ADVERTISEMENT

ಶೆಟ್ಟಿಹಳ್ಳಿ: ಗೌರಿ ದೇವಿ ಆರಾಧನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 4:50 IST
Last Updated 29 ನವೆಂಬರ್ 2021, 4:50 IST
ಆನೇಕಲ್ ತಾಲ್ಲೂಕಿನ ಶೆಟ್ಟಿಹಳ್ಳಿಯಲ್ಲಿ ಪ್ರತಿಷ್ಠಾಪಿಸಿರುವ ಗೌರಿ ದೇವಿಯ ಮೂರ್ತಿಗಳು
ಆನೇಕಲ್ ತಾಲ್ಲೂಕಿನ ಶೆಟ್ಟಿಹಳ್ಳಿಯಲ್ಲಿ ಪ್ರತಿಷ್ಠಾಪಿಸಿರುವ ಗೌರಿ ದೇವಿಯ ಮೂರ್ತಿಗಳು   

ಆನೇಕಲ್:ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ತವರುಮನೆಯ ಆತಿಥ್ಯ ನೀಡಿ ಸತ್ಕರಿಸಿ ದೇವಿಯನ್ನು ಜಲಾಧಿವಾಸಕ್ಕೆ ಕಳುಹಿಸಿಕೊಡುವ ವಿಶೇಷ ಆಚರಣೆಯು ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ
ನಡೆಯಿತು.

ಗ್ರಾಮದ ವಿವಿಧ ಕುಟುಂಬಗಳಲ್ಲಿ ಗೌರಿ ದೇವಿಯ ಮೂರ್ತಿಗಳನ್ನು ಹೊಂದಿದ್ದಾರೆ. ಕಾರ್ತೀಕ ಮಾಸದಲ್ಲಿ ಮನೆಯಲ್ಲಿನ ದೇವಿಯ ಉತ್ಸವ ಮೂರ್ತಿಗಳನ್ನು ಗ್ರಾಮದಲ್ಲಿ ಕುಳ್ಳರಿಸಿ ಪ್ರತಿದಿನ ಸಂಜೆ ವೇಳೆ ಲಲಿತಾ ಸಹಸ್ರನಾಮ, ಭಜನೆ, ದೇವಿಯ ಆರಾಧನೆಯ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಕೈಲಾಸದಿಂದ ಗೌರಿ ದೇವಿ ತವರುಮನೆಗೆ ಬಂದಿರುವಳೆಂಬ ಭಾವನೆಯಿಂದ ಪ್ರತಿದಿನ ದೇವಿಗೆ ವಿಶೇಷ ಸಿಹಿ ತಿನಿಸುಗಳನ್ನು ಮಾಡಿ ಅರ್ಪಿಸುತ್ತಾರೆ. ತಂಬಿಟ್ಟು ಬೆಲ್ಲದಾರತಿ, ಮಿಠಾಯಿ, ಎಳ್ಳುಂಡೆ ತಿನಿಸುಗಳನ್ನು ಸಮರ್ಪಿಸಿ ಮಡಿಲಕ್ಕಿ ಕಟ್ಟಿ ವಿಶೇಷ ಪೂಜೆ ನೆರವೇರಿಸಿ ದೇವಿಯನ್ನು ಜಲಾಧಿವಾಸಕ್ಕೆ ಕಳುಹಿಸಿಕೊಡಲಾಗುತ್ತದೆ.

ADVERTISEMENT

ಗ್ರಾಮದ ಪದ್ಮಮ್ಮ ಅವರು ಆಚರಣೆ ಬಗ್ಗೆ ಮಾಹಿತಿ ನೀಡಿ, ‘ಪುರಾತನ ಕಾಲದಿಂದಲೂ ವಿವಿಧ ಆಚರಣೆಗಳು ಗ್ರಾಮಗಳಲ್ಲಿ ನಡೆಯುತ್ತಿವೆ. ದೇವಿಯ ಆರಾಧನೆಯು ತಲೆಮಾರುಗಳಿಂದಲೂ ನಡೆದುಕೊಂಡು ಬಂದಿದೆ.

ಧಾರ್ಮಿಕ ಆಚರಣೆಗಳಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ. ಎಲ್ಲಾ ಕುಟುಂಬಗಳು ಒಗ್ಗೂಡಿ ಗೌರಿ ದೇವಿಯ ಆರಾಧನೆಯಲ್ಲಿ ಪ್ರತಿದಿನ ತೊಡಗಿಕೊಳ್ಳುತ್ತಾರೆ’ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.