ADVERTISEMENT

ಮಕ್ಕಳಿಗೆ ಸೋಲುವುದನ್ನೂ ಕಲಿಸಿ : ಭಾರತಿ ಲಕ್ಷ್ಮಣಗೌಡ

ವಿಜಯಪುರ –ಚನ್ನರಾಯಪಟ್ಟಣ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2018, 14:22 IST
Last Updated 27 ಆಗಸ್ಟ್ 2018, 14:22 IST
ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಮಾತನಾಡಿದರು
ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಮಾತನಾಡಿದರು   

ವಿಜಯಪುರ: ಉತ್ತಮ ಸಂಸ್ಕಾರ, ಮಾನವೀಯ ಗುಣಗಳನ್ನು ಹೊರತರಲು ಪ್ರತಿಭಾ ಕಾರಂಜಿ ವೇದಿಕೆಗಳಿಂದ ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಜಯಪುರ –ಚನ್ನರಾಯಪಟ್ಟಣ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ’ದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರುವ ಉತ್ತಮ ಪ್ರತಿಭೆಗಳ ಜೊತೆಗೆ ಅವರಲ್ಲಿ ಮಾನವೀಯ ಗುಣಗಳನ್ನೂ ಹೊರತರುವಲ್ಲಿ ಪ್ರತಿಭಾ ಕಾರಂಜಿ ವೇದಿಕೆಗಳು ಉಪಯೋಗವಾಗಬೇಕು. ವಿದ್ಯಾರ್ಥಿಗಳಿಗೆ ಅಂಕವೇ ಮುಖ್ಯವಲ್ಲ. ಪೋಷಕರು ಈಗಿನ ಮಕ್ಕಳಿಗೆ ಸೋಲಲು ಕೂಡ ಕಲಿಸಬೇಕು. ಸೋಲು ಗೆಲುವಿಗೆ ಸೋಪಾನವಾಗುತ್ತದೆ. ಆಗ ಮಾತ್ರ ಜೀವನದಲ್ಲಿ ಯಾವ ಸವಾಲನ್ನೂ ಕೂಡ ದಿಟ್ಟವಾಗಿ ಎದುರಿಸುತ್ತಾರೆ ಎಂದರು.

ADVERTISEMENT

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ ಮಾತನಾಡಿ, ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಆದರೆ ಅದನ್ನು ಹುಡುಕಿ ತೆಗೆಯುವ ಕೆಲಸ ಸಮಾಜದಿಂದ ಆಗಬೇಕಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಿಗುವಇಂತಹ ಉತ್ತಮ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಮಾತನಾಡಿ, ‘ಪ್ರತಿಭಾ ಕಾರಂಜಿ’ ಮೂಲಕ ಹೊರಬರುವ ಪ್ರತಿಭೆಗಳು, ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತವೆ. ಮಕ್ಕಳಲ್ಲಿರುವ ಅಗಾಧವಾದ ಕಲಾ ಪ್ರಾಕಾರಗಳನ್ನು ಹೊರಗೆ ತರುವಲ್ಲಿ ಶಿಕ್ಷಕರ ಪಾತ್ರವೂ ಮಹತ್ತರವಾದುದು ಎಂದರು.

ಉಪಪ್ರಾಂಶುಪಾಲ ಪಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, 2002–03ನೇ ಸಾಲಿನಲ್ಲಿ ಆರಂಭಗೊಂಡ ‘ಪ್ರತಿಭಾ ಕಾರಂಜಿ’, ಆರಂಭದಲ್ಲಿ ಪರಿಣಾಮಕಾರಿ ಆಗಿರಲಿಲ್ಲ. ಆದರೆ, ನಂತರದ ವರ್ಷಗಳಲ್ಲಿ ದೇಶದಲ್ಲೆ ಶಾಲಾ ಮಕ್ಕಳಿಗಾಗಿ ಜಾರಿಗೆ ತಂದಿರುವ ಅತ್ತುತ್ತಮ ಕಾರ್ಯಕ್ರಮವಾಗಿ ಹೊರಹೊಮ್ಮಿದೆ ಎಂದರು.

ಶಾಲಾ ಮಕ್ಕಳು, ತಮಟೆ ವಾದನಗಳೊಂದಿಗೆ ಪ್ರದರ್ಶಿಸಿದ ಕರಗ ಆಚರಣೆಯ ನೃತ್ಯ ಎಲ್ಲರ ಗಮನ ಸೆಳೆಯಿತು. ಶಾಲಾವರಣ ಬಣ್ಣ ಬಣ್ಣದ ಕಾಗದಗಳಿಂದ ಕಂಗೊಳಿಸುತ್ತಿತ್ತು. ಎರಡು ಹೋಬಳಿಗಳ ಮಕ್ಕಳು ವಿವಿಧ ವೇಷಭೂಷಣಗಳಲ್ಲಿ ಕಂಗೊಳಿಸಿದರು. ವಿದ್ಯಾರ್ಥಿಗಳು ಜೇಡಿ ಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ರಚಿಸಿದ್ದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ದಿನ್ನೂರು ವೆಂಕಟೇಶ್, ಅನ್ನಪೂರ್ಣಚಂದ್ರಪ್ಪ, ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ, ಪುರಸಭಾ ಸದಸ್ಯರಾದ ವರದರಾಜು, ಮುನಿಚಿನ್ನಪ್ಪ, ಭಾರತಿ ಮುನಿಕೃಷ್ಣಪ್ಪ, ಗಾರೆ ನಾರಾಯಣಸ್ವಾಮಿ, ಚನ್ನಪ್ಪ, ಮುರಳಿ, ಕೆ.ಮಂಜುನಾಥ್, ನಾರಾಯಣಸ್ವಾಮಿ, ಮಾರುತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಲಿಂಗಪ್ಪ, ಶಾಲಾ ಸಿಬ್ಬಂದಿ ಪಿ.ಎಂ.ಕೊಟ್ರೇಶ್, ಬಿ.ಎಸ್.ನಾರಾಯಣ್, ಡಾ.ರಮೇಶಪ್ಪ, ರಾಮಾಂಜು, ಮುನಿಶಾಮಣ್ಣ, ರಘು, ಕರಗಪ್ಪ, ಮಹಬೂಬ್ ಸುಭಾನ್, ಆನಂದ್ ಕುಮಾರ್, ಶೈಲಜಾ, ಪ್ರತಿಭಾ ನಾಯಕ್, ಮುಬೀನಾ ಸುಲ್ತಾನಾ, ಕುಮಾರಿ, ಶೋಭಾಪಾರಂಡೆ, ಕೋಮಲಶ್ರೀ, ಎಸ್.ಶಮೀರಾ, ಪೂರ್ಣಿಮಾ, ಪಾರ್ವತಮ್ಮ, ಆಶಾ, ರೇವತಿ, ರೂಪ, ರೋಹಿಣಿ, ಸರಳ, ಮಧುಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.