿಟಿ 3ನೇ ಹಂತದಲ್ಲಿ ಖಾಲಿ ಉಳಿದಿರುವ ಬಡಾವಣೆಯ ನಿವೇಶನ
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಸೂರ್ಯಸಿಟಿ 3ನೇ ಹಂತದಲ್ಲಿ ಖಾಲಿ ಉಳಿದಿರುವ ಬಡಾವಣೆಯ ನಿವೇಶನ   

ಆನೇಕಲ್ : ತಾಲ್ಲೂಕಿನ ಅತ್ತಿಬೆಲೆ ಸಮೀಪ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಸೂರ್ಯನಗರ 3ನೇ ಹಂತದಲ್ಲಿ ಮೂಲ ಸೌಕರ್ಯದ ಬೆಳಕಿಲ್ಲ. ಅವ್ಯವಸ್ಥೆಯ ಕತ್ತಲು ತುಂಬಿಕೊಂಡಿದೆ.

ಕುಡಿಯುವ ನೀರು, ರಸ್ತೆ, ವಿದ್ಯುತ್‌, ಕಸ ವಿಲೇವಾರಿ ಸೇರಿದಂತೆ ಕನಿಷ್ಠ ಮೂಲಸೌಕರ್ಯಯೂ ಇಲ್ಲದೆ ಇಲ್ಲಿನ ನಿವಾಸಿಗಳು
ಪರದಾಡುವಂತಾಗಿದೆ.

ಅತ್ತಿಬೆಲೆ ಸಮೀಪದ ಜಿಗಳ, ಆದಿಗೊಂಡನಹಳ್ಳಿ, ಯಡವನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಸುಮಾರು 968 ಎಕರೆ ಜಮೀನನ್ನು ಗೃಹ ಮಂಡಳಿಯು 2006ರಲ್ಲಿ ಭೂಸ್ವಾಧೀನ ಮಾಡಿಕೊಂಡು ಸೂರ್ಯಸಿಟಿ 3ನೇ ಹಂತವನ್ನು ನಿರ್ಮಿಸಿತು. ಅದರಂತೆ 2014ರಲ್ಲಿ 600ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಯೂ ಹಂಚಿಕೆಯಾಯಿತು. ಆ ಸಮಯದಿಂದಲೂ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಬಡಾವಣೆ ನಿರ್ಮಾಣವಾಗಿ 16 ವರ್ಷ ಕಳೆಯುತ್ತಿದ್ದರೂ ಸೂರ್ಯನಗರವನ್ನು ನಗರವಾಗಿ ರೂಪಿಸುವ ಮಂಡಳಿಯ ಯೋಜನೆ ಯೋಜನೆಯಾಗಿಯೇ ಉಳಿದಿದೆ.

ADVERTISEMENT

ಬಡಾವಣೆಯ ಸಂಪರ್ಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಾಷ್ಟ್ರೀಯ ಹೆದ್ದಾರಿ 7ರಿಂದ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಗುಂಡಿಗಳಿಂದ ಆವೃತವಾಗಿದೆ. ಡಾಂಬರು, ಜಲ್ಲಿ ಕಿತ್ತು ಹೋಗಿ
ಅಧ್ವಾನಗೊಂಡಿದೆ.

16 ವರ್ಷ ಕಳೆದರೂ ಪರಿಪೂರ್ಣಗೊಳ್ಳದ ಬಡಾವಣೆ:

ಸುಮಾರು 968 ಎಕರೆ ಪ್ರದೇಶದಲ್ಲಿ ಬಡಾವಣೆ ವಿಸ್ತರಿಸಿಕೊಂಡಿದೆ. ನಾಲ್ಕು ಬ್ಲಾಕ್‌ಗಳಿವೆ. 10 ಸಾವಿರ ನಿವೇಶನಗಳಿವೆ. ಬಡಾವಣೆಯಲ್ಲಿ 660 ಮನೆಗಳು ನಿರ್ಮಾಣವಾಗಿವೆ. ಜಂಟಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಬಡಾವಣೆಯು ಕೆಎಚ್‌ಬಿ ಮತ್ತು ರೈತರ ನಡುವೆ 60:40ರ ಅನುಪಾತದಲ್ಲಿ ನಿರ್ಮಿಸಲಾಗಿದೆ. ನಿವೇಶ ಅಭಿವೃದ್ಧಿ ಪಡಿಸಿದ್ದರೂ ಮನೆ ಕಟ್ಟುತ್ತಿಲ್ಲ. ಬಹುತೇಕ ಪ್ರದೇಶ ಖಾಲಿ
ಉಳಿದಿದೆ.

ಖಾಲಿ ಜಾಗವು ಸುತ್ತಮುತ್ತಲ ಗ್ರಾಮಗಳ ರೈತರ ರಾಸುಗಳಿವೆ ಮೇವು ನೀಡುವ ತಾಣವಾಗಿದೆ. ಕೆಲವೆಡೆ ಖಾಲಿ ಸೈಟ್‌ಗಳಲ್ಲಿ ಬೆಳೆಯನ್ನು ಬೆಳೆಯಲಾಗುತ್ತಿದೆ. 2006ರಲ್ಲಿ ನಿರ್ಮಾಣ ಬಡಾವಣೆ 16 ವರ್ಷಗಳು ಕಳೆದರೂ ಪರಿಪೂರ್ಣಗೊಂಡಿಲ್ಲ. ಗೃಹ ಮಂಡಳಿಯ ವೈಫಲ್ಯದಿಂದ ಅನೈತಿಕ ಚಟುವಟಿಕೆಯ ತಾಣವಾಗಿದೆ. ಬಡಾವಣೆಯಲ್ಲಿರುವ ಕೆಲವು ಕುಟುಂಬಗಳು ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ನಿವೇಶನ ಕೊಂಡವರೂ ಮನೆ ನಿರ್ಮಿಸಲು ಆಸಕ್ತಿ ತೋರುತ್ತಿಲ್ಲ. ಕೃಷಿ ಭೂಮಿ ಸ್ವಾಧೀನಪಡಿಕೊಂಡು ಬಡಾವಣೆ ನಿರ್ಮಿಸಿದ್ದರೂ, ಸಂಪೂರ್ಣವಾಗಿ ವಸತಿ ವ್ಯವಸ್ಥೆಯೂ ಇಲ್ಲ, ಸೌಕರ್ಯವೂ ಇಲ್ಲ. ಇನ್ನೂ ಯಾವ ಪುರುಷಾರ್ಥಕ್ಕೆ ಬಡಾವಣೆ ನಿರ್ಮಿಸಬೇಕಿತ್ತು ಎನ್ನುವುದು ಇಲ್ಲಿನ ಸ್ಥಳೀಯರ ಪ್ರಶ್ನೆ.

