ADVERTISEMENT

ವಾರಾಂತ್ಯ: ನಂದಿಬೆಟ್ಟ ಪ್ರವಾಸಕ್ಕೆ ಹರಸಾಹಸ

ವಾರಾಂತ್ಯದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 13:19 IST
Last Updated 28 ಜುಲೈ 2019, 13:19 IST
ನಂದಿಬೆಟ್ಟ ಮೇಲ್ಭಾಗ ಪ್ರವೇಶ ದ್ವಾರದ ಬಳಿ ಸಂಚಾರ ದಟ್ಟಣೆ
ನಂದಿಬೆಟ್ಟ ಮೇಲ್ಭಾಗ ಪ್ರವೇಶ ದ್ವಾರದ ಬಳಿ ಸಂಚಾರ ದಟ್ಟಣೆ   

ದೇವನಹಳ್ಳಿ: ನಂದಿಬೆಟ್ಟ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಪ್ರಸಿದ್ಧ ತಾಣವಾದರೂ ವಾರಾಂತ್ಯದಲ್ಲಿ ಬಂದ ಪ್ರವಾಸಿಗರು ಸಂಚಾರ ದಟ್ಟಣೆ ನಡುವೆ ಸಿಲುಕಿ ಹೈರಾಣಾದರು. ಜತೆಗೆ ಹರಸಾಹಸ ಪಡೆಯಬೇಕಾಯಿತು.

ಶನಿವಾರ ಮತ್ತು ಭಾನುವಾರ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆಯಿಂದ ಬರುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ವಾರಾಂತ್ಯದ ದಿನಗಳಲ್ಲಿ ಮುಂಜಾನೆ ನಾಲ್ಕರಿಂದ ಪ್ರವಾಸಿಗರ ದಂಡು ಬೆಟ್ಟಕ್ಕೆ ಲಗ್ಗೆ ಇಡುತ್ತದೆ. ಕಾರು ಮತ್ತು ದ್ವಿಚಕ್ರ ವಾಹನಗಳ ಸಂಖ್ಯೆ ಬೆಟ್ಟದ ಬುಡದಿಂದ ತುತ್ತತುದಿಯವರೆಗೆ ಸರಪಳಿಯಂತೆ ಜೋಡಣೆಯಾಗಿರುತ್ತದೆ.

ಬೆಟ್ಟದ ರಸ್ತೆ ತಿರುವುಗಳಲ್ಲಿ ಕೆಲ ಪ್ರವಾಸಿಗರು ವಾಹನ ನಿಲ್ಲಿಸಿ ಸೆಲ್ಫಿಗೆ ಇಳಿಯುವುದು, ವಾಹನಗಳನ್ನು ಓವರ್‌ಟೇಕ್‌ ಮಾಡಿ ಮಧ್ಯದಲ್ಲಿ ಸಿಲುಕುವುದು, ಕೆಲವಾಹನಗಳು ತಾಂತ್ರಿಕ ದೋಷದಿಂದ ಸಂಚಾರ ಮಾಡುವ ರಸ್ತೆಯಲ್ಲೆ ನಿಲುಗಡೆಯಾಗುವುದರಿಂದ ತೊಂದರೆಯಾಗುತ್ತಿದೆ ಎನ್ನುತ್ತಾರೆ ಪ್ರವಾಸಿಗರು.

ADVERTISEMENT

ಬೆಟ್ಟದ ತುತ್ತತುದಿಯಲ್ಲಿ ತಂಪಾದ ಹವಾಮಾನ ಒಂದೆಡೆಯಾದರೆ ಬೀಸುವ ಗಾಳಿಯಲ್ಲಿ ತೇಲಿ ಬರುವ ಮೋಡಗಳು ಮುಖಗಳಿಗೆ ಮುತ್ತಿಕ್ಕಿದಂತೆ ಭಾಸವಾಗುತ್ತದೆ. ಬೆಟ್ಟದ ಮೇಲಿಂದ ನೋಡುವ ಪ್ರಕೃತಿಯ ಸೌಂದರ್ಯದ ವಿಹಂಗಮ ನೋಟ ಕಣ್ಮನ ಸೆಳೆಯುತ್ತದೆ. ಇಂತಹ ಸೌಂದರ್ಯ ಲಹರಿ ಸವಿಯಲು ಬರುವ ಪ್ರೇಮಿಗಳು, ನವವಿವಾಹಿತ ಜೋಡಿಗಳು, ಯುವಕರ ತಂಡ ಹಾಗೂ ಯುವತಿಯರಿಗೆ ಯಾವುದೇ ರೀತಿ ನಿಯಮ ಅಳುಕೂ ಇಲ್ಲದೆ, ಕಿರುಚಾಟ ಕೂಗಾಟ ನಡೆಸುತ್ತಾರೆ ಎಂದು ಹಿರಿಯರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಈಗ ಬಂದಿರುವ ಪ್ರವಾಸಿಗರಲ್ಲಿ ಶೇಕಡ 80 ರಷ್ಟು ಅವರೇ ಇದ್ದಾರೆ. ಉದಾಸೀನತೆಯಿಂದ ವಾಹನ ಚಾಲನೆ ಮಾಡಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಾರೆ. ಬೆಳಿಗ್ಗೆ 7.30 ಕ್ಕೆ ಬೆಟ್ಟದ ಬುಡಕ್ಕೆ ಬಂದಿದ್ದರೂ 10.30 ಆದರೂ ಇನ್ನೂ ಅರ್ಧ ಬೆಟ್ಟದಲ್ಲೇ ಇದ್ದೇವೆ; ಸಣ್ಣ ಮಕ್ಕಳಿದ್ದಾರೆ. ಕಾಫಿ ತಿಂಡಿ ಇಲ್ಲ. ಈ ಟ್ರಾಫಿಕ್‌ ಇಷ್ಟೊಂದು ಇರುತ್ತದೆ ಎಂದು ಗೊತ್ತಿರಲಿಲ್ಲ’ ಎಂದು ಮೈಸೂರಿನಿಂದ ಬಂದ ಸುನಂದಮ್ಮ ಮತ್ತು ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.