ADVERTISEMENT

ಬುದ್ಧಿಮಾಂದ್ಯ ಮಗುವಿನ ಹತ್ಯೆ; ವೈದ್ಯ ದಂಪತಿ ಸೇರಿ ಮೂವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 16:00 IST
Last Updated 6 ಜುಲೈ 2020, 16:00 IST

ಚಿಕ್ಕೋಡಿ: ಅಂಗವಿಕಲ ಹಾಗೂ ಬುದ್ಧಿಮಾಂದ್ಯವಾಗಿದ್ದ ಮೂರು ವರ್ಷದ ಗಂಡು ಮಗುವನ್ನು ಹತ್ಯೆ ಮಾಡಿದ ಆರೋಪದ ಮೇಲೆ ಕುಟುಂಬದ ಸದಸ್ಯ ಸೇರಿದಂತೆ ವೈದ್ಯ ದಂಪತಿಯ ಮೇಲೆ ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಹಿರೇಕೋಡಿ ಗ್ರಾಮದ ರಾಮು ಚೌಗಲಾ ಹಾಗೂ ವೈದ್ಯ ದಂಪತಿಯಾದ ಡಾ.ಮಾರುತಿ ಮುಸಳೆ ಹಾಗೂ ಪತ್ನಿ ರೇಖಾ ಮುಸಳೆ ಅವರ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಕಿ ವೈಜುಶಾ ಅಡಕೆ ದೂರು ನೀಡಿದ್ದಾರೆ.

ಏನಿದು ಘಟನೆ?: ರಾಮು ಚೌಗಲಾ ಅವರ ಕುಟುಂಬದ ಮಹಿಳೆಯೊಬ್ಬರಿಗೆ ವಿವಾಹಪೂರ್ವ ಗಂಡು ಮಗುವೊಂದು ಜನಿಸಿತ್ತು. ಆ ಮಗು ಹುಟ್ಟಿನಿಂದಲೇ ಅಂಗವಿಕಲ ಮತ್ತು ಬುದ್ದಿಮಾಂದ್ಯವಾಗಿತ್ತು. ಈ ವಿಷಯ ಗೊತ್ತಿದ್ದರೂ ರಾಮು ಚೌಗಲಾ ಅವರುವೈದ್ಯ ದಂಪತಿ ಜೊತೆಗೂಡಿ ಹುಬ್ಬಳ್ಳಿಯ ಸುವರ್ಣಲತಾ ಗದಿಗೆಪ್ಪಗೌಡರ ಅವರಿಗೆ ಕಾನೂನುಬಾಹಿರವಾಗಿ ದತ್ತು ನೀಡಿದ್ದರು. ಅವರಿಂದ ₹ 2 ಲಕ್ಷ ಹಣ ಪಡೆದುಕೊಂಡಿದ್ದರು.

ADVERTISEMENT

ಮಗುವಿನ ಆರೋಗ್ಯದ ಬಗ್ಗೆ ನಿಜಾಂಶ ತಿಳಿದ ಸುವರ್ಣಲತಾ ಅವರು ಮಗುವನ್ನು ರಾಮು ಅವರಿಗೆ ಮರಳಿ ನೀಡಿದ್ದರು. ಆಗ ರಾಮು ಅವರು ಮಗುವನ್ನು ಹಿರೇಕೋಡಿಗೆ ತೆಗೆದುಕೊಂಡು ಹೋಗಿ ಸಾಯಿಸಿ, ಯಾರಿಗೂ ಗೊತ್ತಾಗದಂತೆ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕೋಡಿ ಪೊಲೀಸರು ತನಿಖೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.