
ಆನೇಕಲ್: ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಸೂರು ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡ ಕಾರಣ ನೀರು ಸರಬರಾಜು ಮತ್ತು ಜಲ ಅರ್ಪಣ ದಿನ ಆಯೋಜಿಸಲಾಗಿತ್ತು.
ಮರಸೂರು ಗ್ರಾಮದಲ್ಲಿ ನಲ್ಲಿಯೊಂದಕ್ಕೆ ಪೂಜೆ ಸಲ್ಲಿಸಿ ನೀರು ಸರಬರಾಜನ್ನು ಉದ್ಘಾಟಿಸಲಾಯಿತು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಮಹದೇವಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ 24x7 ನೀರು ಸರಬರಾಜು ಮಾಡಲು ಜಲಜೀವನ್ ಮಿಷನ್ ಉಪಯುಕ್ತವಾಗಿದೆ. ಸಿಬ್ಬಂದಿ ಮತ್ತು ಗುತ್ತಿಗೆದಾರರಿಗೆ ಒತ್ತಡ ಹೇರಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಶೇ 70ರಷ್ಟು ಕಾಮಗಾರಿ ಮುಗಿದಿದ್ದು ಉಳಿದ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ಮಾತನಾಡಿ, ಮರಸೂರು ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇದರಿಂದಾಗಿ ನೀರಿಗಾಗಿ ಓಡಾಟ ತಪ್ಪುತ್ತದೆ. ಮನೆಯ ಮುಂದೆಯ ನೀರು ದೊರೆಯುವುದರಿಂದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ, ಅಭಿವೃದ್ಧಿ ಅಧಿಕಾರಿ ಮುರಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಾಪುರ ರಾಮಚಂದ್ರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರುಕ್ಕು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.