ADVERTISEMENT

ಬನ್ನೇರುಘಟ್ಟ: ಮೂರು ಹುಲಿಮರಿ ಸಾವು

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 18:11 IST
Last Updated 12 ಜುಲೈ 2025, 18:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆನೇಕಲ್: ಐದು ದಿನಗಳ ಹಿಂದೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜನಿಸಿದ್ದ ಮೂರು ಹುಲಿ ಮರಿಗಳು ತಾಯಿ ಹುಲಿ ಹಾಲುಣಿಸದ ಕಾರಣ ಹಸಿವು ಮತ್ತು ಗಾಯಗಳಿಂದ ಮೃತಪಟ್ಟಿವೆ.

ಜುಲೈ7ರಂದು ಹಿಮಾ ದಾಸ್‌ ಎಂಬ ಏಳು ವರ್ಷದ ಹೆಣ್ಣು ಹುಲಿ ಎರಡು ಗಂಡು ಮತ್ತು ಒಂದು ಹೆಣ್ಣು ಸೇರಿದಂತೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಜನಿಸಿದ ಮೂರು ದಿನಗಳಲ್ಲಿ ಮರಿಗಳು ಮೃತಪಟ್ಟಿವೆ.

ಮರಿಗಳನ್ನು ತಾಯಿ ಹುಲಿ ಸರಿಯಾಗಿ ನೋಡಿಕೊಳ್ಳಲಿಲ್ಲ. ಹಾಲು ಉಣಿಸದೆ ನಿರ್ಲಕ್ಷಿಸಿತ್ತು. ತಾಯಿ ಹುಲಿ ಕಚ್ಚಿದ ಕಾರಣ ಹಾಗೂ ಕಾಲ್ತುಳಿತದಲ್ಲಿ ಮರಿಗಳು ಗಾಯಗೊಂಡಿದ್ದವು.

ADVERTISEMENT

‘ಗಾಯಗೊಂಡು ನಿತ್ರಾಣಗೊಂಡಿದ್ದ ಮರಿಗಳನ್ನು ಆರೈಕೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮರಿಗಳನ್ನು ಉಳಿಸಿಕೊಳ್ಳಲು ಪಶು ವೈದ್ಯರು ಮತ್ತು ಸಿಬ್ಬಂದಿ ಪ್ರಯತ್ನಿಸಿದರು. ಆದರೆ, ಮರಿಗಳು ಬದುಕಿ ಉಳಿಯಲಿಲ್ಲ’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕೃತ ಪ್ರಕಟಣೆ ತಿಳಿಸಿದೆ. 

ಬನ್ನೇರುಘಟ್ಟ ಉದ್ಯಾನ ಮತ್ತು ಆಸ್ಪತ್ರೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ತಾಯಿ ಮತ್ತು ಮರಿಗಳ ಚಲನವಲನ, ತಾಯಿಯ ವರ್ತನೆ ಮತ್ತು ಪೋಷಣೆ ಮೇಲೆ ಉದ್ಯಾನದ ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಸಿಬ್ಬಂದಿ ನಿಗಾ ಇಟ್ಟಿರುತ್ತಾರೆ ಎಂದು ಪ್ರಕಟಣೆ ಸ್ಪಷ್ಟನೆ ನೀಡಿದೆ. 

‘ಸಾಮಾನ್ಯವಾಗಿ ತಾಯಿ ತನ್ನ ಮರಿಗಳನ್ನು ನೋಡಿಕೊಳ್ಳುತ್ತದೆ. ಆದರೆ, ಕೆಲವು ಸಂದರ್ಭದಲ್ಲಿ ತಾಯಿ ಹುಲಿ, ಮರಿಗಳ ಆರೈಕೆ  ನಿರ್ಲಕ್ಷಿಸುತ್ತದೆ. ಇಂತಹ ಸಂದರ್ಭದಲ್ಲಿ ತಾಯಿಯಿಂದ ಬೇರ್ಪಡಿಸಿ ಮೃಗಾಲಯದ ಸಿಬ್ಬಂದಿ ಮರಿಗಳನ್ನು ಸಾಕುತ್ತಾರೆ. ಆದರೆ, ಈ ಪ್ರಕರಣದಲ್ಲಿ ನಮ್ಮ ಪ್ರಯತ್ನ ಫಲ ನೀಡಲಿಲ್ಲ’ ಎಂದು ಉದ್ಯಾನದ ಮೂಲಗಳು ಹೇಳಿವೆ.

ಹಿಮಾ ಈ ಹಿಂದೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ ಒಂದು ಮರಿ ಮೃತಪಟ್ಟಿದ್ದು, ಉಳಿದ ಎರಡು ಮರಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬೆಳೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.