ADVERTISEMENT

ಸುಡುಬಿಸಿಲಲ್ಲೇ ನೀರು ಹಿಡಿಯುವ ಮಹಿಳೆಯರು, ಟ್ಯಾಂಕರ್‌ ಮೂಲಕ ಪೂರೈಕೆಗೆ ಆಗ್ರಹ

ಅಂತರ್ಜಲದ ಮಟ್ಟ ತೀವ್ರ ಕುಸಿತ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 13:46 IST
Last Updated 27 ಏಪ್ರಿಲ್ 2019, 13:46 IST
ವಿಜಯಪುರ ಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಮಹಿಳೆಯರು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ನೀರು ಹಿಡಿಯುತ್ತಿರುವುದು    
ವಿಜಯಪುರ ಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಮಹಿಳೆಯರು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ನೀರು ಹಿಡಿಯುತ್ತಿರುವುದು       

ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಅಂತರ್ಜಲದ ಮಟ್ಟ ಕುಸಿತದಿಂದ ಸಮರ್ಪಕ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ.

ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಿಕ್ಕಾಗಿ ಗ್ರಾಮ ಪಂಚಾಯಿತಿಗಳಿಂದ ಕಸರತ್ತು ಮುಂದುವರಿದಿದೆ. ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ಅನ್ನಪೂರ್ಣಮ್ಮ, ವರಲಕ್ಷ್ಮಮ್ಮ ಅಸಹಾಯಕತೆ ತೋಡಿಕೊಂಡರು. ಕುಡಿಯಲಿಕ್ಕೂ ನೀರಿಲ್ಲ. ಸ್ನಾನಕ್ಕೂ ನೀರಿಲ್ಲ. ದನಕರುಗಳಿಗಂತೂ ಇಲ್ಲವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೇಗೆ ಬದುಕು ಸಾಗಿಸಬೇಕೆನ್ನುವುದು ಗೊತ್ತಾಗುತ್ತಿಲ್ಲ ಎಂದರು.

ಸಮೀಪದ ಹಾರೋಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದಿನಬೆಳಗಾದರೆ ನೀರಿನದ್ದೇ ಚಿಂತೆಯಾಗಿದೆ. ಸರ್ಕಾರಿ ಶಾಲೆಯ ಮುಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಬಳಿಯಲ್ಲಿ ಎಲ್ಲರೂ ನೀರು ಹಿಡಿಯಬೇಕು. ಬರುವ ಅಲ್ಪಸ್ವಲ್ಪ ನೀರನ್ನು ಹಿಡಿಯಬೇಕಾದರೆ ಸುಡುವ ಬಿಸಿಲಿನಲ್ಲೇ ದಿನವೆಲ್ಲಾ ಕಾದು ಕುಳಿತರೂ 4 ಬಿಂದಿಗೆ ನೀರು ಸಿಗುತ್ತದೆ ಎಂದು ಹೇಳಿದರು.

ADVERTISEMENT

‘ನಾವೆಲ್ಲರೂ ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಮಾಡುವವರು, ಹಸುಗಳಿಗೆ ನೀರಿಲ್ಲವಾದರೆ ಅವುಗಳನ್ನು ಪೋಷಣೆ ಮಾಡುವುದು ಹೇಗೆ. ಪಂಚಾಯಿತಿಯವರನ್ನು ಕೇಳಿದರೆ ಬೋರ್‌ಗಳಲ್ಲಿ ನೀರಿಲ್ಲ ಎನ್ನುತ್ತಾರೆ. ಟ್ಯಾಂಕರ್‌ಗಳಲ್ಲಾದರೂ ನೀರು ಕೊಟ್ಟರೆ ತುಂಬಾ ಅನುಕೂಲವಾಗುತ್ತದೆ’ ಎಂದರು.

‘ಬೆಳಗಾಗುತ್ತಿದ್ದಂತೆ ಖಾಲಿ ಬಿಂದಿಗೆಗಳನ್ನು ನೀರಿನ ಕೊಳಾಯಿ ಬಳಿಯಲ್ಲಿಟ್ಟು ಸರದಿಗಾಗಿ ಕಾಯಬೇಕು. ಕೂಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಬಿಸಿಲು ಸುಡುತ್ತಿದ್ದರೂ ಹೋಗುವಂತಿಲ್ಲ, ನಮ್ಮ ಸರದಿ ಬರುತ್ತೆ ಎಂದು ಕಾದು ಕುಳಿತುಕೊಳ್ಳಬೇಕು. ಇನ್ನೇನು ಮಾಡೋದು ನಮಗೆ ವಿಧಿಯಿಲ್ಲ’ ಎಂದು ಮಹಿಳೆಯರು ಅಸಹಾಯಕತೆ ತೋಡಿಕೊಂಡರು.

‘ತೊಟಗಳ ಬಳಿಯಲ್ಲಾದರೂ ನೀರು ಹಿಡಿದುಕೊಂಡು ಬರೋಣವೆಂದರೆ, ರೈತರು ತೋಟಗಳಿಗೆ ಡ್ರಿಪ್‌ಗಳನ್ನು ಅಳವಡಿಸಿರೋದ್ರಿಂದ ಅಲ್ಲಿಯೂ ನೀರು ಸಿಗುತ್ತಿಲ್ಲ’ ಎಂದರು.

ಲಕ್ಷ್ಮಮ್ಮ ಹೇಳುವಂತೆ, ‘ಹಸುಗಳಿಂದ ಜೀವನ ಮಾಡ್ತಾ ಇದ್ದೇವೆ. ಬೇಸಿಗೆ ಆರಂಭವಾದ ಮೇಲೆ ಸರಿಯಾಗಿ ಮೇವು ಇಲ್ಲ, ದಿನಕ್ಕೆ ಒಂದು ಬಾರಿಗೆ ಮೂರು ಬಿಂದಿಗೆಯಷ್ಟು ನೀರು ಮೂರು ಸಾರಿ ಕುಡಿಸಬೇಕು, ಎರಡು ಬಾರಿ ಒಂದೊಂದು ಬಿಂದಿಗೆ ನೀರು ಕುಡಿಸುತ್ತೇವೆ. ಆದ್ದರಿಂದ ಹಾಲು ಕಡಿಮೆಯಾಗಿಬಿಟ್ಟಿದೆ. ಹಸುಗಳು ಏಳಿಗೆಯಾಗುತ್ತಿಲ್ಲ. ಇದರಿಂದ ಜೀವನಕ್ಕೂ ತೊಂದರೆಯಾಗಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.