ADVERTISEMENT

ಬೆಳಗಾವಿ | ಬಿಪಿಎಲ್‌ ಕಾರ್ಡ್‌: ಕಾದಿವೆ 24,024 ಕುಟುಂಬ

ವಿವಿಧ ಸೌಲಭ್ಯಕ್ಕೆ ‘ಆಧಾರ’ವಾದ್ದರಿಂದ ಹೆಚ್ಚಿದ ಬೇಡಿಕೆ

ಎಂ.ಮಹೇಶ
Published 10 ಮೇ 2022, 19:30 IST
Last Updated 10 ಮೇ 2022, 19:30 IST
ಪಡಿತರ ಚೀಟಿಗಳು (ಸಾಂದರ್ಭಿಕ ಚಿತ್ರ)
ಪಡಿತರ ಚೀಟಿಗಳು (ಸಾಂದರ್ಭಿಕ ಚಿತ್ರ)   

ಬೆಳಗಾವಿ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರ ತವರು ಜಿಲ್ಲೆಯಲ್ಲೇ ಪಡಿತರ ಚೀಟಿ ವಿತರಣೆ ಕಾರ್ಯ ತ್ವರಿತವಾಗಿ ನಡೆಯುತ್ತಿಲ್ಲ.

ಸರ್ಕಾರದ ವಿವಿಧ ಯೋಜನೆಗಳಲ್ಲಿನ ಸೌಲಭ್ಯಗಳನ್ನು ಪಡೆಯುವುದಕ್ಕೆ ‘ಪ್ರಮುಖ ದಾಖಲೆ’ ಎಂದೇ ಪರಿಗಣಿಸಲಾಗುವ ಬಿಪಿಎಲ್‌ ಪಡಿತರ ಚೀಟಿ ಕೋರಿ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದು, ವಿಲೇವಾರಿ ಕಾರ್ಯದಲ್ಲಿ ವಿಳಂಬವಾಗುತ್ತಿದೆ.

ಕೋವಿಡ್‌ ಸಾಂಕ್ರಾಮಿಕದ ಮೂರು ಅಲೆಗಳು ತಂದೊಡ್ಡಿದ ಸಂಕಷ್ಟದ ಕಾರಣದಿಂದ ಆರ್ಥಿಕವಾಗಿ ಹೊಡೆತ ಅನುಭವಿಸಿರುವ ನೂರಾರು ಮಂದಿ ಸರ್ಕಾರದ ವಿವಿಧ ಯೋಜನೆಗಳಿಂದ ನೆರವು ಪಡೆದುಕೊಳ್ಳುವುದಕ್ಕೆ ಪೂರಕವಾಗಿ ಬಿಪಿಎಲ್‌ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸುತ್ತಿರುವುದು ಕಂಡುಬಂದಿದೆ.

ADVERTISEMENT

ಸಲ್ಲಿಕೆ, ವಿಲೇವಾರಿ ವಿವರ:ಜಿಲ್ಲೆಯಲ್ಲಿ 57,017 ಮಂದಿ ಬಿಪಿಎಲ್‌ ಕಾರ್ಡ್‌ (ಬಡತನ ರೇಖೆಗಿಂತ ಕೆಳಗಿರುವವವರಿಗೆ ನೀಡಲಾಗುವ ಪಡಿತರ ಚೀಟಿ) ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 33,993 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 17,348 ಪಿಎಚ್‌ಎಚ್‌ (ಆದ್ಯತಾ ಕುಟುಂಬಗಳು) ಚೀಟಿಗಳನ್ನು ವಿತರಿಸಲಾಗಿದೆ. 4,429 ಎನ್‌ಪಿಎಚ್‌ಎಚ್‌ (ಆದ್ಯತೇತರ) ಪಡಿತರ ಚೀಟಿಗಳನ್ನು ನೀಡಲಾಗಿದೆ. 24,024 ಅರ್ಜಿಗಳು ಇನ್ನೂ ಬಾಕಿ ಇವೆ. ಅರ್ಜಿ ಹಾಕಿದವರಲ್ಲಿ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ಕೋರಿರುವವರು ಒಳಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 14,57,925 ಪಡಿತರ ಚೀಟಿಗಳಿದ್ದು, 48,44,618 ಮಂದಿ ಫಲಾನುಭವಿಗಳಾಗಿದ್ದಾರೆ.

