ADVERTISEMENT

ತಾರಸಿ ಮೇಲಿರಲಿ ಗುಟುಕು ನೀರು: ಅಭಿಯಾನ ಆರಂಭಿಸಿದ ಪಕ್ಷಿಪ್ರಿಯರು

ಹೀಗೊಂದು ಅಭಿಯಾನ ಆರಂಭಿಸಿದ ತಾಲ್ಲೂಕಿನ ಪಕ್ಷಿಪ್ರಿಯರು

ನಟರಾಜ ನಾಗಸಂದ್ರ
Published 10 ಫೆಬ್ರುವರಿ 2021, 2:44 IST
Last Updated 10 ಫೆಬ್ರುವರಿ 2021, 2:44 IST
ನೀರಿನ ಬೊಗಣೆ
ನೀರಿನ ಬೊಗಣೆ   

ದೊಡ್ಡಬಳ್ಳಾಪುರ: ಈಗಷ್ಟೇ ಬೇಸಿಗೆ ಆರಂಭವಾಗಿದೆ. ಬಿಸಿಲಿನ ಬೇಗೆ ಹೆಚ್ಚತೊಡಗಿದೆ. ಈ ಬಾರಿ ಹದವಾಗಿ ಮಳೆಯಾಗಿ ಉತ್ತಮ ಬೆಳೆ ಬಂದಿದೆ. ಆದರೆ, ಕೆರೆ ಕುಂಟೆಗಳು ತುಂಬುವಷ್ಟು ಮಳೆ ಬಂದಿಲ್ಲ. ಹೀಗಾಗಿ ಪಕ್ಷಿಗಳು ಕುಡಿಯುವ ನೀರಿಗಾಗಿ ಹುಡುಕಾಟ ಆರಂಭಿಸಿವೆ. ಇದು ತಾಲ್ಲೂಕಿನಲ್ಲಿ ಮಳೆ, ಬೆಳೆ ಪಕ್ಷಿ ನೋಟ.

ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಎಲ್ಲಾ ಕಡೆ ಕೆರೆ,ಕುಂಟೆಗಳಲ್ಲಿ ನೀರಿನ ಸಂಗ್ರಹ ಖಾಲಿಯಾಗುತ್ತಿದ್ದಂತೆ ಪಕ್ಷಿಗಳು ಕುಡಿಯುವ ನೀರು ಇರುವ ಸ್ಥಳದತ್ತ ವಲಸೆ ಹೋಗುತ್ತಿದೆ. ಅದರಲ್ಲೂ ಗುಬ್ಬಿ, ಕಾಗೆ, ಗೊರವಂಕ, ಬುಲ್‌ ಬುಲ್‌ ಪಕ್ಷಿಗಳಂತೂ ಬೇಸಿಗೆಯಲ್ಲಿ ಕುಡಿಯುವ ನೀರಿಗಷ್ಟೇ ಅಲ್ಲದೆ ಬಿಸಿಲಿನ ವೇಳೆಯಲ್ಲಿ ಇಡೀ ದೇಹದಲ್ಲಿನ ರೆಕ್ಕೆ, ಪುಕ್ಕಗಳು ಹೊದ್ದೆಯಾಗುವಂತೆ ಮೈತೊಳೆದುಕೊಂಡರಷ್ಟೇ ಅವುಗಳಿಗೆ ಸಮಧಾನ. ಇಲ್ಲವಾದರೆ ಚಡಪಡಿಸಿ ಹೋಗುತ್ತವೆ.