ಬಾರದ ಕಾವೇರಿ ನೀರು

ಸೂರ್ಯನಗರಕ್ಕೆ ಕಾವೇರಿ ನೀರು ಪೂರೈಕೆ ಮಾಡಲು ಎಲ್ಲಾ ರೀತಿಯ ಮಂಜೂರಾತಿ ದೊರೆತಿದ್ದರೂ ಕಾವೇರಿ ನೀರು ಮಾತ್ರ ಹರಿಯಲೇ ಇಲ್ಲ. ನೀರು ಸಂಗ್ರಹಕ್ಕಾಗಿ ಬೃಹತ್‌ ಜಲಸಂಗ್ರಹಗಾರಕ್ಕೆ ನಿರ್ಮಿಸಿದ್ದರೂ, ಇಲ್ಲಿಗೆ ಕಾವೇರಿ ಬರಲಿಲ್ಲ. ಹೀಗಾಗಿ ಆಗಿನಿಂದಲೂ ಇಲ್ಲಿನ ಮನೆಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದೆ. ಮನೆಯೊಂದಕ್ಕೆ ತಿಂಗಳಿಗೆ ಮೂರು ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಇಲ್ಲಿನ ಜನತೆ ಕಾವೇರಿ ನೀರು ನೀಡಬೇಕೆಂಬ ಇಚ್ಛಾಶಕ್ತಿ ಅಧಿಕಾರಿಗಳಿಲ್ಲ. ಟ್ಯಾಂಕರ್‌ ಮೂಲಕವೇ ನೀರು ಸರಬರಾಜು ಮಾಡುವುದಕ್ಕೆ ಇವರಿಗೆ ಹೆಚ್ಚಿನ ಆಸಕ್ತಿ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಶ್‌.

ಕಾವೇರಿ ನೀರು ಪೂರೈಕೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೈಪ್‌ಲೈನ್‌ ಕಾಮಗಾರಿಗೆ ಸಮಸ್ಯೆ ಉಂಟಾಗಿದೆ. ಇದನ್ನು ಸರಿಪಡಿಸಿ ನೀರು ಪೂರೈಕೆ ಮಾಡಲಾಗುವುದು. ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ. ಅಭಿವೃದ್ಧಿಪಡಿಸಲು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದು.

ಅಸಮರ್ಪಕ ವಿದ್ಯುತ್‌ ಪೂರೈಕೆ

ಇಲ್ಲಿಗೆ ಪ್ರತ್ಯೇಕ ವಿದ್ಯುತ್‌ ಸಂಪರ್ಕ ಕೇಂದ್ರ ಸ್ಥಾಪಿಸದೆ ಆಪ್ಟಿಕಲ್‌ ಫೈಬರ್‌ ಕೇಬಲ್‌ ಮೂಲಕ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಇದಕ್ಕೆ ಬಳಸಿರುವ ಸಾಮಗ್ರಿಗಳ ಕಳಪೆಯಿಂದ ಕೂಡಿದ್ದು, ಇದರಿಂದ ಹಲವು ಮನೆಗಳಿಗೆ ಅಸಮರ್ಪಕ ವಿದ್ಯುತ್‌ ಪೂರೈಕೆಯಾಗುತ್ತಿದೆ. ನಿವಾಸಿಗಳು ಪರದಾಡುವಂತಾಗಿದೆ.

ಎಲ್ಲಂದರಲ್ಲಿ ಕಸದ ರಾಶಿ

ನೆರಳೂರು, ಬಿದರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂರ್ಯನಗರ ಬಡಾವಣೆ ವಿಸ್ತರಿಸಿಕೊಂಡಿದೆ. ಆದರೆ ಸಮನ್ವಯತೆಯ ಕೊರತೆಯಿಂದ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಎಲ್ಲಂದರಲ್ಲಿ ತಾಜ್ಯ ಸುರಿಯಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸೂರ್ಯಸಿಟಿ ಬಡಾವಣೆಯ ಸಮೀಪದಲ್ಲಿ ಕಸ ಸುರಿಯಲಾಗಿದ್ದು, ನಿಯಮಕ್ಕೆ ವಿರುದ್ಧವಾಗಿ ಕಸ ಸುಡಲಾಗುತ್ತಿದೆ. ಇದರಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ಅಲ್ಲದೆ ಅವೈಜ್ಞಾನಿಕವಾಗಿ ತಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ದುರ್ನಾತ ಬೀರುತ್ತಿದೆ. ಇದರಿಂದ ಸಾಂಕ್ರಮಿಕ ಕಾಯಿಲೆಯ ಭೀತಿಯಲ್ಲಿದ್ದಾರೆ ಇಲ್ಲಿನ ಜನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.