ADVERTISEMENT

ದೊಡ್ಡಬಳ್ಳಾಪುರ| ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅನನ್ಯ: ಪ್ರಮೀಳಾ ಮಹಾದೇವ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:09 IST
Last Updated 12 ನವೆಂಬರ್ 2025, 2:09 IST
ದೊಡ್ಡಬಳ್ಳಾಪುರದ ಜ್ಞಾನಗಂಗಾ ಪ್ರೌಢ ಶಾಲೆಯಲ್ಲಿ ನಡೆದ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು
ದೊಡ್ಡಬಳ್ಳಾಪುರದ ಜ್ಞಾನಗಂಗಾ ಪ್ರೌಢ ಶಾಲೆಯಲ್ಲಿ ನಡೆದ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು   

ದೊಡ್ಡಬಳ್ಳಾಪುರ: ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನನ್ಯವಾಗಿದೆ. ಬಾನು ಮುಸ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬರುವ ಮೂಲಕ ಕನ್ನಡ ನಾಡಿನ ಮಹಿಳಾ ಸಾಹಿತಿಗಳಿಗೆ ವಿಶ್ವ ಮನ್ನಣೆ ದೊರೆಯುವಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಹೇಳಿದರು.

ನಗರದ ಜ್ಞಾನಗಂಗಾ ಪ್ರೌಢಶಾಲೆಯಲ್ಲಿ ಕನ್ನಡ ಜಾಗೃತ ಪರಿಷತ್ತು,ಕನ್ನಡ ಸಾಹಿತ್ಯ ಪರಿಷತ್ತು,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ಮೊದಲಿನಿಂದಲೂ ಮಹಿಳಾ ಸಾಹಿತಿಗಳು ಸಾಮಾಜಿಕ‌ ಅಸಮಾನತೆಯ ವಿರುದ್ದ ಧ್ವನಿ ಎತ್ತಿದ್ದಾರೆ. ಅಕ್ಕಮಹಾದೇವಿ, ಸಂಚಿಯ ಹೊನ್ನಮ್ಮ, ನಂಜನಗೂಡು ತಿರುಮಲಾಂಬ, ಎಂ.ಕೆ.ಇಂದಿರಾ, ತ್ರಿವೇಣಿ, ಅನುಪಮಾ ನಿರಂಜನ ಮುಂತಾದ ಅಸಂಖ್ಯಾತ ಮಹಿಳಾ ಸಾಹಿತಿಗಳು ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ ಎಂದರು‌.

ADVERTISEMENT

ಮಹಿಳಾ ಸಾಹಿತಿಗಳು ಸ್ತ್ರೀವಾದಿ ದೃಷ್ಟಿಕೋನದ ಮೂಲಕ ಮಹಿಳೆಯರ ಶೋಷಣೆ,ಸಾಮಾಜಿಕ ಸಮಸ್ಯೆಗಳು, ಅಧ್ಯಾತ್ಮಿಕತೆ,ವೈಯಕ್ತಿಕ ಅನುಭವಗಳು ಮತ್ತು ವೈಚಾರಿಕ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಮಹಿಳಾ ಸಾಹಿತ್ಯ ಕ್ಷೇತ್ರ ಇಂದು ವಿಸ್ತಾರಗೊಂಡಿದೆ. ವೈಚಾರಿಕ ಮತ್ತು ವೈವಿಧ್ಯಮಯ ಸಾಹಿತ್ಯ ಓದುಗರನ್ನು ತಲುಪುವ ಮೂಲಕ ಅವರನ್ನು ಚಿಂತನಶೀಲರನ್ನಾಗಿಸಿ ಜಾಗೃತಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು.

ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾದ ಬೆಳವಣಿಗೆ ನಡೆಯುತ್ತಿರುವುದು ಆತಂಕಕಾರಿ ವಿಷಯ.ವಿಜ್ಞಾನ ಮಾನವೀಯ ಮೌಲ್ಯಗಳಿಂದ ವಿಮುಖವಾಗಬಾರದು ಎಂದು ಪರಿಸರವಾದಿ ವೈ.ಟಿ.ಲೋಹಿತ್ ಅಭಿಪ್ರಾಯಪಟ್ಟರು.

ಮುಖ್ಯಶಿಕ್ಷಕ ಎನ್.ರವಿಕುಮಾರ್,ಬಿ.ಕೆ.ಜಗದೀಶ್, ಪ್ರೊ.ಕೆ.ಆರ್.ರವಿಕಿರಣ್, ಎ.ಜಯರಾಮ್,ವಿ.ಎಸ್.ಹೆಗಡೆ, ವೆಂಕಟರಾಜು, ಕೋದಂಡರಾಮ್, ಸಿ.ಅಣ್ಣಯ್ಯ, ನಾಗರತ್ನಮ್ಮ, ಸೂರ್ಯನಾರಾಯಣ್, ಪರಮೇಶ್, ರಾಮಕೃಷ್ಣ, ದರ್ಗಾಜೋಗಿಹಳ್ಳಿ ಮಲ್ಲೇಶ್, ಮುನಿರತ್ನಮ್ಮ, ಸೆಲ್ವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.