ಪಕ್ಷಿಗಳ ಈ ಚಡಪಡಿಕೆನು ನೀಗಿಸುವ ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರು ಹುಡುಕಿಕೊಂಡು ವಲಸೆ ಹೋಗದಂತೆ ತಡೆಯುವ ಸಲುವಾಗಿ ಪಕ್ಷಿ ಪ್ರಿಯರು ಜನವರಿ ಆರಂಭವಾಗುತ್ತಿದ್ದಂತೆ ‘ಗುಟುಕು’ ಅಭಿಯಾನ ಆರಂಭಿಸುತ್ತಾರೆ. ತಾವು ಸೇರಿದಂತೆ ತಮ್ಮ ಮನೆ ಅಕ್ಕಪಕ್ಕದವರು ಹಾಗೂ ಸ್ನೇಹಿತರ ಮನೆಗಳ ತಾರಸಿ ಮೇಲೆ ಜನ ಒಡಾಡದ ಸ್ಥಳಗಳಲ್ಲಿ ಬಟ್ಟಲು, ಮಣ್ಣಿನ ಬೊಗಣಿ ಸೇರಿದಂತೆ ಪಕ್ಷಿಗಳು ನೀರು ಕುಡಿಯುವ ಸೌಲಭ್ಯ ಕಲ್ಪಿಸಲು ಪ್ರಾಚಾರ ನಡೆಸುತ್ತಾರೆ. ಪಕ್ಷಿಗಳಿಗೆ ಅನುಕೂಲವಾಗುವಂತಹ ಬಟ್ಟಲುಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಸಾಧ್ಯ ಇರುವ ಕಡೆಯಲ್ಲಿ ತಿಳಿಸುತ್ತಾ ಹೋಗುತ್ತಾರೆ.

ADVERTISEMENT

‘ನಮ್ಮ ಮನೆ ತಾರಸಿಯಲ್ಲಿ ಮಣ್ಣಿನಿಂದ ಮಾಡಿರುವ ಸುಮಾರು ಮೂರು ಇಂಚು ಎತ್ತರದ ಒಂದು ಅಡಿ ಸುತ್ತಳತೆಯ ಪುಟ್ಟ ಬೊಗಣಿಯಲ್ಲಿ ಇಡೀ ವರ್ಷ ನೀರು ತುಂಬುತ್ತಲೇ ಇರುತ್ತೇನೆ. ಹೀಗಾಗಿ ಏಳಕ್ಕು ಹೆಚ್ಚಿನ ಜಾತಿಯ ಪಕ್ಷಗಳು ತಮ್ಮದೇ ಸಮಯಗಳಿಗೆ ಬಂದು ನೀರು ಕುಡಿದು ಹೋಗುತ್ತಿವೆ’ ಎನ್ನುತ್ತಾರೆ ಯುವ ಸಂಚಲನ ಅಧ್ಯಕ್ಷ ಚಿದಾನಂದ್‌.

ಬೊಗಣಿಯಲ್ಲಿ ಮಳೆಗಾಲದಲ್ಲಿ ವಾರಕ್ಕೆ ಒಮ್ಮೆ ನೀರು ಬದಲಾಯಿಸಿ ತುಂಬುತ್ತಿದೆ. ಆದರೆ, ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಎರಡು ದಿನಗಳಿಗೆ ಒಮ್ಮೆ ನೀರು ತುಂಬಿದರು ಸಹ ಖಾಲಿಯಾಗುತ್ತಿವೆ. ಅದರಲ್ಲೂ ಗುಬ್ಬಿಗಳು ಬಂದರಂತೂ ನೀರು ಕುಡಿಯುವುದರ ಜತೆಗೆ ನೀರಿನ ಮಿಂದೆದ್ದೇ ಹೋಗುವುದು. ಇನ್ನು ಕಾಗೆಗಳು ಗಟ್ಟಿ ಆಹಾರವನ್ನು ತಂದು ನೀರಿನಲ್ಲಿ ಮುಳುಗಿಸಿ ಒಂದಿಷ್ಟು ಸಮಯ ಬಿಟ್ಟು ಮತ್ತೆ ತಿನ್ನುತ್ತವೆ. ಕೆಲವೊಮ್ಮೆ ನೀರಿನ ಬಟ್ಟಲಿನಲ್ಲೇ ಆಹಾರ ಬಿಟ್ಟು ಮರೆತು ಹೋಗುತ್ತವೆ. ಹೀಗಾಗಿ ನೀರಿನ ಬಟ್ಟಲು ಗಲಿಜಾಗಿದ್ದರೆ ಇತರೆ ಪಕ್ಷಿಗಳು ಬಂದು ನೀರು ಕುಡಿಯುವುದಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಪ್ರತಿ ದಿನ ನೀರಿನ ಬಟ್ಟಲು ಸ್ವಚ್ಛಗೊಳಿಸಿ ನೀರು ತುಂಬಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.