ವಿಜಯಪುರ (ದೇವನಹಳ್ಳಿ): ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ದಿನ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.
ಮುಸ್ಲಿಮರು ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಹಿಳೆಯರು ಮನೆಗಳಲ್ಲಿ ಕುರಾನ್ ಪಠಣ ಮಾಡಿ, ಮುಹಮ್ಮದ್ ಪೈಗಂಬರರ ಸಂದೇಶ ಜಪಿಸಿದರು. ಹಿಂದೂಗಳು ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರಿದರು.
ಪಟ್ಟಣದ ಹಲವು ಮಸೀದಿಗಳಿಂದ ಹೊರಟ ಸ್ತಬ್ಧಚಿತ್ರಗಳು ಜಿ.ಎಂ.ಸರ್ಕಲ್‌ನಲ್ಲಿರುವ ದರ್ಗಾದ ಬಳಿಗೆ ಆಗಮಿಸಿದವು. ಅಲ್ಲಿಂದ ಘೋಷಣೆಗಳೊಂದಿಗೆ ಬಸ್ ನಿಲ್ದಾಣ, ಅಂಗತಟ್ಟಿ ನಂಜುಂಡಪ್ಪ ವೃತ್ತದ ಮೂಲಕ ಶಿಡ್ಲಘಟ್ಟ ಕ್ರಾಸ್‌ನಲ್ಲಿ ಜಮಾಯಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೂಬಾ ಮಸೀದಿ ಬಳಿ ಯುವಕ ತಂಡ ಸಾರ್ವಜನಿಕರಿಗೆ ಅನ್ನದಾನ ಮಾಡಿದರು.
ಪ್ರವಾದಿ ಮುಹಮದ್ ಪೈಗಂಬರ್ ಅವರ ಸಂದೇಶಗಳು ಮಾನವರ ಏಳಿಗೆಗೆ ಸಹಕಾರಿ. ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಕುರಾನ್ ಗ್ರಂಥದ ಮಹತ್ವವನ್ನು ಅರಿತುಕೊಳ್ಳಬೇಕು. ಯುವಪೀಳಿಗೆ ಸಮಾಜಕ್ಕೆ ಮಾದರಿಯಾಗಬೇಕು ಎಂದು ಪುರಸಭಾ ಸದಸ್ಯ ಮಾಜಿ ಗೌಸ್ ಖಾನ್ ನುಡಿದರು.
ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಮಸೀದಿಗಳು ಹಾಗೂ ಮುಖ್ಯವೃತ್ತಗಳಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಪ್ರಶಾಂತ್ ಎಸ್ ನಾಯಕ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.