ADVERTISEMENT

ಪಶ್ಚಿಮ ಏಷ್ಯಾ ಉದ್ವಿಗ್ನ: 500ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ವಾಪಸ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 22:06 IST
Last Updated 3 ಮಾರ್ಚ್ 2026, 22:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ದೇವನಹಳ್ಳಿ: ಇರಾನ್–ಇಸ್ರೇಲ್ ಯುದ್ಧದ ನಂತರ ಪಶ್ಚಿಮ ಏಷ್ಯಾದಲ್ಲಿ ನಿರ್ಮಾಣವಾಗಿದ್ದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಮತ್ತೆ ಶುರುವಾಗಿದೆ. ಅಬುಧಾಬಿ, ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ನಗರಗಳಲ್ಲಿ ಸಿಲುಕಿದ್ದ 500ಕ್ಕೂ ಹೆಚ್ಚು ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆ ತರಲಾಗಿದೆ.  

ಅಬುಧಾಬಿಯಿಂದ ಸೋಮವಾರ ಹಾಗೂ ಮಂಗಳವಾರ ಎರಡು ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ. 

ADVERTISEMENT

210 ಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನ ಸೋಮವಾರ ರಾತ್ರಿ 10ಕ್ಕೆ ಬೆಂಗಳೂರಿಗೆ ಬಂದಿಳಿಯಿತು. ಎರಡನೇ ವಿಮಾನ ಮಂಗಳವಾರ ಬೆಳಗಿನ ಜಾವ 3.20ಕ್ಕೆ 300 ಪ್ರಯಾಣಿಕರನ್ನು ಕರೆತಂದಿತು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಾಲಿಡುತ್ತಲೇ ಪ್ರಯಾಣಿಕರ ಮುಖಗಳಲ್ಲಿ ಹರ್ಷ ಕಾಣಿಸಿತು. 

‘ಕೊಲ್ಲಿ ರಾಷ್ಟ್ರಗಳಲ್ಲಿ ಕ್ಷಿಪಣಿ ದಾಳಿಯಿಂದ ವಿಮಾನಯಾನ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಹೋಟೆಲ್‌, ವಿಮಾನ ನಿಲ್ದಾಣಗಳಲ್ಲಿ ಉಳಿದುಕೊಂಡಿದ್ದೆವು. ಆಗಸದಲ್ಲಿ ಕ್ಷಿಪಣಿ ಕಾಣಿಸಿಕೊಂಡ ತಕ್ಷಣ ವಿಮಾನ ನಿಲ್ದಾಣದಲ್ಲಿ ಜೋರಾಗಿ ಮೊಳಗುತ್ತಿದ್ದ ಸೈರನ್‌ ಸದ್ದು ಕೇಳುತ್ತಲೇ ಎದೆಬಡಿತ ತೀವ್ರವಾಗಿ ಭಯ ಕಾಡುತ್ತಿತ್ತು. ಸುರಕ್ಷಿತವಾಗಿ ಮನೆ ಸೇರಿದರೆ ಸಾಕು ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೆವು’ ಎಂದು ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

‘ವಿಮಾನ ಹತ್ತಲು ಬಂದಾಗ ಏಕಾಏಕಿ ಸೈರನ್‌ ಮೊಳಗಿತು. ಕ್ಷಿಪಣಿ ಭೀತಿ ಇದೆ ಎಂದು ಹೇಳಿದರು. ಆಕಾಶದಲ್ಲಿ ಸಿಡಿಮದ್ದುಗಳು ಸಿಡಿಯುತ್ತಿದಂತೆ ಕಂಡಿತು. ನಾವು ಬೆಚ್ಚಿಬಿದ್ದೆವು. ಸುರಕ್ಷಿತವಾಗಿ ಮನೆ ತಲುಪಿದ್ದೇವೆ ಎಂಬುದೇ ನೆಮ್ಮದಿ’ ಎಂದು ಅಬುಧಾಬಿಯ ತೈಲ ಕಂಪನಿಯೊಂದರ ಉದ್ಯೋಗಿ ಮಂಗಳೂರಿನ ಸೌರಭ್ ಶೆಟ್ಟಿ ಅನುಭವ ಹಂಚಿಕೊಂಡರು.

ವಿಮಾನಯಾನ ಸಂಸ್ಥೆ ಉತ್ತಮ ವಸತಿ ಮತ್ತು ಆಹಾರ ವ್ಯವಸ್ಥೆ ಮಾಡಿತ್ತು. ಸುಮಾರು 15 ರಿಂದ 16 ವಿಮಾನಗಳು ಸಂಚರಿಸುತ್ತಿವೆ. ಭಾಗಶಃ ವಾಯುಪ್ರದೇಶ ಮಾತ್ರ ತೆರೆಯಲಾಗಿದೆ ಎಂದು ಬಾಸ್ಟನ್‌ನಿಂದ ಅಬುಧಾಬಿ ಮೂಲಕ ಬಂದ ಮಹೇಶ್ ತಿಳಿಸಿದರು. 

ಡ್ರೋನ್ ದಾಳಿಯಿಂದ ಪ್ರಯಾಣ ಸ್ವಲ್ಪ ವಿಳಂಬವಾಯಿತು. ಆದರೆ ಸುರಕ್ಷಿತವಾಗಿ ಹಿಂತಿರುಗುವ ವ್ಯವಸ್ಥೆ ಮಾಡಿದರು ಎಂದು ಕೊಯಮತ್ತೂರಿನ ನಿರೂಬನ್ ಹೇಳಿದರು.

ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲು ಕಾರಣರಾದ ಎತಿಹಾದ್ ಏರ್‌ವೇಸ್, ಸೌದಿ ಅರೇಬಿಯಾ ಹಾಗೂ ಭಾರತ ಸರ್ಕಾರಗಳಿಗೆ ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದರು.  

42 ವಿಮಾನ ಹಾರಾಟ ರದ್ದು

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಬೆಳಗಿನ ಜಾವ 4.30ಕ್ಕೆ 56 ಪ್ರಯಾಣಿಕರನ್ನು ಹೊತ್ತು ದುಬೈಗೆ ಹೊರಟಿದ್ದ ಎಮಿರೆಟ್ಸ್‌ ವಿಮಾನ ಕೆಲವೇ ಹೊತ್ತಿನಲ್ಲಿ ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿ ಬಂದಿದೆ.

ಪಶ್ಚಿಮ ಏಷ್ಯಾದ ವಾಯು ಪ್ರದೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ವಿಮಾನ ಹಿಂದಿರುಗಿ ಬಂತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ದುಬೈಗೆ ಹೊರಟಿದ್ದ ಪ್ರಯಾಣಿಕರಲ್ಲಿ ಹೆಚ್ಚಿನವರು ಅಲ್ಲಿಯ ನಾಗರಿಕರಾಗಿದ್ದರು ಎಂದು ತಿಳಿದು ಬಂದಿದೆ. 

ಮಂಗಳವಾರ ಮಧ್ಯಾಹ್ನ 3ರವರೆಗೆ ಒಟ್ಟು 42 ವಿಮಾನಗಳ ಸಂಚಾರ ರದ್ದಾಗಿದೆ. ಅಬುಧಾಬಿ, ದುಬೈ, ರಿಯಾದ್, ಜೆದ್ದಾ ಹಾಗೂ ದೋಹಾ ಮಾರ್ಗಗಳ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.