ADVERTISEMENT

5 ವರ್ಷಗಳಲ್ಲಿ 400 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆ ಗುರಿ- ಅಶ್ವತ್ಥನಾರಾಯಣ

ಬೆಳಗಾವಿ ಸಿಇಒ ಶೃಂಗಸಭೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 14:16 IST
Last Updated 5 ಜನವರಿ 2022, 14:16 IST
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ)ನ ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ‘ಸಿಇಒಗಳ ದುಂಡುಮೇಜಿನ ಶೃಂಗಸಭೆ’ಯಲ್ಲಿ ಐಟಿ, ಬಿಟಿ ಮತ್ತು ಕೌಶಲ ಅಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿದರು. ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಐಟಿ‌ ನಿರ್ದೇಶಕಿ‌ ಮೀನಾ ನಾಗರಾಜ, ವಿದ್ಯುನ್ಮಾನ ಮತ್ತು ಐಟಿ, ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಕೆ-ಡಿಇಎಂ ಮುಖ್ಯಸ್ಥ ಬಿ.ವಿ. ನಾಯ್ಡು ಮತ್ತು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಇದ್ದಾರೆ
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ)ನ ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ‘ಸಿಇಒಗಳ ದುಂಡುಮೇಜಿನ ಶೃಂಗಸಭೆ’ಯಲ್ಲಿ ಐಟಿ, ಬಿಟಿ ಮತ್ತು ಕೌಶಲ ಅಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿದರು. ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಐಟಿ‌ ನಿರ್ದೇಶಕಿ‌ ಮೀನಾ ನಾಗರಾಜ, ವಿದ್ಯುನ್ಮಾನ ಮತ್ತು ಐಟಿ, ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಕೆ-ಡಿಇಎಂ ಮುಖ್ಯಸ್ಥ ಬಿ.ವಿ. ನಾಯ್ಡು ಮತ್ತು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಇದ್ದಾರೆ   

ಬೆಳಗಾವಿ: ‘ರಾಜ್ಯದ ಎಲ್ಲ ಭಾಗಗಳಲ್ಲೂ ಸಮಾನವಾಗಿ ಉದ್ಯಮಗಳನ್ನು ಬೆಳೆಸುವ ಮೂಲಕ ಮುಂದಿನ 5 ವರ್ಷಗಳಲ್ಲಿ 400 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆ ಬೆಳೆಸುವ ಗುರಿ ನಮ್ಮ ಸರ್ಕಾರದ್ದಾಗಿದೆ’ ಎಂದು ಎಂದು ಐಟಿ, ಬಿಟಿ ಮತ್ತು ಕೌಶಲ ಅಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ)ನ ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಅಂಗವಾಗಿ ಇಲ್ಲಿ ಬುಧವಾರ ಏರ್ಪಡಿಸಿದ್ದ ‘ಸಿಇಒಗಳ ದುಂಡುಮೇಜಿನ ಶೃಂಗಸಭೆ’ಯಲ್ಲಿ ಅವರು ಮಾತನಾಡಿದರು.

‘ಬೆಳಗಾವಿಯು ಉದ್ಯಮಶೀಲತೆ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಹಿತಕರ ಹವಾಮಾನಕ್ಕೆ ಹೆಸರಾಗಿದೆ. ಇಲ್ಲಿ ಉದ್ದಿಮೆಗಳನ್ನು ಸಮೃದ್ಧವಾಗಿ ಪೂರ್ಣ ಪ್ರಮಾಣದಲ್ಲಿ ಬೆಳೆಸಲಾಗುವುದು’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಘೋಷಿಸಿದ್ದು, ರಾಜ್ಯದಲ್ಲಿ ಇದು ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಜಾರಿಗೆ ಬರುತ್ತಿದೆ. ಈಗಾಗಲೇ ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಮತ್ತು ಪದವಿ ಹಂತಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆ ಅಳವಡಿಸಿಕೊಳ್ಳಲಾಗಿದೆ. ಉದ್ದಿಮೆಗಳ ಬೇಡಿಕೆಗೆ ತಕ್ಕಂತೆ ಕೌಶಲಪೂರ್ಣ ಮಾನವ ಸಂಪನ್ಮೂಲ ಹೇರಳವಾಗಿ ಲಭ್ಯವಾಗಲಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಅವು ಇಲ್ಲದ ಕಡೆಗಳಲ್ಲಿ ಖಾಸಗಿ ಕಾಲೇಜುಗಳನ್ನು ವಿಶ್ವ ಮಟ್ಟಕ್ಕೆ ಸುಧಾರಿಸುವ ‘ಸೂಪರ್-30’ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಎಂಜಿನಿಯರಿಂಗ್ ಕಾಲೇಜುಗಳು ವಿಶ್ವದ ಯಾವುದೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಮತ್ತು ಉದ್ದಿಮೆಗಳೊಂದಿಗೆ ಒಡಂಬಡಿಕೆಗೆ ಉತ್ತೇಜಿಸಲಾಗುತ್ತಿದೆ. ಇದು ಸಮಾಜದಲ್ಲಿ ಪರಿವರ್ತನೆ ತರಲಿದ್ದು, ಜಾಗತಿಕ ಮಟ್ಟದ ನಾಯಕತ್ವ ಸೃಷ್ಟಿಸಲಿದೆ’ ಎಂದು ವಿವರಿಸಿದರು.

‘ಬೆಳಗಾವಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಐಐಎಸ್ಸಿ ಮತ್ತು ಐಐಟಿಗಳ ಮಟ್ಟಕ್ಕೆ ಬೆಳೆಸಿ, ಉತ್ಕೃಷ್ಟ (ಆಂಕರ್) ಸಂಸ್ಥೆಯನ್ನಾಗಿ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದ ಎಲ್ಲ ಭಾಗಗಳೂ ಸಮಾನವಾಗಿ ಬೆಳವಣಿಗೆ ಸಾಧಿಸಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ‘ಬಿಯಾಂಡ್ ಬೆಂಗಳೂರು’ ಉಪಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಉದ್ದಿಮೆಗಳು ಬೆಂಗಳೂರಿನಲ್ಲಿ ಮಾತ್ರವೇ ನೆಲೆಗೊಳ್ಳಬಾರದು ಎನ್ನುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರು ಕ್ಲಸ್ಟರ್‌ಗಳನ್ನು ಮಾಡಲಾಗಿದ್ದು, ಬೆಳಗಾವಿಯಲ್ಲೂ ಉದ್ಯಮಗಳ ಸ್ಥಾಪನೆಗೆ ಎಲ್ಲ ನೆರವನ್ನೂ ನೀಡಲಾಗುವುದು’ ಎಂದರು.

ವಿದ್ಯುನ್ಮಾನ ಮತ್ತು ಐಟಿ, ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಐಟಿ‌ ನಿರ್ದೇಶಕಿ‌ ಮೀನಾ ನಾಗರಾಜ, ಕೆ-ಡಿಇಎಂ ಮುಖ್ಯಸ್ಥ ಬಿ.ವಿ. ನಾಯ್ಡು, ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಉದ್ಯಮಿಗಳಾದ ಸುನೀಲ್ ದೇಶಪಾಂಡೆ, ಜಯಂತ್ ಹುಂಬರವಾಡಿ, ರಾಜೇಂದ್ರ ಬೆಳಗಾಂವ್ಕರ್‌, ಚೈತನ್ಯ ಕುಲಕರ್ಣಿ, ಎನ್.ಜಿ. ಸುಬ್ರಹ್ಮಣ್ಯಂ, ವೆಂಕಟೇಶ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.