‘ಎಷ್ಟು ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುತ್ತದೆಯೋ ಆ ಸಂಖ್ಯೆಯಷ್ಟೆ ಪಡಿತರ ಚೀಟಿಗಳನ್ನು ಹೊಸದಾಗಿ ಕೊಡಬೇಕು ಎನ್ನುವ ಇಲಾಖೆಯ ನಿಯಮ ಅಡ್ಡಿಯಾಗಿದೆ’ ಎನ್ನುತ್ತಾರೆ ಅಧಿಕಾರಿಗಳು. ಅಲ್ಲದೇ, ಅನರ್ಹರಿಗೆ ನೀಡಲಾದ ಪಡಿತರ ಚೀಟಿ ರದ್ದುಪಡಿಸುವ ಪ್ರಕ್ರಿಯೆಯು ಅರ್ಹರಿಗೆ ಹೊಸದಾಗಿ ಪಡಿತರ ಚೀಟಿ ವಿತರಣೆ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಪರಿಣಾಮ, ಹೊಸದಾಗಿ ಅರ್ಜಿ ಸಲ್ಲಿಸಿದವರು ಚೀಟಿಗಾಗಿ ಕಾಯುತ್ತಿದ್ದಾರೆ; ಕೆಲವರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ‘ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸುವುದು ಮತ್ತು ಹೊಸದಾಗಿ ಪಡಿತರ ಚೀಟಿಗಳನ್ನು ನೀಡುವುದು ನಿರಂತರ ಪ್ರಕ್ರಿಯೆಯಾಗಿದೆ. ಬಿಪಿಎಲ್‌ ಕಾರ್ಡ್‌ ಕೋರಿ ಅರ್ಜಿ ಸಲ್ಲಿಸಿದವರ ಮನೆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಕ್ಕೆ ಸಮಯ ಬೇಕಾಗುತ್ತದೆ. ಪ್ರಕ್ರಿಯೆ ನಡೆಯುತ್ತಿದೆ. ವಿಳಂಬವಾಗದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ವೈದ್ಯಕೀಯ ತುರ್ತು ಇದ್ದವರಿಗೆ ಕೂಡಲೇ ‍ಪರಿಶೀಲಿಸಿ ಪಡಿತರ ಚೀಟಿ ಒದಗಿಸಲಾಗುತ್ತಿದೆ. ಬಹುತೇಕರು ಒಂದೇ ಚೀಟಿಯಲ್ಲಿ ಎಲ್ಲರ ಹೆಸರು ಸೇರಿಸಲು ಬಯಸುತ್ತಿಲ್ಲ. ಪ್ರತ್ಯೇಕವಾಗಿ ತಮ್ಮ ಕುಟುಂಬಕ್ಕೊಂದು ಚೀಟಿ ಇರಲೆಂದು ಬಯಸುತ್ತಿದ್ದಾರೆ. ಹೀಗಾಗಿ, ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ’ ಎನ್ನುತ್ತಾರೆ ಅವರು.

ಹಲವು ಸೌಲಭ್ಯಕ್ಕಾಗಿ...
ಬಿಪಿಎಲ್‌ ಪಡಿತರ ಚೀಟಿಯು ಈಗ ನ್ಯಾಯಬೆಲೆ ಅಂಗಡಿಗಳಲ್ಲಿ ‘ಅನ್ಯಭಾಗ್ಯ’ ಮೊದಲಾದ ಯೋಜನೆಗಳಲ್ಲಿ ಅಕ್ಕಿ ಪಡೆಯುವುದಕ್ಕಷ್ಟೆ ಸೀಮಿತವಾಗಿಲ್ಲ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಕಾರ್ಡ್‌ ಪಡೆದರೆ ಬಿಪಿಎಲ್‌ ಚೀಟಿ ಹೊಂದಿದವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ದೊರೆಯುತ್ತದೆ. ಎಪಿಎಲ್‌ ಕಾರ್ಡ್‌ ಇದ್ದವರಿಗೆ ರಿಯಾಯಿತಿ ನೀಡಲಾಗುತ್ತದೆ. ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ ಪಡೆದುಕೊಳ್ಳಲು, ವಿಳಾಸ ಬದಲಾವಣೆಗೆ ದಾಖಲೆಯಾಗಿ ಪರಿಣಿಸಲಾಗುತ್ತದೆ. ಹೀಗಾಗಿ, ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಆದರೆ, ಅರ್ಜಿದಾರರಲ್ಲಿ ಅರ್ಹರನ್ನು ಗುರುತಿಸಿ ಚೀಟಿ ವಿತರಿಸುವ ಕಾರ್ಯವು ನಿರೀಕ್ಷಿತ ವೇಗದಲ್ಲಿ ನಡೆಯದಿರುವುದು ಅರ್ಜಿದಾರರರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಕ್ರಿಯೆಯಲ್ಲಿ
ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವ ಪ್ರಕ್ರಿಯೆಯಲ್ಲಿ ನಾವೇ ಮುಂದಿದ್ದೇವೆ. ಚೀಟಿ ರದ್ದುಪಡಿಸುವುದರೊಂದಿಗೆ ದಂಡವನ್ನೂ ವಸೂಲಿ ಮಾಡುತ್ತಿದ್ದೇವೆ.
–ಚನ್ನಬಸಪ್ಪ ಕೊಡ್ಲಿ, ಜಂಟಿ ನಿರ್ದೇಶಕ, ಆಹಾರ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.