ADVERTISEMENT

ಮಲಪ್ರಭಾ ಜಲಾಶಯದಿಂದ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 8:31 IST
Last Updated 19 ಮಾರ್ಚ್ 2014, 8:31 IST

ಬೆಳಗಾವಿ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬಾದಾಮಿ ಹಾಗೂ ಗುಳೇದಗುಡ್ಡ ಪಟ್ಟಣಗಳು ಸೇರಿ ಒಟ್ಟು 40 ಗ್ರಾಮಗಳು ಮತ್ತು ಹುನಗುಂದ ತಾಲ್ಲೂಕಿನ 20 ಗ್ರಾಮಗಳ  ಜನರು, -ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಆಸಂಗಿ ಬ್ಯಾರೇಜ್‌ಗೆ 0.50 ಟಿ.ಎಂ.ಸಿ. ನೀರನ್ನು ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಮಾರ್ಚ್‌ 20 ರ ಬೆಳಿಗ್ಗೆ 8 ಗಂಟೆಯಿಂದ ಬಿಡುಗಡೆಗೊಳಿಸುವಂತೆ ಪ್ರಾದೇಶಿಕ ಆಯುಕ್ತ ವಿ.ಬಿ.ಪಾಟೀಲ ಆದೇಶ ಹೊರಡಿಸಿದ್ದಾರೆ.

ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಬಿಡುಗಡೆಗೊಳಿಸಲಾದ ನೀರನ್ನು ಕೃಷಿಗೆ ಬಳಸಬಾರದು. ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. ನೀರು ಬಿಡುವ ದಿನಗಳಂದು ಹೆಸ್ಕಾಂ ಅಧಿಕಾರಿಗಳು ಮಲಪ್ರಭಾ ನದಿಯ ಎರಡು ಕಡೆಗೆ ಅಳವಡಿಸಿರುವ ರೈತರ ವಿದ್ಯುತ್ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು.

ಮಲಪ್ರಭಾ ನದಿಯಗುಂಟ ಬೆಳಗಾವಿ ಜಿಲ್ಲೆಯಲ್ಲಿ 3 ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ 1,1 ಒಟ್ಟು 14 ಬ್ಯಾರೇಜುಗಳ ಪ್ಲಾಂಕುಗಳನ್ನು ತೆಗೆದು ನೀರು ಸರಾ­ಗ­ವಾಗಿ ಹರಿದು ಆಸಂಗಿ ಬ್ಯಾರೇಜನ್ನು ತಲುಪು­ವಂತೆ ಸಣ್ಣ ನೀರಾವರಿ ಇಲಾಖೆ ಮತ್ತು ಕಂದಾಯ ಇಲಾ­ಖೆಯ ಅಧಿಕಾರಿಗಳು ನೋಡಿಕೊಳ್ಳ­ಬೇಕು. ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು. ಅವಶ್ಯಕತೆ ಕಂಡು ಬಂದಲ್ಲಿ ಸಿಆರ್‌ಪಿಸಿ ಕಲಂ 144 ಅನ್ನು ಜಾರಿಗೊಳಿಸಲು ಸಹ ಕ್ರಮ ಜರುಗಿಸಬಹುದಾಗಿದೆ ಎಂದು ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.