ADVERTISEMENT

₹927.40 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ: ಸಚಿವ ಸುರೇಶ ಅಂಗಡಿ

ಬೆಳಗಾವಿ-ಕಿತ್ತೂರು–ಧಾರವಾಡ ರೈಲು ಮಾರ್ಗ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 13:22 IST
Last Updated 7 ಸೆಪ್ಟೆಂಬರ್ 2020, 13:22 IST
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ   

ಬೆಳಗಾವಿ: ‘ಬೆಳಗಾವಿ-ಕಿತ್ತೂರು–ಧಾರವಾಡ ನಡುವೆ ನೇರ ರೈಲು ಮಾರ್ಗ ನಿರ್ಮಿಸಲು ₹ 927.40 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ದೊರೆತಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘73 ಕಿ.ಮೀ. ಉದ್ದದ ಈ ಯೋಜನೆ ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ನಮ್ಮ ಸರ್ಕಾರ ಸ್ಪಂದಿಸಿದೆ. ಬೆಳಗಾವಿ, ದೇಸೂರು, ಕಣವಿಕರವಿನಕೊಪ್ಪ, ಬಾಗೇವಾಡಿ, ಎಂ.ಕೆ. ಹುಬ್ಬಳ್ಳಿ, ಹುಲಿಕಟ್ಟಿ, ಕಿತ್ತೂರು, ತೇಗೂರು, ಮಮ್ಮಿಗಟ್ಟಿ, ಕ್ಯಾರಕೊಪ್ಪ ಮೂಲಕ ಧಾರವಾಡ ನಿಲ್ದಾಣವನ್ನು ಈ ಮಾರ್ಗ ಹೊಂದಿದೆ’ ಎಂದು ಮಾಹಿತಿ ನೀಡಿದರು.

‘ಯೋಜನೆ ಅನುಷ್ಠಾನಗೊಂಡಲ್ಲಿ ಪ್ರಮುಖ ನಗರಗಳಾದ ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಗೆ ಸುಗಮ ಮತ್ತು ಕಡಿಮೆ ಸಮಯದಲ್ಲಿ ಸಂಪರ್ಕ ಸಾಧ್ಯವಾಗಲಿದೆ. ರೈಲಿನಲ್ಲಿ ಸುತ್ತಿ ಬಳಸಿ ಧಾರವಾಡ ತಲುಪುವುದು ತಪ್ಪಲಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೊಳ್ಳಲಿರುವ ಬೆಳಗಾವಿ–ಕಿತ್ತೂರು–ಧಾರವಾಡ ಕೈಗಾರಿಕಾ ಕಾರಿಡಾರ್‌ ಬೆಳವಣಿಗೆಗೂ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ADVERTISEMENT

‘2013–14ರಲ್ಲಿ ಮಾರ್ಗದ ಸಮೀಕ್ಷೆ ನಡೆದಿತ್ತಾದರೂ ಆಗ ಪ್ರಸ್ತಾವನೆಗೆ ಅನುಮೋದನೆ ದೊರೆತಿರಲಿಲ್ಲ. ಹೀಗಾಗಿ, ಹೊಸದಾಗಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಕೇವಲ 2 ವರ್ಷಗಳ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಂಡಿರುವುದು ದಾಖಲೆಯಾಗಿದೆ. ಈ ಹೊಸ ಮಾರ್ಗಕ್ಕೆ ಉಚಿತವಾಗಿ ಭೂಮಿ ಮತ್ತು ಶೇ 50ರಷ್ಟು ನಿರ್ಮಾಣ ವೆಚ್ಚ ನೀಡಲು ಬದ್ಧವಾಗಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.